Asianet Suvarna News Asianet Suvarna News

'ಸಹಾಯವಾಣಿ ಮೂಲಕ ಬೆಡ್‌ ಪಡೆದರೆ ಸಮಸ್ಯೆ ಇಲ್ಲ'

ಕೋವಿಡ್‌ ಪಾಸಿಟಿವ್‌ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವವರ ಸಂಖ್ಯೆ ಹೆಚ್ಚು| ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು, ಇದರಿಂದ ಐಎಲ್‌ಐ, ಸಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಐಸಿಯುನಲ್ಲಿ ಹಾಸಿಗೆ ಒದಗಿಸಲು ಸಹಕಾರಿ| ಸಮಸ್ಯೆ ಅರಿತು ಸಹಕರಿಸಬೇಕು ಎಂದ ಗೌರವ್‌ ಗುಪ್ತಾ| 

BBMP Chief Commissioner Gourav Gupta Talks Over Coronavirus grg
Author
Bengaluru, First Published Apr 22, 2021, 7:47 AM IST

ಬೆಂಗಳೂರು(ಏ.22): ಕೋವಿಡ್‌ ಪಾಸಿಟಿವ್‌ ಆದ ಕೂಡಲೇ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ, ಶೇಕಡ 80ರಷ್ಟು ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು, ಸಾಮಾನ್ಯ ಹಾಸಿಗೆಗಳ ಕೊರತೆ ಇಲ್ಲ. ಸಹಾಯವಾಣಿ ಮೂಲಕ ಹಾಸಿಗೆ ಅಲಾಟ್‌ ಮಾಡಿಕೊಂಡು ಹೋದರೆ ಯಾವುದೇ ಸಮಸ್ಯೆ ಇಲ್ಲ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಪಾಸಿಟಿವ್‌ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು. ಇದರಿಂದ ಐಎಲ್‌ಐ, ಸಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಐಸಿಯುನಲ್ಲಿ ಹಾಸಿಗೆ ಒದಗಿಸಲು ಸಹಕಾರಿಯಾಗುತ್ತದೆ. ಸಮಸ್ಯೆಯನ್ನು ಅರಿತು ಸಹಕರಿಸಬೇಕು ಎಂದರು.

ಸೋಂಕು ಹೆಚ್ಚಳ ಆಗುತ್ತಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿಯೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಶೇ.50ರಷ್ಟು ಹಾಸಿಗೆ ಮೀಸಲಿಡುವಂತೆ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ನೀಡಲಾಗಿದೆ. ಸೋಂಕಿತರಿಗೆ ಶೇ.50ರಷ್ಟು ಹಾಸಿಗೆ ಮೀಸಲಿಡದೆ ಹೋದಲ್ಲಿ, ಆ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ. ಸುವರ್ಣ ಸುರಕ್ಷಾ ವತಿಯಿಂದ 7 ಸಾವಿರ ಹಾಸಿಗೆ ಪಡೆಯಲಾಗಿದೆ. ಎರಡ್ಮೂರು ದಿನಗಳಲ್ಲಿ 7 ಸಾವಿರ ಇರುವ ಹಾಸಿಗೆಯನ್ನು 10ರಿಂದ 11 ಸಾವಿರಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಪಾಲಿಕೆಯ ಎಂಟು ವಲಯಗಳಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಅಗತ್ಯವಿದ್ದವರು ಸಹಾಯವಾಣಿ ಮೂಲಕ ಹಾಸಿಗೆ ನಿಗದಿಪಡಿಸಿಕೊಂಡು ಆಸ್ಪತ್ರೆಗಳಲ್ಲಿ ದಾಖಲು ಆಗಬಹುದು ಎಂದರು.

ಬೆಂಗ್ಳೂರಲ್ಲಿ ಕೊರೋನಾರ್ಭಟ: ಬೆಡ್‌ ಸಂಖ್ಯೆ ಹೆಚ್ಚಿಸಲು ಗೌರವ್‌ ಗುಪ್ತಾ ಸೂಚನೆ

ಚಿತಾಗಾರಗಳಿಗೆ ಸಿಬ್ಬಂದಿ ನೇಮಕ

ನಗರದ ಹೊರ ಭಾಗದಿಂದಲೂ ಕೋವಿಡ್‌ ಶವಗಳು ಬರುತ್ತಿರುವುದರಿಂದ ಪಾಲಿಕೆ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಹೊರಗಿನ ಶವಗಳನ್ನು ಅಲ್ಲಿಯೇ ವಿಲೇವಾರಿ ಮಾಡಿದರೆ ಒತ್ತಡ ಕಡಿಮೆಯಾಗುವ ಜತೆಗೆ ವಿದ್ಯುತ್‌ ಚಿತಾಗಾರಗಳ ಮುಂದೆ ದಟ್ಟಣೆಯೂ ಕಡಿಮೆಯಾಗಿ ತಾಸುಗಟ್ಟಲೆ ಕಾಯುವುದು ನಿಲ್ಲಲಿದೆ. ವಿದ್ಯುತ್‌ ಚಿತಾಗಾರಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಲು ಕ್ರಮಕೈಗೊಂಡಿದ್ದೇವೆ ಎಂದು ಗೌರವ್‌ ಗುಪ್ತಾ ಹೇಳಿದ್ದಾರೆ. 

8 ಮಾರುಕಟ್ಟೆಗಳ ಸ್ಥಳಾಂತರ

ಏ.23ರಿಂದ ಬೃಹತ್‌ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ನಗರದ ವ್ಯಾಪಾರಿಗಳು ಸಮಯ ಕೇಳಿದ್ದು, ಪಾಲಿಕೆ ಎಲ್ಲ ಭಾಗಗಳ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿ ವಿಕೇಂದ್ರೀಕರಣ ಮಾಡಲಿದ್ದೇವೆ. ನಗರದ ಎಂಟು ವಲಯಗಳಲ್ಲಿ ಮಾರುಕಟ್ಟೆ ವಿಕೇಂದ್ರೀಕರಣ ಮಾಡಲಿದ್ದು, ಸಾರ್ವಜನಿಕ ಮೈದಾನಗಳಲ್ಲಿ ಮಾರುಕಟ್ಟೆಗೆ ಅವಕಾಶ ನೀಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಿದ್ದೇವೆ. ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಇದು ಸಹಕಾರಿಯಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಸಾವಿನ ಅಂಕಿ-ಅಂಶ ಮುಚ್ಚಿಟ್ಟಿಲ್ಲ

ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂಕಿಅಂಶವನ್ನು ಮುಚ್ಚಿಟ್ಟಿಲ್ಲ. ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆಸ್ಪತ್ರೆಗಳು ನೀಡುವ ಮರಣ ಪ್ರಮಾಣ ಪತ್ರದ ಆಧಾರದ ಮೇಲೆ ಘೋಷಣೆ ಮಾಡುತ್ತಿದ್ದೇವೆ. ಆಸ್ಪತ್ರೆಗಳು, ಶವಾಗಾರ ಎರಡನ್ನೂ ಹೋಲಿಕೆ ಮಾಡಲಾಗುತ್ತದೆ. ಎರಡರಲ್ಲೂ ಮರಣ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿದ ಬಳಿಕವೇ ಸಾವಿನ ಅಂಕಿ ಅಂಶ ಘೋಷಿಸಲಾಗುತ್ತದೆ ಎಂದು ಗೌರವ್‌ ಗುಪ್ತಾ ತಿಳಿಸಿದ್ದಾರೆ.
 

Follow Us:
Download App:
  • android
  • ios