ಬೆಂಗ್ಳೂರಲ್ಲಿ ಕೊರೋನಾರ್ಭಟ: ಬೆಡ್ ಸಂಖ್ಯೆ ಹೆಚ್ಚಿಸಲು ಗೌರವ್ ಗುಪ್ತಾ ಸೂಚನೆ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಭೇಟಿ| ಹೊರಗಿನಿಂದ ಬಂದವರಿಗೆ ಪರೀಕ್ಷೆ, ಐಸೋಲೇಷನ್| ಹೆಚ್ಚು ಜನಸಂದಣಿ ಜಾಗ ಪರಿಶೀಲಿಸಿ ಸೀಲ್ ಮಾಡಿ|
ಬೆಂಗಳೂರು(ಏ.07): ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ಹೆಚ್ಚಿಸಬೇಕು ಹಾಗೂ ಕೋವಿಡ್ ಸೋಂಕಿತರಿಗಾಗಿ ಮೀಸಲಿಟ್ಟಿರುವ ಹಾಸಿಗೆ ಸಂಖ್ಯೆ ಹೆಚ್ಚಿಸುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಮೂರು ಕೇಂದ್ರಗಳಿದ್ದು, ಪ್ರತಿನಿತ್ಯ 100 ರಿಂದ 120 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಜತೆಗೆ ನಿತ್ಯ ಸಾವಿರಾರು ಮಂದಿ ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅವರಲ್ಲಿ ಲಸಿಕೆ ಪಡೆಯಲು ಅರ್ಹರಿರುವವರಿಗೆ ಲಸಿಕೆ ಪಡೆಯುವ ಬಗ್ಗೆ ಅರಿವು ಮೂಡಿಸಿ 300ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿಯೇ ಮೀಸಲಿಡಲಾಗಿತ್ತು. ಇದೀಗ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 150 ಹಾಸಿಗೆಗಳನ್ನು ಮೀಸಲಿರಿಸಿದ್ದು, ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ಆದ್ದರಿಂದ ಹಾಸಿಗೆ ಸಂಖ್ಯೆ ಹೆಚ್ಚಳ ಮಾಡಲು ಸೂಚನೆ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಪಶ್ಚಿಮ ವಲಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಉಪಸ್ಥಿತರಿದ್ದರು.
ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ ಏ.6ರಂದು ಹೊಸ ದಾಖಲೆ ಬರೆದ ಕೊರೋನಾ 2ನೇ ಅಲೆ!
ಹೆಚ್ಚು ಜನಸಂದಣಿ ಜಾಗ ಪರಿಶೀಲಿಸಿ ಸೀಲ್ ಮಾಡಿ
ನಗರದಲ್ಲಿ ಈಗಾಗಲೇ ಹಜ್ ಭವನ ಹಾಗೂ ಎಚ್‌ಎಎಲ್‌ನಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ. ರೋಗಲಕ್ಷಣಗಳು ಇಲ್ಲದಿರುವ ಕೋವಿಡ್ ಸೋಂಕಿತರನ್ನು ಐಸೋಲೇಟ್ ಮಾಡಲು ಎಲ್ಲ ವಲಯಗಳಲ್ಲಿ ಎರಡ್ಮೂರು ಕಡೆ 50 ಹಾಸಿಗೆ ಸಾಮರ್ಥ್ಯವಿರುವ ಹೋಟೆಲ್ ಮತ್ತು ಕಟ್ಟಡಗಳನ್ನು ಗುರುತಿಸಿ ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ನಗರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದೆ ಹೆಚ್ಚು ಜನಸಂದಣಿಯಾಗುವ ಜಾಗಗಳನ್ನು ಪರಿಶೀಲಿಸಿ ಸೀಲ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಹೊರಗಿನಿಂದ ಬಂದವರಿಗೆ ಪರೀಕ್ಷೆ, ಐಸೋಲೇಷನ್
ಹೊರ ರಾಜ್ಯಗಳಿಂದ ವಿಮಾನ ಬಸ್ ಹಾಗೂ ರೈಲಿನ ಮೂಲಕ ಬರುವವರ ಮೇಲೆ ನಿಗಾವಹಿಸಿ ಪರೀಕ್ಷೆ ಹೆಚ್ಚಿಸಲಾಗುವುದು, ಈ ರೀತಿ ಬಂದವರನ್ನು ಸ್ವಯಂ ಐಸೋಲೇಟ್ ಮಾಡಿ ನಂತರ ಕೋವಿಡ್ ಪರೀಕ್ಷೆ ಮಾಡುವ ಬಗ್ಗೆ ಸಲಹೆ ಬಂದಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.