'ಜನತಾ ಕರ್ಫ್ಯೂನಿಂದ ಸೋಂಕು ನಿಯಂತ್ರಣ'
ಅನಾವಶ್ಯಕವಾಗಿ ಹೊರಗೆ ಬರದೆ ಸಹಕರಿಸಿ| ಕರ್ಫ್ಯೂ ನಿಯಮ ಉಲ್ಲಂಘಿಸದಂತೆ ಕಟ್ಟುನಿಟ್ಟಾಗಿ ಕ್ರಮ| ಸೋಂಕು ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ| ಜನರು ಕೂಡ ಇಂತಹ ಸಂದಿಗ್ಧ ಸಮಯದಲ್ಲಿ ಬಿಬಿಎಂಪಿಯೊಂದಿಗೆ ಕೈಜೋಡಿಸಬೇಕು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮನವಿ|
ಬೆಂಗಳೂರು(ಏ.28): ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂನಿಂದ ಹತ್ತು ದಿನಗಳಲ್ಲಿಯೇ ಕೋವಿಡ್-19 ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಸಾರ್ವಜನಿಕರು ಕರ್ಫ್ಯೂ ಸಂದರ್ಭದಲ್ಲಿ ಅನಾವಶ್ಯಕವಾಗಿ ಹೊರಗೆ ಬರದೆ ಸೋಂಕು ತಡೆಗಟ್ಟಲು ಸಹಕರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮನವಿ ಮಾಡಿದ್ದಾರೆ.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸದಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುತ್ತೇವೆ. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ ಪಡುತ್ತೇವೆ. ಜನರು ಕೂಡ ಇಂತಹ ಸಂದಿಗ್ಧ ಸಮಯದಲ್ಲಿ ಬಿಬಿಎಂಪಿಯೊಂದಿಗೆ ಕೈಜೋಡಿಸಬೇಕು ಎಂದರು.
‘ಸ್ವಯಂ ಸೇವಕರಾಗಲು ಪಾಲಿಕೆಯಿಂದ ಅವಕಾಶ’
ಈಗಾಗಲೇ ಹಲವು ವೈದರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಅವರ ಸೇವೆ ಪಡೆಯಲಾಗುತ್ತಿದೆ. ಇತರರು ಕೂಡ ಇಂತಹ ಪರಿಸ್ಥಿತಿಯಲ್ಲಿ ಸೇವೆಗೆ ಮುಂದಾದರೆ ಒಳ್ಳೆಯದು. ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು ನಮಗೆ ಇನ್ನಷ್ಟು ವೈದ್ಯರು, ಶುಶ್ರೂಕರು ಹಾಗೂ ಕೋವಿಡ್ ಆರೈಕೆ ಕೇಂದ್ರ ನಿರ್ವಹಣೆಗೆ ಕೌನ್ಸಿಲಿಂಗ್, ಹೋಂ ಐಸೋಲೇಷನ್, ಸೋಂಕಿತರ ಸಂಪರ್ಕಿತರ ಪತ್ತೆ, ಸ್ಯಾಂಪಲ್ ಸಂಗ್ರಹಿಸಲು ಹಾಗೂ ಇತರೆ ಸೇವೆಗಳಿಗೆ ಸ್ವಯಂ ಸೇವಕರು ಬೇಕಾಗಿದ್ದಾರೆ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.
14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಹಾಸಿಗೆ ಸಮಸ್ಯೆ ಸುಧಾರಣೆ
ಖಾಸಗಿ ಆಸ್ಪತ್ರೆಗಳಿಂದ ಶೇ.50ರಷ್ಟು ಹಾಸಿಗೆಗಳನ್ನು ಪಡೆದುಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದೇವೆ. ಹಾಸಿಗೆ ಕೊಡದ ಆಸ್ಪತ್ರೆಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಆಸ್ಪತ್ರೆಗಳು ಹಾಸಿಗೆ ನೀಡುತ್ತಿದೆ. ಇದರಿಂದಾಗಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚು ಆಗಲಿದೆ. ಆಸ್ಪತ್ರೆಗಳಿಂದ ಹಾಸಿಗೆ ಪಡೆಯಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
1912ಗೆ ಅಧಿಕ ಕರೆ
ದಿನೇ ದಿನೇ ಕೋವಿಡ್ ಸಹಾಯವಾಣಿ 1912 ಸಂಖ್ಯೆಗೆ ಅಧಿಕ ಕರೆಗಳು ಬರುತ್ತಿವೆ. ಇತ್ತೀಚೆಗೆ ಒಟ್ಟು 400 ಲೈನ್ ಏಕ ಕಾಲದಲ್ಲಿ ಸಂಪರ್ಕಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ನಮ್ಮ ಸಹಾಯವಾಣಿಯ ಮೂಲಕ ಸಾಮಾನ್ಯ ಹಾಸಿಗೆಗಳು ಮತ್ತು ಆಕ್ಸಿಜನ್ ಹಾಸಿಗೆಗಳನ್ನು ಪಡೆಯಬಹುದು. ಅದಕ್ಕೆ ಅನುಕೂಲವಾಗುವಂತೆ ಕಂಟ್ರೋಲ್ ರೂಮ್‌ಗಳಿಂದ ಹಾಸಿಗೆಗಳನ್ನು ಒದಗಿಸಲು ವಿಕೇಂದ್ರೀಕೃತ ವ್ಯವಸ್ಥೆ ಮಾಡಿದ್ದು, ಪಾಲಿಕೆ ವ್ಯಾಪ್ತಿಯ ಎಂಟು ವಾರ್ ರೂಮ್‌ಗಳಿಗೆ ಅಧಿಕಾರ ನೀಡಲಾಗಿದೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.
ಶೀಘ್ರ ಐಸಿಯು ಆಸ್ಪತ್ರೆ ಸ್ಥಾಪನೆ
ಐಸಿಯು ವೆಂಟಿಲೇಟರ್ ಹಾಸಿಗೆಗಳ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ಐಸಿಯು ಬೆಡ್‌ಗಳ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿದೆ. ಐಸಿಯು ಬೆಡ್‌ಗಳ ಹೊಸ ಆಸ್ಪತ್ರೆಯನ್ನು ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವಗುಪ್ತಾ ತಿಳಿಸಿದ್ದಾರೆ.