Asianet Suvarna News Asianet Suvarna News

ಬಿಜೆಪಿ ಜತೆ ಚರ್ಚೆಗೆ ಸಿದ್ಧ : ಸವಾಲು ಹಾಕಿದ ಮುಖಂಡ

ಬಿಜೆಪಿ ಜೊತೆಗೆ ಚರ್ಚೆಗೆ ಸಿದ್ಧ ಎಂದು ಬಹಿರಂಗವಾಗಿ ಆಹ್ವಾನ ನೀಡಿ ಮುಖಂಡರೋರ್ವರು ಸವಾಲು ಹಾಕಿದ್ದಾರೆ. 

Basavaraj Horatti Challenge To BJP snr
Author
Bengaluru, First Published Oct 11, 2020, 7:19 AM IST
  • Facebook
  • Twitter
  • Whatsapp

ಹುಬ್ಬಳ್ಳಿ (ಅ.11): ಪದವೀಧರರಿಗಾಗಿ ಬಿಜೆಪಿಯವರು ಏನು ಮಾಡಿದ್ದಾರೆ? ನಾವೇನು ಮಾಡಿದ್ದೇವೆ ಎಂಬುದರ ಬಗ್ಗೆ ಚರ್ಚೆಗೆ ವೇದಿಕೆ ಸಜ್ಜುಗೊಳಿಸಲಿ. ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಇಲ್ಲಿಯವರೆಗೂ ಪದವೀಧರರಿಗೆ, ಶಿಕ್ಷಕರಿಗೆ ಏನು ಸೌಲಭ್ಯ ಒದಗಿಸಲು ಸಾಧ್ಯವೋ ಅದನ್ನೆಲ್ಲ ನೀಡಿದ್ದೇವೆ. ಕೆಲ ಆಗದ ಕಾರ್ಯಗಳನ್ನು ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ಬಿಜೆಪಿಯವರು ಬೇಕು ಬೇಕಾದಂತೆ ಮಾತು ಕೊಟ್ಟಿದ್ದಾರೆ. ಅವರೇ ಒಂದು ವೇದಿಕೆಯನ್ನು ಸಜ್ಜುಗೊಳಿಸಲಿ, ಸಮಯ ನೀಡಲಿ. ಯಾವಾಗ ಬೇಕಾದರೂ ಅವರೊಂದಿಗೆ ಚರ್ಚೆಗೆ ಸಿದ್ಧ. ಆದರೆ ಅವರು ಚರ್ಚೆಗೆ ಬರುತ್ತಾರೆಯೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಂದು ಕಂಟಕ: ರಾಜೀನಾಮೆ ಬೆದರಿಕೆ ಇಟ್ಟ ಬಿಜೆಪಿ ಶಾಸಕ .

ಇನ್ನು, ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿಯೇ ಇದ್ದರೂ ಪದವೀಧರರಿಗೆ ಏನನ್ನೂ ಮಾಡಿಲ್ಲ. ಉದ್ಯೋಗ, ಅನುದಾನ ವರ್ಗಾವಣೆ ವಿಚಾರದಲ್ಲಿ ಸ್ನೇಹಿಯಾಗಿ ವರ್ತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 3 ಲಕ್ಷದಷ್ಟುಪದವೀಧರ ಮತದಾರರು ಕ್ಷೇತ್ರದಲ್ಲಿದ್ದಾರೆ. ಆದರೆ ಶೇ. 60ರಷ್ಟುಮತದಾನ ಆಗುವುದು ಅನುಮಾನ. ಕೊರೋನಾ ಕಾರಣಕ್ಕೆ ನಮ್ಮ ಪ್ರಚಾರಕ್ಕೂ ಸಾಕಷ್ಟುಸವಾಲಿದೆ. ಅಭ್ಯರ್ಥಿ ಹೆಚ್ಚಾಗಿ ಬಹಿರಂಗ ಸಮಾವೇಶ ನಡೆಸುವುದು ಕಷ್ಟ. ವೈಯಕ್ತಿಕವಾಗಿ ಭೇಟಿಯಾಗಿ ಮತಯಾಚನೆ ಮಾಡಬೇಕಾಗಿದೆ ಎಂದರು.

ವಿಧಾನಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿ ಶಿವಶಂಕರ ಕಲ್ಲೂರ, ಪದವೀಧರರು ಕಳೆದ ಬಾರಿ ಸಂಕನೂರ ಅವರ ಮೇಲೆ ನಂಬಿಕೆ ಇಟ್ಟು ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಅವೆಲ್ಲ ನಿರೀಕ್ಷೆ ಹುಸಿಯಾಗಿದೆ. ಈಗ ಅದೆ ಮತದಾರರು ‘ಸಂಕನೂರ ಹಠಾವೊ ಪದವೀಧರ ಬಚಾವೊ’ ಎನ್ನುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಪದವೀಧರರು ಉದ್ಯೋಗವಿಲ್ಲದೆ ನರೇಗಾ, ಹಣ್ಣು ಮಾರಾಟದಂತಹ ದುಡಿಮೆಗೆ ಅನಿವಾರ್ಯವಾಗಿ ಹೋಗಬೇಕಾಯಿತು. 8 ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು. ಸರ್ಕಾರ ಈ ವೇಳೆ ಅವರಿಗಾಗಿ ಯಾವುದೆ ಪರ್ಯಾಯ ಉದ್ಯೋಗವನ್ನು ನೀಡಲಾಗದೆ ಕೈಕಟ್ಟಿತು ಎಂದು ದೂರಿದರು.

ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ನಡೆಸುತ್ತಿದ್ದು, ನಮಗೆ ಬಿಜೆಪಿಯೆ ನೇರ ಸ್ಪರ್ಧಿ. ಸಂಕನೂರ ಸದನದಲ್ಲಿಯೂ ಪದವೀಧರರ ಪರವಾಗಿ ಮಾತನಾಡಿಲ್ಲ. ಅವರ ಬಗ್ಗೆ ಸದನಶೂರ ಸಂಕನೂರ ಎಂದು ಬರೆಯಲಾಗಿದೆ. ಆದರೆ ಅವರು ಕೇವಲ ಮನವಿ ಶೂರ ಸಂಕನೂರ ಎಂದು ಟೀಕಿಸಿದರು.

ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ನಾಲ್ಕು ವಿಧಾನಪರಿಷತ್‌ ಚುನಾವಣೆಯಲ್ಲೂ ಜನತೆ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸವಿದೆ. ಉತ್ತರಕರ್ನಾಟಕಕ್ಕೆ ಹಾನಿಯಾಗಿದ್ದರೆ ಅದು ಬಿಜೆಪಿಯಿಂದ. ಮಹದಾಯಿ, ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಕುರಿತು ಅವರು ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಉಕ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಸೇರಿ ಇತರರಿದ್ದರು.

Follow Us:
Download App:
  • android
  • ios