Asianet Suvarna News Asianet Suvarna News

ಜೋಶಿ ಮನೆಗೆ ಬೊಮ್ಮಾಯಿ ದಿಢೀರ್‌ ಭೇಟಿ: ಗೌಪ್ಯ ಸಭೆ ನಡೆಸಿದ ಉಭಯ ನಾಯಕರು..!

* ಅರ್ಧ ಗಂಟೆ ಕಾಲ ಪರಸ್ಪರ ಚರ್ಚೆ
* ಇನ್ನೊಂದೆಡೆ ಆರ್‌ಎಸ್‌ಎಸ್‌ ಕಚೇರಿಗೆ ಶೆಟ್ಟರ್‌ ಭೇಟಿ
* ಶೆಟ್ಟರ್‌ ಸಂಘದ ಕಚೇರಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ 
 

Basavaraj Bommai Met Union Minister Pralhad Joshi in Hubballi grg
Author
Bengaluru, First Published Jul 25, 2021, 7:17 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಜು.25): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡವು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ದಿಢೀರನೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಗೌಪ್ಯ ಸಭೆ ನಡೆಸಿದರು. ಆದರೆ ಭೇಟಿ ಗೌಪ್ಯತೆ ಬಿಟ್ಟುಕೊಡದೇ ಇದೊಂದು ಸೌಜನ್ಯದ ಭೇಟಿಯಷ್ಟೇ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದು ವಿಶೇಷ.

ಇನ್ನೊಂದೆಡೆ ರಾತ್ರಿಯೇ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಕೂಡ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಈ ಎರಡು ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿವೆ.

ಬೊಮ್ಮಾಯಿ ಭೇಟಿ:

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ವರಿಷ್ಠರಿಗೆ ಬಿಟ್ಟವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೆಳಗ್ಗೆಯಷ್ಟೇ ಹೇಳಿದ್ದರು. ಇದರ ನಡುವೆಯೇ ಶನಿವಾರ ರಾತ್ರಿ 9ರ ಸುಮಾರಿಗೆ ಸಚಿವ ಜೋಶಿ ಮನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಸಚಿದ್ವಯರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಸಭೆ ನಡೆಸಿದರು.

ಮುಂದಿನ ಮುಖ್ಯಮಂತ್ರಿ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರಹ್ಲಾದ್ ಜೋಶಿ

ಸಚಿವರು ಇಬ್ಬರು ಸಭೆಯಲ್ಲಿ ಯಾವ ವಿಷಯ ಕುರಿತು ಚರ್ಚೆ ನಡೆಸಿದ್ದಾರೆ ಎಂಬುದು ಬಹಿರಂಗೊಳ್ಳದಿದ್ದರೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು, ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಭೆ ನಡೆಸಿ ಹೊರಬಂದ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಸಚಿವ ಜೋಶಿ ಅವರನ್ನು ಭೇಟಿ ಮಾಡಿ ಬಹಳ ದಿನವಾಗಿತ್ತು. ಕೋವಿಡ್‌ ಕಾರಣದಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭೇಟಿ ಮಾಡಲು ಬಂದಿದ್ದೆ ಅಷ್ಟೇ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಇದೊಂದು ಸೌಜನ್ಯದ ಭೇಟಿ, ಇದೇ ಸಂದರ್ಭದಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು. ಅಲ್ಲಿಂದ ತೆರಳಿದರು.

ಕೇಶವ ಕುಂಜಕ್ಕೆ ಶೆಟ್ಟರ್‌

ಈ ನಡುವೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸಂಜೆವರೆಗೆ ಸಮಾರಂಭವೊಂದರಲ್ಲಿ ಕೂಡಿ ಭಾಗಿಯಾಗಿದ್ದರು. ನಂತರ ಸಚಿವ ಶೆಟ್ಟರ್‌ ಅವರು ಒಬ್ಬರೇ ಕೇಶವ ಕುಂಜಕ್ಕೆ ಭೇಟಿ ನೀಡಿ ಆರ್‌ಎಸ್‌ಎಸ್‌ ಮುಖಂಡ ಮಂಗೇಶ ಬೇಂಡೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಇಬ್ಬರು ನಾಯಕರು ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದರೆಂದು ಹೇಳಲಾಗುತ್ತದೆ.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಪಡೆಯುವುದು ಖಚಿತ ಎಂದು ಹೇಳುತ್ತಿರುವ ಹಾಗೂ ಮುಂದಿನ ಮುಖ್ಯಮಂತ್ರಿಗಳ ರೇಸ್‌ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿ ಬರುತ್ತಿರುವ ವೇಳೆ ಸಚಿವರಾದ ಜೋಶಿ, ಬಸವರಾಜ ಬೊಮ್ಮಾಯಿ ಭೇಟಿ ಹಾಗೂ ಸಚಿವ ಜಗದೀಶ ಶೆಟ್ಟರ್‌ ಅವರು ಸಂಘದ ಕಚೇರಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
 

Follow Us:
Download App:
  • android
  • ios