ಬೆ.11.30ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರ ಸಮಕ್ಷಮ ಮಂಡನೆ, ಪಾಲಿಕೆ ಸಂಪನ್ಮೂಲ ಕ್ರೋಢೀಕರಣ ಒತ್ತು, 3 ಬಾರಿ ಬಜೆಟ್ ಪ್ರತಿ ಮುದ್ರಣ ಬದಲು.
ಬೆಂಗಳೂರು(ಮಾ.02): ಬಿಬಿಎಂಪಿಯ 2023-24ನೇ ಆಯವ್ಯಯ ಮಂಡನೆಗೆ ಗುರುವಾರ ಮುಹೂರ್ತ ನಿಗದಿಯಾಗಿದ್ದು, ಬರೋಬ್ಬರಿ 11 ಸಾವಿರ ಕೋಟಿ ರು. ಗಾತ್ರದ ಆಯವ್ಯಯ ಮಂಡನೆಯಾಗುವ ಸಾಧ್ಯತೆ ಇದೆ. ಪುರಭವನದಲ್ಲಿ ಮಂಡನೆ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದ್ದು, ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರ ಸಮಕ್ಷಮದಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯ ರಾಮ ರಾಯಪುರ ಅವರು 2023-24ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ.
ಕಳೆದ ಎರಡು ತಿಂಗಳಿನಿಂದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆ ಸೂಚನೆಯಡಿ 2023-24ನೇ ಸಾಲಿನ ಆಯವ್ಯಯ ಸಿದ್ಧಪಡಿಸಲಾಗಿದೆ.
ಬೆಂಗ್ಳೂರಿನ ಧೂಳು ಸಮಸ್ಯೆ ನಿವಾರಿಸಲು ಬರಲಿವೆ ಸ್ಟ್ರಿಂಕ್ಲರ್ ವಾಹನ..!
ಪಾದಚಾರಿ ಮಾರ್ಗಕ್ಕೆ ಒತ್ತು?: ನಗರದಲ್ಲಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಪಾದಚಾರಿಗಳು ಸುರಕ್ಷಿತ ಸಂಚಾರ ವ್ಯವಸ್ಥೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟು ಒತ್ತು ನೀಡುವ ನಿರೀಕ್ಷೆ ಇದೆ. ಅದರೊಂದಿಗೆ ಸ್ಕೈವಾಕ್, ಪಾದಚಾರಿ ಸುರಂಗ ಮಾರ್ಗಗಳ ನಿರ್ವಹಣೆ ಮತ್ತು ಬಳಕೆಗೆ ಯೋಗ್ಯವಾಗುವಂತೆ ಮಾಡುವುದಕ್ಕೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದಲ್ಲದೇ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆ ಸುಧಾರಣೆ, ಪಾಲಿಕೆ ಸಂಪನ್ಮೂಲ ಕ್ರೋಢೀಕರಣ ಒತ್ತು ನೀಡುವುದು, ನಾಗರಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುವುದು ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ನಿರೀಕ್ಷೆ ಇದೆ.
ಸರ್ಕಾರಿ ಅನುದಾನ ಒಳಗೊಂಡ ಬಜೆಟ್: ರಾಜ್ಯ ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9 ಸಾವಿರ ಕೋಟಿ ರು. ಅಧಿಕ ಮೊತ್ತದ ಅನುದಾನವನ್ನು 2023-24 ಸಾಲಿನ ಆಯವ್ಯಯದಲ್ಲಿ ನೀಡಿದೆ. ಈ ಪೈಕಿ 6 ಸಾವಿರ ಕೋಟಿ ರು.ಯೋಜನೆಗಳನ್ನು ಬಿಬಿಎಂಪಿಯಿಂದ ಅನುಷ್ಠಾನಗೊಳ್ಳಬೇಕಿದೆ. ಆ ಎಲ್ಲ ಯೋಜನೆಗಳನ್ನು ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯದಲ್ಲಿ ಮರು ಪ್ರಸ್ತಾಪವಾಗಲಿವೆ.
ವಾರ್ಡ್‌ಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ?
ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲ. ಈ ಬಾರಿಯ ಬಿಬಿಎಂಪಿಯ ಬಜೆಟ್‌ನಲ್ಲಿ ಎಲ್ಲ 243 ವಾರ್ಡ್‌ಗಳಿಗೆ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮತ್ತು ಅಗತ್ಯ ಲಸಿಕೆ, ಔಷಧಿ ಪೂರೈಕೆ ಬಗ್ಗೆ ಮಹತ್ವದ ಕಾರ್ಯಕ್ರಮ ಘೋಷಣೆ ಆಗುವ ಸಾಧ್ಯತೆ ಇದೆ. ಇದಲ್ಲದೇ, ಸದ್ಯ ಅಸ್ಥಿತ್ವದಲ್ಲಿರುವ ಹೆರಿಗೆ ಆಸ್ಪತ್ರೆ ಹಾಗೂ ರೆಫರಲ್ ಆಸ್ಪತ್ರೆಗಳನ್ನು ದಿನ 24 ಗಂಟೆ ಕಾರ್ಯಾಚರಣೆ ನಡೆಸುವುದಕ್ಕೆ ಬೇಕಾದ ವೈದ್ಯರು, ನರ್ಸ್, ಪ್ರಯೋಗಾಲಯ ತಂತ್ರಜ್ಞರು, ತಜ್ಞ ವೈದ್ಯರು, ಸಹಾಯಕ ಸಿಬ್ಬಂದಿ ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕಕ್ಕೆ 20 ಕೋಟಿ ರು. ವರೆಗೆ ಮೀಸಲಿಡುವುದಕ್ಕೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಇದೆ.
