Asianet Suvarna News Asianet Suvarna News

ಬಸವಣ್ಣನವರ ತತ್ತ್ವಾದರ್ಶ ಜಗತ್ತಿಗೆ ಅಗತ್ಯವಿದೆ : ವಿ. ಸುಮಂಗಲಾ

ಜಗತ್ತಿನಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ ಬಸವಣ್ಣನವರ ತತ್ತ್ವಾದರ್ಶ ಜಗತ್ತಿಗೆ ಅಗತ್ಯವಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕಿ ವಿ. ಸುಮಂಗಲಾ ಹೇಳಿದರು.

 Basavannas philosophy is needed for the world  V. Sumangala snr
Author
First Published Oct 9, 2023, 8:25 AM IST

  ಮೈಸೂರು :  ಜಗತ್ತಿನಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ ಬಸವಣ್ಣನವರ ತತ್ತ್ವಾದರ್ಶ ಜಗತ್ತಿಗೆ ಅಗತ್ಯವಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕಿ ವಿ. ಸುಮಂಗಲಾ ಹೇಳಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯಂತ ಮಹಾಸಭಾ, ವೀರಶೈವ ಲಿಂಗಾಯಂತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಲ್ಲಿ ಜೀವನ ಮೌಲ್ಯ ಬೆಳೆಸಿದಷ್ಟು ಉತ್ತಮ ನಾಯಕತ್ವದ ಸಮಾಜ ನಿರ್ಮಾಣವಾಗಲಿದೆ. ಇಂದಿನ ಕಾಲಘಟ್ಟದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಬಸವಣ್ಣನವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.

ನಮ್ಮ ಹಿರಿಯರು ರೂಪಿಸಿದ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಜೀವನವನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಜೀವನವೇ ಒಂದು ಆದರ್ಶವಾಗಬೇಕು. ನಮ್ಮ ಆದರ್ಶ ಬದುಕು ನೋಡಿಕೊಂಡು ಮಕ್ಕಳು ಬೆಳೆಯಬೇಕು. ಮಕ್ಕಳಲ್ಲಿ ಜೀವನ ಮೌಲ್ಯ ಬೆಳೆಸದಿದ್ದರೆ ನೀವು ವೃದ್ಧರಾದಾಗ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುವ ಗೋಜಿಗೆ ಮಕ್ಕಳು ಹೋಗುವುದಿಲ್ಲ ಎಂದು ಅವರು ಹೇಳಿದರು.

ಕೇವಲ ಪಠ್ಯಪುಸ್ತಕದಿಂದ ಮಾತ್ರ ಮಕ್ಕಳಲ್ಲಿ ಮೌಲ್ಯ ತುಂಬಲು ಸಾಧ್ಯವಿಲ್ಲ. ನಮ್ಮ ಜೀವನವೇ ಒಂದು ಆದರ್ಶವಾಗಬೇಕು. ನಮ್ಮ ಹಿರಿಯರು ರೂಪಿಸಿದ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಜೀವನವನ್ನು ನಾವು ಇಂದು ಮರೆಯುತ್ತಿದ್ದೇವೆ. ವಚನಗಳಲ್ಲಿನ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಆದ್ದರಿಂದ ಮಕ್ಕಳಿಗೆ ವಚನಗಳನ್ನು ಓದಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದರು.

ಮಕ್ಕಳಿಗೆ ಸಾಹಿತ್ಯದ ಗಂಧ, ಗಾಳಿ ಇಲ್ಲದೆ ಬೆಳೆಸುತ್ತಿದ್ದೇವೆ. ಮಕ್ಕಳು ಉತ್ತಮ ಅಂಕಗಳಿಸಬೇಕು. ವಿದೇಶಕ್ಕೆ ಹೋಗಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಅದರಿಂದ ಆಚೆಗೆ ಯೋಚಿಸುತ್ತಿಲ್ಲ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಪಾಲಕರ ಆದ್ಯ ಕರ್ತವ್ಯ. ಮಕ್ಕಳನ್ನು ಬಾಲ್ಯದಿಂದಲೇ ಸುಸಂಸ್ಕೃತ ವಾತಾವರಣದಲ್ಲಿ ಬೆಳೆಸಬೇಕು. ಸಾಹಿತ್ಯ, ಸಂಗೀತ, ಲಲಿತಕಲೆಯ ಗಂಧ ಗಾಳಿ ತಾಗಿದಾಗ ಮಾತ್ರ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ ಎಂದು ಅವರು ಹೇಳಿದರು.

12ನೇ ಶತಮಾನದಲ್ಲಿಯೇ ಬಸವಣ್ಣ ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ಮಾಡಿದರು. ಮಹಿಳೆಯರಿಗೆ ಈಗ ಶೇ. 33ರಷ್ಟು ರಾಜಕೀಯ ಮೀಸಲಾತಿ ನೀಡಿದೆ. ಆದರೆ ಬಸವಣ್ಣ 12ನೇ ಶತಮಾನದಲ್ಲೇ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದಾಗಿ ಅವರು ಪ್ರತಿಪಾದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ನಗರದ ವಿವಿಧ ಜೆಎಸ್‌ಎಸ್‌ಶಾಲಾ- ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಅಪೇಕ್ಷ ಜಿ. ದೇವನೂರು, ಸಾನ್ವಿ ಕೆ. ಉಡುಪ ಮತ್ತು ಚಿನ್ಮಯಿ ಅವರು ಭರತನಾಟ್ಯ, ಅರುಣೋದಯ ವಿಶೇಷ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜೆಪಿ ನಗರದ ಅರಿವಿನ ಮನೆ ಬಳಗದವರು ನೃತ್ಯ ಪ್ರದರ್ಶಿಸಿದರು. ಜೆಎಸ್‌ಎಸ್ ಬಡಾವಣೆಯ ಲಲಿತಾದ್ರಿ ಮಹಿಳಾ ವೇದಿಕೆಯಿಂದ ಕೋಲಾಟ, ಒಕ್ಕೂಟದ ಮಹಿಳೆಯರು ಹಾಗೂ ಮಕ್ಕಳಿಂದ ವೀರಗಾಸೆ ಮತ್ತು ಕಥಾಮೃತ ಸಾಂಸ್ಕೃತಿಕ ಗಮನ ಸೆಳೆಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದರು. ವೇದಿಕೆಯಲ್ಲಿ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಲಿಂಗರಾಜು ಮೊದಲಾದವರು ಇದ್ದರು.

Follow Us:
Download App:
  • android
  • ios