ಬೆಂಗಳೂರು(ಅ.18): ಬಿಬಿಎಂಪಿ ಒಡೆತನದ 6828 ಆಸ್ತಿಗಳ ಸಂರಕ್ಷಣೆ ಮತ್ತು ಹೆಚ್ಚು ಸಂಪನ್ಮೂಲ ಕ್ರೋಢಿಕರಣಕ್ಕೆ ಕ್ರಮ ವಹಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಆಸ್ತಿ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಸ್ತಿ ವಿಭಾಗ, ಜಾಹೀರಾತು ವಿಭಾಗ ಹಾಗೂ ಟ್ರಾಫಿಕ್‌ ಎಂಜಿನಿಯರಿಂಗ್‌ ಸೆಲ್‌ (ಟಿಇಸಿ) ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಗರದ ಪಾಲಿಕೆ ಒಡೆತನದ 6,828 ಆಸ್ತಿಗಳನ್ನು ಸರ್ವೇ ಮಾಡಿ ಸಂರಕ್ಷಣೆಗೆ ತಂತಿ ಬೇಲಿ ಹಾಕಬೇಕು. ಪಾಲಿಕೆ ಆಸ್ತಿಗಳಿಂದ ಹೆಚ್ಚು ಸಂಪನ್ಮೂಲ ಕ್ರೋಢಿಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಬಿಬಿಎಂಪಿ ಆಸ್ತಿ ವಿಭಾಗದ ಉಪ ಆಯುಕ್ತ ಹರೀಶ್‌ ನಾಯ್ಕ್‌, ಪಾಲಿಕೆಯ ಒಟ್ಟು 6,828 ಆಸ್ತಿಗಳ ಪೈಕಿ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಈ ಪೈಕಿ ಗುತ್ತಿಗೆ ಅವಧಿ ಮುಕ್ತಾಯವಾಗಿರುವ 156 ಆಸ್ತಿಗಳನ್ನು ಪಾಲಿಕೆ ವಶಕ್ಕೆ ತೆಗೆದುಕೊಳ್ಳಲು ಕೈಗೊಳ್ಳಲಾಗಿದೆ. ‘ಪಾಲಿಕೆ ಭೂಮಿ’ ಸಾಫ್ಟ್‌ ವೇರ್‌ ಅಭಿವೃದ್ಧಿ ಪಡಿಸಲಾಗಿದ್ದು, ಎಲ್ಲ ಆಸ್ತಿಗಳಿಗೂ ಸ್ವತ್ತಿನ ಗುರುತಿನ ಸಂಖ್ಯೆ(ಪಿ.ಐ.ಡಿ) ನೀಡಲಾಗುತ್ತಿದೆ. ಈಗಾಗಲೇ 1,700 ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲಾಗಿದೆ. ಪಾಲಿಕೆ ಆಸ್ತಿಗಳ ಸರ್ವೇಗೆ ನಾಲ್ವರು ಭೂಮಾಪಕರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ಮಾಸ್ಕ್‌ ಧರಿಸಿ ಉಗುಳದಿರಿ ಅಭಿಯಾನ

ಪಾಲಿಕೆ ಜಾಹೀರಾತು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ಮಾತನಾಡಿ, ಬಿಬಿಎಂಪಿ ಜಾಹೀರಾತು ಬೈಲಾ ಜಾರಿಗೊಳಿಸಲಾಗಿದೆ. ವಾಣಿಜ್ಯ ಜಾಹೀರಾತು ಹೋರ್ಡಿಂಗ್ಸ್‌ ಪ್ರದರ್ಶಿಸಲು ಅವಕಾಶವಿಲ್ಲ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಥಾಪಿಸಿರುವ ಬಸ್‌ ತಂಗುದಾಣ, ಪಾದಚಾರಿ ಮೇಲು ಸೇತುವೆ (ಸ್ಕೈವಾಕ್‌), ಸಾರ್ವಜನಿಕ ಶೌಚಾಲಯ ಹಾಗೂ ಪೊಲೀಸ್‌ ಚೌಕಿಗಳ ಬಳಿ ಮಾತ್ರ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಗೌರವ್‌ ಗುಪ್ತಾ, ನಗರದಲ್ಲಿ ಯಾವೆಲ್ಲ ಮಾದರಿಯಲ್ಲಿ ಜಾಹೀರಾತು ಅಳವಡಿಕೆ ಮಾಡಲಾಗಿದೆ? ಎಷ್ಟು ಜಾಹೀರಾತುಗಳ ಅವಧಿ ಮುಕ್ತಾಯಗೊಂಡಿದೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.

ಸಾರ್ವಜನಿಕರ ಅನುಕೂಲ ಗಮನಿಸಿ: ಆಡಳಿತಾಧಿಕಾರಿ

ನಗರದ ಪ್ರಮುಖ ರಸ್ತೆ ಹಾಗೂ ಉಪ ರಸ್ತೆಗಳಲ್ಲಿ ಸಮರ್ಪಕವಾಗಿ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಬೇಕು, ಜನರಿಗೆ ಹೆಚ್ಚು ಅನುಕೂಲವಾಗುವ ಕಡೆ ಬಸ್‌ ತಂಗುದಾಣ ಮತ್ತು ಸ್ಕೈವಾಕ್‌ ನಿರ್ಮಿಸಿ ಎಂದು ಆಡಳಿತಾಧಿಕಾರಿ ಗೌರವ್‌ ಗುಪ್ತಾ ಸೂಚಿಸಿದರು.

ಈ ವೇಳೆ ಮಾತನಾಡಿದ ಟಿಇಸಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸ್‌, ನಗರದಲ್ಲಿ ಹೆಚ್ಚು ಅಪಘಾತ ಉಂಟಾಗುವ ಜಂಕ್ಷನ್‌ಗಳನ್ನು ಪೊಲೀಸ್‌ ಇಲಾಖೆ ಗುರುತಿಸಿ ನೀಡಿದೆ. ಅಲ್ಲಿ ಅಪಘಾತ ತಪ್ಪಿಸುವ ಉದ್ದೇಶದಿಂದ ವೈಜ್ಞಾನಿಕ ಉಬ್ಬು (ಹಂಫ್ಸ್‌)ಗಳ ಅಳವಡಿಕೆ, ರಸ್ತೆ ವಿಭಜಕ, ಲೈನ್‌ ಮಾರ್ಕಿಂಗ್‌, ಪಾದಚಾರಿ ಮೇಲುಸೇತುವೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಆರು ಹೈಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿ, 14 ಸ್ಕೈವಾಕ್‌ ಕಾಮಗಾರಿ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.