ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.19): ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮುನ್ನೆಚ್ಚರಿಕೆ, ಸೋಂಕಿತರ ಚಿಕಿತ್ಸೆ, ಸಿಬ್ಬಂದಿಗೆ ತರಬೇತಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ತಜ್ಞ ವೈದ್ಯರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡಿದೆ.

ಕೊರೋನಾ ಭೀತಿ: ಕೋರ್ಟ್‌ಗೆ ಕಕ್ಷಿದಾರರಿಗೆ ಪ್ರವೇಶವಿಲ್ಲ..!

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಬಿಬಿಎಂಪಿ ಈಗ ಇನ್ನಷ್ಟುಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಮುಖವಾಗಿ ಕೊರೋನಾ ಸೋಂಕಿತ ಪ್ರಕರಣಗಳ ಪತ್ತೆಯಾಗುತ್ತಿದಂತೆ ಆ ಪ್ರದೇಶದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸೋಂಕಿತರನ್ನು ಸೂಕ್ತ ಆಸ್ಪತ್ರೆಗೆ ರವಾನೆ, ಕೊರೋನಾ ವೈರಸ್‌ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಸೇರಿದಂತೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಗೆ ಸೂಕ್ತ ತರಬೇತಿಗಾಗಿ ಸರ್ವೇಲೆನ್ಸ್‌ ಟೀಂ (ಕಣ್ಗಾವಲು ಪಡೆ), ಕಂಟೈನ್‌ಮೆಂಟ್‌ ಟೀಂ (ಅಪಾಯಕಾರಿ ಸನ್ನಿವೇಶ ನಿಭಾಯಿಸುವ ತಂಡ), ಮಾಹಿತಿ ಮತ್ತು ವಿದ್ಯುನ್ಮಾನ ಕೋಶ, ತರಬೇತಿ ತಂಡ ಸೇರಿದಂತೆ ವಿವಿಧ ತಂಡಗಳನ್ನು ಬಿಬಿಎಂಪಿ ರಚಿಸಿದೆ.

ಕೊರೋನಾ ಸೋಂಕು ಶಂಕಿತ ಆತ್ಮಹತ್ಯೆ!

ಪ್ರತಿಯೊಂದು ತಂಡ ಒಬ್ಬ ತಜ್ಞ ವೈದ್ಯರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡದ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಆಂದೋಲನ, ಎಚ್‌ಐವಿ ಸೇರಿದಂತೆ ವಿವಿಧ ವಿಶೇಷ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಈ ತಂಡಗಳಿಗೆ ಸೇರಿಸಲಾಗಿದೆ. ಪ್ರತಿಯೊಂದು ತಂಡದಲ್ಲಿ ನಾಲ್ಕರಿಂದ ಐದು ಮಂದಿ ಇರಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ‘ಕನ್ನಡಪ್ರಭ‘ಕ್ಕೆ ಮಾಹಿತಿ ನೀಡಿದ್ದಾರೆ.

ವಲಯಕ್ಕೊಂದು ರಾರ‍ಯಪಿಡ್‌ ಟೀಂ:

ಎಂಟು ವಲಯಗಳಿಗೆ ಒಂದರಂತೆ ರಾರ‍ಯಪಿಡ್‌ ರೆಸ್ಪಾನ್ಸ್‌ ಟೀಂ (ಕ್ಷಿಪ್ರ ಸ್ಪಂದನಾ ತಂಡ) ರಚನೆ ಮಾಡಲಾಗುವುದು. ಈ ತಂಡ ಆಯಾ ವಲಯದ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.ಈ ತಂಡ ತಮ್ಮ ವಲಯದಲ್ಲಿ ಕೊರೋನಾ ಸೋಂಕು ಪ್ರಕರಣ ದೃಢಪಟ್ಟರೆ ಆ ಪ್ರದೇಶದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದಾರೆ. ಜತೆಗೆ ಆ ಪ್ರದೇಶದಲ್ಲಿ 14 ದಿನ ಎಲ್ಲ ಕುಟುಂಬ ಸದಸ್ಯರ ಮೇಲೆ ನಿಗಾ ವಹಿಸಲಿದೆ. ಅವಶ್ಯವಿದ್ದರೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಯಾವ ತಂಡ ಏನು ಮಾಡಲಿದೆ?

1.ಕಣ್ಗಾವಲು ಪಡೆ (ಸರ್ವೇಲೆನ್ಸ್‌ ಟೀಂ)

ಕೊರೋನಾ ಸೋಂಕು ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಹಾಗೂ ಪರೋಕ್ಷ ಸಂಪರ್ಕ ಪತ್ತೆ ಮಾಡುವುದು. ಸೋಂಕಿತ ವ್ಯಕ್ತಿ ಯಾವ ಹೋಟೆಲ್‌, ಕಚೇರಿಗೆ ಭೇಟಿ ನೀಡಿದ್ದಾನೆ, ಯಾವ ವಾಹನದಲ್ಲಿ ಪ್ರಯಾಣ ಮಾಡಿದ್ದಾನೆ, ಎಲ್ಲಿಂದ ಯಾವಾಗ ನಗರಕ್ಕೆ ಬಂದಿದ್ದಾನೆ ಎಂಬ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಈ ತಂಡ ಮಾಡಲಿದೆ.

