ನೀವು ಹೊರಮಾವು ಕೆರೆ ಒತ್ತುವರಿ ವಿಡಿಯೋ ನೋಡಿದ್ದೀರಾ? ಹಾಗಾದ್ರೆ ಬಿಬಿಎಂಪಿ ಸ್ಪಷ್ಟೀಕರಣ ನೋಡಲೇಬೇಕು!
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ಕೆರೆಯ ಒತ್ತುವರಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊ ಕ್ಲಿಪ್‌ಗೆ ಬಿಬಿಎಂಪಿ ವಿಶೇಷ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಕೆರೆಯ ಜಾಗದಲ್ಲಿ ವಾಹನ ಓಡಾಟ ಮತ್ತು ವಿಲ್ಲಾಗಳಿಗೆ ರಸ್ತೆ ನಿರ್ಮಾಣ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಇದು ಕೆರೆಯ ಅಭಿವೃದ್ಧಿ ಕಾಮಗಾರಿ ಎಂದು ತಿಳಿಸಿದ್ದಾರೆ.

ಬೆಂಗಳೂರು (ಫೆ.19): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ಕೆರೆಯ ಒತ್ತುವರಿ ಹಾಗೂ ಕಾಮಗಾರಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಪ್ ಮೂಲಕ ವೀಡಿಯೋ ಕ್ಲಿಪ್ ಒಂದು ಹರಿದಾಡುತ್ತಿದೆ. ಇದಕ್ಕೆ ಬಿಬಿಎಂಪಿ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವಿಧಾನ ಸಭಾಕ್ಷೇತ್ರದ ಹುಳಿಮಾವು ಕೆರೆಯ ಒತ್ತುವರಿ ಹಾಗೂ ಕಾಮಗಾರಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಪ್ ಮೂಲಕ ಸುಳ್ಳು ವೀಡಿಯೋ ಕ್ಲಿಪ್ ಹರಿದಾಡುತ್ತಿದೆ. ಹಲವಾರು ದಿನಗಳಿಂದ ವ್ಯಾಟ್ಸಪ್ ಮುಖಾಂತರ ಹುಳಿಮಾವು ಕೆರೆಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸದರಿ ವಿಡಿಯೋದಲ್ಲಿ ಕೆರೆಯ ಜಾಗದಲ್ಲಿ ವಾಹನಗಳು ಓಡಾಡುತ್ತಿದ್ದು, ಕೆರೆಯನ್ನು ಮತ್ತಷ್ಟು ಒತ್ತುವರಿ ಮಾಡಿ ವಿಲ್ಲಾಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಲಾಗಿದೆ. ಆದರೆ, ಇದು ಹುಳಿಮಾವು ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಳ ಹರಿವಿನ ಮೂಲಕ ಕೆರೆಗೆ ಸೇರುವ ನೀರನ್ನು ಮೊದಲನೇ ಹಂತದಲ್ಲಿ ಶುದ್ದೀಕರಿಸಲು ನಿರ್ಮಿಸಲಾಗುತ್ತಿರುವ ವೆಟ್ ಲ್ಯಾಂಡ್ ಕಾಮಗಾರಿಯಾಗಿರುತ್ತದೆ.
ಇದನ್ನೂ ಓದಿ: ಅತಿಯಾದ ಜಾಹೀರಾತು, ಸಮಯ ವ್ಯರ್ಥಗೊಳಿಸಿದ PVR-INOX ವಿರುದ್ಧ ಕೇಸ್ ಹಾಕಿ ಗೆದ್ದ ಬೆಂಗಳೂರಿನ ವ್ಯಕ್ತಿಗೆ ಸಿಕ್ಕ ಹಣವೆಷ್ಟು?
ಮುಂದುವರೆದು, ಇದೇ ವಿಡಿಯೋದಲ್ಲಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ದೃಶ್ಯಗಳನ್ನು ತೋರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೆರೆಯ ಯಾವುದೇ ಒತ್ತುವರಿಗೆ ಅವಕಾಶ ಮಾಡಿಕೊಟ್ಟಿರುವುದಿಲ್ಲ. ಈ ಹಿಂದೆ ಆಗಿರಬಹುದಾದ ಒತ್ತುವರಿಗಳ ಬಗ್ಗೆ ಘನ ಉಚ್ಚ ನ್ಯಾಯಾಲಯ ಪ್ರಕರಣದ ಸಂಖ್ಯೆಡಬ್ಲ್ಯೂಪಿ ನಂ.39401/2014 ದಿನಾಂಕ: 04.09.2023ರ ಆದೇಶದಲ್ಲಿ ನೀಡಿರುವ ನಿರ್ದೇಶನದಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಬೆಂಗಳೂರು ದಕ್ಷಿಣ ತಾಲ್ಲೂಕು ರವರ ಕಛೇರಿಯಿಂದ ಅಳತೆ ಕಾರ್ಯ ಪೂರ್ಣಗೊಳಿಸಿ ಸರ್ವೆ ನಕ್ಷೆ ಸಿದ್ಧಪಡಿಸಿ ಸಲ್ಲಿಸಿದ್ದು, ಕೆರೆಯ ಒತ್ತುವರಿಗಳನ್ನು ಗುರುತಿಸಿಕೊಟ್ಟ ನಂತರ ನಿಯಮಾನುಸಾರ ಒತ್ತುವರಿಗಳನ್ನು ತೆರವುಗೊಳಿಸಲು ವಲಯ ಅಧಿಕಾರಿಗಳಿಂದ ಕ್ರಮವಹಿಸಲಾಗುತ್ತಿದೆ.
ಹುಳಿಮಾವು ಕೆರೆಯ ಕಾಮಗಾರಿಗಳಿಗೆ ಹಾಗೂ ಒತ್ತುವರಿಗಳಿಗೆ ಸಂಬಂಧಿಸಿದಂತೆ, ಅಂರ್ತಜಾಲದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದು, ಆ ರೀತಿಯ ಸುಳ್ಳು ಸುದ್ದಿಗಳನ್ನು ಹರಡದಂತೆ ನಾಗರಿಕರಲ್ಲಿ ಕೋರಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ಸ್ಪಷ್ಟೀಕರಣ ನೀಡಿರುತ್ತಾರೆ.