ಬೆಂಗಳೂರು: ಗುತ್ತಿಗೆದಾರರಿಗೆ ಬಿಬಿಎಂಪಿ ಅಡ್ವಾನ್ಸ್ ಪೇಮೆಂಟ್..!
ಹಣದ ಸಮಸ್ಯೆ ಎದುರಿಸುತ್ತಿರುವ ಬಿಬಿಎಂಪಿ, ಕಾಮಗಾರಿ ಮುಗಿಸಿರುವ ಗುತ್ತಿಗೆದಾರರಿಗೆ ಜೇಷ್ಠತೆಗೆ ಕಾಯದೆ ಹಣದ ವ್ಯವಸ್ಥೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಪಾಲಿಕೆ ಒಪ್ಪಂದ, ಮುಂಗಡವಾಗಿ ಪಡೆಯುವ ಹಣಕ್ಕೆ ಗುತ್ತಿಗೆದಾರರೇ ಬಡ್ಡಿ ಪಾವತಿಸಬೇಕು.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಏ.16): ಕಾಮಗಾರಿ ಪೂರ್ಣಗೊಳಿಸಿ ಬಿಲ್ ಪಾವತಿದಾಗಿ ಪರದಾಡುತ್ತಿರುವ ಬಿಬಿಎಂಪಿಯ ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ನೀಡುವ ಉದ್ದೇಶದಿಂದ ‘ಆಪ್ಷನಲ್ ವೆಂಡರ್‌ಬಿಲ್ ಡಿಸ್‌ಕೌಟಿಂಗ್ ಸಿಸ್ಟಮ್’ (ಓವಿಡಿಎಸ್) ಪಾಲಿಕೆ ಪರಿಚಯಿಸಿದೆ.
ಬಿಬಿಎಂಪಿ ಕಾಮಗಾರಿ ನಡೆಸಿದ ಗುತ್ತಿಗೆದಾರರು ಬಿಲ್ ಪಾವತಿಗೆ ಎರಡ್ಮೂರು ವರ್ಷ ಕಾಯಬೇಕಾದ ಸ್ಥಿತಿ ಇದೆ. ಈ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರ ಮಾಡುವ ಉದ್ದೇಶದಿಂದ ಬಿಬಿಎಂಪಿಯು .400 ಕೋಟಿ ಮೊತ್ತದ ‘ಓವಿಡಿಎಸ್’ ಯೋಜನೆ ಜಾರಿಗೊಳಿಸಿದೆ. ಅದಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ಕೊಡಲಾಗುತ್ತದೆ. ಇದರಿಂದ ಗುತ್ತಿಗೆದಾರರಿಗೆ ನಿಗದಿತ ಅವಧಿಗಿಂತ ಮೊದಲೇ ಹಣ ದೊರೆಯಲಿದೆ.
ಶೇ.8.25 ಬಡ್ಡಿ:
ಬಿಬಿಎಂಪಿಯು ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ನೀಡಲಾಗುವ ಮುಂಗಡ ಹಣಕ್ಕೆ ಗುತ್ತಿಗೆದಾರರೇ ಬಡ್ಡಿ ಪಾವತಿಸಬೇಕಾಗುತ್ತದೆ. ಬಿಬಿಎಂಪಿಯು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ವಾರ್ಷಿಕ ಶೇ.8.25 ದರದಲ್ಲಿ ಪಾವತಿಸಬೇಕು. ಈ ಪದ್ಧತಿಯಲ್ಲಿ ಗುತ್ತಿಗೆದಾರರಿಗೆ ಬ್ಯಾಂಕ್ ನೀಡುವ ಹಣವನ್ನು ಆರು ತಿಂಗಳ ಅವಧಿಯಲ್ಲಿ ಬಿಬಿಎಂಪಿ ಬ್ಯಾಂಕ್‌ಗೆ ಮರು ಪಾವತಿ ಮಾಡಲಿದೆ.