ಆನ್‌ಲೈನ್‌ನಲ್ಲಿ ಲೈವ್ ವೀಕ್ಷಿಸಿ
ಪುರಭವನದಲ್ಲಿ ಗುರುವಾರ ಮಂಡನೆ ಆಗುವ ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯವನ್ನು ಆನ್‌ಲೈನ್ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ https://bbmp.gov.in ಜತೆಗೆ, ಬಿಬಿಎಂಪಿ ಮುಖ್ಯ ಆಯುಕ್ತರ ಫೇಸ್‌ಬುಕ್, ಟ್ವೀಟರ್ ಮತ್ತು ಯುಟ್ಯೂಬ್ https://www.youtube.com/watch?v=HyYKHmwOU6s ನಲ್ಲಿ ಸಾರ್ವಜನಿಕರು ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
Bengaluru: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆ ಹಂಚಿಕೆ ಹಗರಣ: BBMP ಅಧಿಕಾರಿಗಳಿಂದ ಕೋಟ್ಯಂತರ ಲೂಟಿ.!
ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹಾಸ್ಟೆಲ್
ಬಿಬಿಎಂಪಿಯು ಸುಮಾರು 5 ಸಾವಿರ ಕೋಟಿ ರು. ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿಯನ್ನು ಈ ಬಾರಿಯ ಬಜೆಟ್ ಹಾಕಿಕೊಳ್ಳುವ ಸಾಧ್ಯತೆ ಇದ್ದು, ಈ ಐದು ಸಾವಿರ ಕೋಟಿ ರು.ಗಳಲ್ಲಿ ಹೊಸದಾಗಿ ರಚನೆಯಾದ ವಾರ್ಡ್‌ಗಳ ಕಚೇರಿ ನಿರ್ಮಾಣಕ್ಕೆ ತಲಾ 1 ಕೋಟಿ ರು., ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ಉದ್ಯೋಗ ಅರಸಿ ಬರುವ ಯುವತಿ ಹಾಗೂ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಹಾಸ್ಟೆಲ್ ವ್ಯವಸ್ಥೆ, ನಗರದ ನಿರಾಶ್ರಿತ ವೃದ್ಧರಿಗೆ ಶ್ರವಣ ಕುಮಾರ ಹೆಸರಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 50 ಕೋಟಿ ರು. ಸೇರಿದಂತೆ ಮೊದಲಾದ ಕಾರ್ಯಕ್ರಮ ಗಳನ್ನು ಬಿಬಿಎಂಪಿಯ ಅನುದಾನದಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
3 ಬಾರಿ ಮುದ್ರಣ ಬದಲು
ಅಧಿಕಾರಿಗಳು ಅಂತಿಮಗೊಳಿಸಿದ ಬಜೆಟ್ ಪುಸಕ್ತ ಮುದ್ರಣ ತಡೆ ಹಿಡಿದು ಸಿಎಂ ಸೂಚನೆಯಂತೆ ಹೆಚ್ಚುವರಿ ಯೋಜನೆ ಸೇರ್ಪಡೆಗೆ ಮಾಡಿ ಮುದ್ರಣಕ್ಕೆ ಅನುಮತಿ ನೀಡಲಾಗುತ್ತಿತ್ತು. ಮತ್ತೆ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮತ್ತೆ ಹೆಚ್ಚುವರಿ ಸುಮಾರು 8 ರಿಂದ 10 ಪುಟಗಳನ್ನು ಸೇರಿಸುವುದಕ್ಕೆ ಸೂಚನೆ ನೀಡಲಾಗಿತ್ತು. ಹೀಗಾಗಿ, ಬಜೆಟ್ ಪುಸಕ್ತ ಮುದ್ರಣ ಬರೋಬ್ಬರಿ ಮೂರು ಬಾರಿ ಬದಲಾವಣೆ ಮಾಡಬೇಕಾಯಿತು.
ಪಾಯಿಂಟರ್:
* ರಾಜಧಾನಿ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ
9 ಸಾವಿರ ಕೋಟಿ ರು.ಅನುದಾನ ಮೀಸಲು
* ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ
ಪೂರಕ ಬಜೆಟ್ ನಿರೀಕ್ಷೆ
* ಸುಮಾರು 5 ಸಾವಿರ ಕೋಟಿ ರು.
ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ಗುರಿ
