ಬೆಂಗಳೂರಿನ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಕ್ಕೆ ತಯಾರಿ: ಬಿಬಿಎಂಪಿ ಆಯುಕ್ತ
ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಹಿನ್ನೆಲೆ, ಟೌನ್‌ಹಾಲ್ ಬಳಿಯಿರುವ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಿಸಿಡಲು ಸಕಲ ಸಿದ್ಧತೆ| ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಸಿಸಿ ಕ್ಯಾಮರಾ ಅಳವಡಿಕೆ| ಕೇಂದ್ರಕ್ಕೆ ಮತ್ತಷ್ಟು ಬಿಗಿ ಭದ್ರತೆ ಒದಗಿಸಲು ಕ್ರಮ: ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್|
ಬೆಂಗಳೂರು(ನ.20): ಕೇಂದ್ರ ಸರ್ಕಾರ ನೀಡಲಿರುವ ಕೋವಿಡ್ ಲಸಿಕೆಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪಾಲಿಕೆಯ ದಾಸಪ್ಪ ಆಸ್ಪತ್ರೆಯಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇರುವುದರಿಂದ ಕೋವಿಡ್ ಲಸಿಕೆಯನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಅಂತೆಯೇ ಈಗಾಗಲೇ ಪಾಲಿಕೆ ಬಳಿ 180 ರೆಫ್ರಿಜರೇಟರ್ ಹಾಗೂ 150 ಡಿಪ್ ಫ್ರಿಜರ್ ವ್ಯವಸ್ಥೆ ಮಾಡಲಾಗಿದೆ.
"
ಸಂಗ್ರಹಿಸಲಾಗುವ ಲಸಿಕೆಯನ್ನು ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರ, 28 ಹೆರಿಗೆ ಆಸ್ಪತ್ರೆ, 6 ರೆಫರಲ್ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿಗೆ ವ್ಯವಸ್ಥಿತವಾಗಿ ಸಾಗಿಸಲು ಸಿದ್ಧತೆಗಳು ಮುಂದುವರಿದಿವೆ.
ಮೊದಲ ಹಂತದಲ್ಲಿ ಈ ಕೊರೋನಾ ಲಸಿಕೆಯನ್ನು 95000 ಕೊರೋನಾ ಹೋರಾಟಗಾರರಿಗೆ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕೊರೋನಾ ಹೋರಾಟಗಾರರ ವಿವರಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆಯಲಾಗಿದೆ. ಅಂತೆಯೆ ಲಸಿಕೆ ಹಾಕಲು ಸಿಬ್ಬಂದಿ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಆಕ್ಸ್‌ಫರ್ಡ್‌ನ ಲಸಿಕೆ ವೃದ್ಧರಿಗೆ ರಾಮಬಾಣ!
ದಾಸಪ್ಪ ಆಸ್ಪತ್ರೆಯಲ್ಲಿರುವ ಕೋಲ್ಡ್ ಸ್ಟೋರೆಜ್‌ನಲ್ಲಿ ಲಸಿಕೆ ದಾಸ್ತಾನು ಮಾಡಲಿದ್ದು, ಈ ಕೇಂದ್ರಕ್ಕೆ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಬಿಗಿ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪೊಲಿಯೋ ಮಾದರಿಯಲ್ಲಿ ಕೊರೋನಾ ಲಸಿಕೆ
ಶೀಘ್ರದಲ್ಲೇ ಕೊರೋನಾ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲಸಿಕೆ ಸಂಗ್ರಹ, ಹಂಚಿಕೆ ಸೇರಿದಂತೆ ಪೊಲಿಯೋ ಲಸಿಕೆ ಮಾದರಿಯಲ್ಲಿ ಕೊರೋನಾ ಲಸಿಕೆ ಹಾಕಲು ಈಗಾಗಲೇ ಬಿಬಿಎಂಪಿ ಸಿದ್ಧತೆ ಆರಂಭಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.