ಓವಿಡಿಎಸ್ ಕಡ್ಡಾಯವಲ್ಲ
ಈ ಪದ್ಧತಿಯಡಿ ಮುಂಗಡವಾಗಿ ಹಣ ಪಡೆಯುವುದು ಕಡ್ಡಾಯವಲ್ಲ. ಆಸಕ್ತರು ಹಾಗೂ ಅಗತ್ಯ ಇರುವ ಗುತ್ತಿಗೆದಾರರು ಪಡೆಯಬಹುದಾಗಿದೆ. ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಬಡ್ಡಿ ಪಡೆದು ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಈ ಪದ್ಧತಿ ಅನುಕೂಲವಾಗಲಿದೆ. ಜತೆಗೆ, ಬೇರೆ ಕಾಮಗಾರಿ ಕೈಗೊಳ್ಳುವುದಕ್ಕೆ ಗುತ್ತಿಗೆದಾರರಿಗೆ ಬಂಡವಾಳ ಲಭ್ಯವಾಗಲಿದೆ.
ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಜನರು ಸಲ್ಲಿಸುವ ದೂರಿನ ಬಗ್ಗೆ ಎಚ್ಚರ: ಹೈಕೋರ್ಟ್
ಇನ್ನು ನಿರ್ವಹಣಾ ಕಾಮಗಾರಿ ಬಿಲ್‌ಗೆ ಓವಿಡಿಎಸ್ ಅನ್ವಯವಾಗುವುದಿಲ್ಲ. ಮುಂಗಡ ಹಣ ಪಡೆದ ಕಾಮಗಾರಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನಾ ಆಕ್ಷೇಪಣೆ, ವಸೂಲಾತಿಗಳು, ನ್ಯೂನತೆಗಳು, ನ್ಯಾಯಾಲಯ ತನಿಖೆ, ದೂರು ಕೇಳಿ ಬಂದರೆ ಗುತ್ತಿಗೆದಾರರನ್ನು ಹೊಣೆ ಪಡೆಸಲಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಏ.1ರಿಂದ ಯೋಜನೆ ಜಾರಿಗೊಳಿಸಲಾಗಿದೆ. ಅದಕ್ಕಾಗಿ ಆಸಕ್ತ ಗುತ್ತಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಗುತ್ತಿಗೆದಾರರು 2021ರ ಏಪ್ರಿಲ್‌ನಿಂದ ಸೆಪ್ಟಂಬರ್ 2021ರ ಅವಧಿಯಲ್ಲಿ ಕಾಮಗಾರಿಯ ಬಿಲ್ ರಿಜಿಸ್ಟರ್ ಆಗಿರುವ ಅರ್ಹ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಮುಂಗಡ ಹಣ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾಕಷ್ಟುಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿಗೆ ಹಲವು ಹಳ್ಳಿ ಸೇರಿಸಿದ್ದಕ್ಕೆ ಈಗ ಡಾಂಬರೀಕರಣ: ಎಚ್.ಡಿ.ಕುಮಾರಸ್ವಾಮಿ
2,200 ಕೋಟಿ ಬಾಕಿ ಬಿಲ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಿದ 2021ರ ಮಾಚ್‌ರ್‍ವರೆಗೆ ಬಿಲ್ ಸಲ್ಲಿಕೆಯಾದ ಗುತ್ತಿಗೆದಾರರಿಗೆ ಈಗಾಗಲೇ ಬಿಲ್ ಪಾವತಿ ಮಾಡಲಾಗಿದೆ. 2021ರ ಏಪ್ರಿಲ್‌ನಿಂದ ಈವರೆಗೆ ಪೂರ್ಣಗೊಂಡ ಕಾಮಗಾರಿಯ ಬಿಲ್ ಪಾವತಿ ಬಾಕಿ ಇದೆ. 2021-22ರ ಅವಧಿಯ .1,450 ಕೋಟಿ ಹಾಗೂ 2022-23ನೇ ಸಾಲಿನ .750 ಕೋಟಿ ಸೇರಿದಂತೆ .2200 ಕೋಟಿ ಬಾಕಿ ಬಿಲ್ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಿಬಿಎಂಪಿಯ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಓವಿಡಿಎಸ್ ಜಾರಿಗೊಳಿಸಲಾಗಿದೆ. ಓವಿಡಿಎಸ್ ಅಡಿ ಹಣ ಪಡೆಯದ ಗುತ್ತಿಗೆದಾರರಿಗೆ ಜೇಷ್ಠತೆ ಅನುಗುಣವಾಗಿಯೇ ಬಿಲ್ ಪಾವತಿಸಲಾಗುವುದು. ಇದರಿಂದ ಬಿಬಿಎಂಪಿಗೆ ಬಾಕಿ ಬಿಲ್ ಪಾವತಿಯ ಒತ್ತಡ ಕಡಿಮೆ ಆಗಲಿದೆ ಅಂತ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.