2.ಕಂಟೈನ್‌ಮೆಂಟ್‌ ಟೀಂ

ಕಂಟೈನ್‌ಮೆಂಟ್‌ ಟೀಂ (ಅಪಾಯಕಾರಿ ಸನ್ನಿವೇಶ ನಿಭಾಯಿಸುವ ತಂಡ) ಪಾಲಿಕೆಯ ಎಂಟು ವಲಯದಲ್ಲಿ ರಚನೆ ಮಾಡಿ ರಾರ‍ಯಪಿಡ್‌ ರೆಸ್ಪಾನ್ಸ್‌ ಟೀಂಗಳೊಂದಿಗೆ ಸಮನ್ವಯದೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡ ವಲಯದ ರಾರ‍ಯಪಿಡ್‌ ರೆಸ್ಪಾನ್ಸ್‌ ಟೀಂಗೆ ಸೂಕ್ತ ನಿರ್ದೇಶನ ನೀಡಲಿದೆ. ಸೋಂಕು ಕಾಣಿಸಿಕೊಂಡವರನ್ನು ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ, ಆ ಪ್ರದೇಶದಲ್ಲಿ ಬಗ್ಗೆ ನಿಗಾ ವಹಿಸುವ ಕೆಲಸವನ್ನು ಈ ತಂಡ ಮಾಡಲಿದೆ.

3.ಮಾಹಿತಿ ಮತ್ತು ವಿದ್ಯುನ್ಮಾನ ಕೋಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ದೃಢಪಟ್ಟಕೊರೋನಾ ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದು, ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಪ್ರಚಾರ ಮಾಡುವುದು, ಸುಳ್ಳು ವದಂತಿ ಕಡಿವಾಣ, ಬಿಬಿಎಂಪಿ ಹಾಗೂ ಸರ್ಕಾರದ ಸಲಹೆ ಸೂಚನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವುದು ಸೇರಿದಂತೆ ಇನ್ನಿತರ ಕಾರ್ಯಗಳನ್ನು ಈ ತಂಡ ಮಾಡಲಿದೆ.

4. ತರಬೇತಿ ತಂಡ

ಕೊರೋನಾ ಸೋಂಕಿತರಿಗೆ ಹೇಗೆ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನೀಡುವ ಮುನ್ನ ವೈದ್ಯರು ಮತ್ತು ನರ್ಸ್‌ಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಈ ತಂಡ ತರಬೇತಿ ನೀಡಲಿದೆ.

10 ಸಾವಿರ ವಿದ್ಯಾರ್ಥಿ ನರ್ಸ್‌ ಪಡೆ ತಯಾರಿ?

ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗ ನಗರದ ವಿವಿಧ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ಕೊರೋನಾ ಚಿಕಿತ್ಸೆಗೆ ಬಳಕೆಗೆ ಚಿಂತನೆ ನಡೆಸುತ್ತಿದೆ. ಈಗಾಗಲೇ ನಗರದ ನರ್ಸಿಂಗ್‌ ಕಾಲೇಜುಗಳ ಪಟ್ಟಿಸಿದ್ಧಪಡಿಸಿಕೊಂಡಿದ್ದು, ಸುಮಾರು 10 ಸಾವಿರ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೋನಾ ಚಿಕಿತ್ಸೆ ಬಗ್ಗೆ ತರಬೇತಿ ನೀಡಲು ತಯಾರಿ ಮಾಡಿಕೊಂಡಿದೆ. ಇನ್ನು ನಗರದ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ತಮ್ಮನ್ನು ಬಳಕೆ ಮಾಡಿಕೊಳ್ಳುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದು, ಎಲ್ಲರಿಗೂ ತರಬೇತಿ ನೀಡಲು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

ಇತರೆ ಇಲಾಖೆಯಿಂದ ಸಿಬ್ಬಂದಿ ನೆರವು

ಇನ್ನು ಬಿಬಿಎಂಪಿಯ ಆರೋಗ್ಯ ವಿಭಾಗದಲ್ಲಿರುವ ಕಿರಿಯ, ಹಿರಿಯ, ಮುಖ್ಯ ಆರೋಗ್ಯಾಧಿಕಾರಿಗಳನ್ನು ಈಗಾಗಲೇ ಪತ್ತೆಯಾದ ಸೋಂಕಿತರ ಪ್ರಾಥಮಿಕ ಸಂಪರ್ಕ, ಪರೋಕ್ಷ ಸಂಪರ್ಕ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದರಿಂದ ಹೋಟೆಲ್‌, ರೆಸ್ಟೋರೆಂಟ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಘನತ್ಯಾಜ್ಯ ವಿಭಾಗ ಹಾಗೂ ಇತರೆ ವಿಭಾಗದಲ್ಲಿರುವ 100 ಅಧಿಕಾರಿ-ಸಿಬ್ಬಂದಿಯನ್ನು ಆರೋಗ್ಯ ವಿಭಾಗಕ್ಕೆ ನಿಯೋಜಿಸಲಾಗುವುದು ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಮಾಹಿತಿ ನೀಡಿದ್ದಾರೆ.