20 ವರ್ಷಗಳ ಸಮಾಜ ಸೇವೆ ಪೂರೈಸಿದ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ!
20 ವರ್ಷಗಳ ಸಾರ್ಥಕತೆ ಹಾಗೂ ದೀಕ್ಷಾ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ನಮ್ಮ ಮಠದ ಆವರಣದಲ್ಲಿ ಮುಂಭಾಗದಲ್ಲಿ ಇಂದು ಆಯೋಜಿಸಿದ್ದರು.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜೂ.20): 20 ವರ್ಷಗಳ ಸಾರ್ಥಕತೆ ಹಾಗೂ ದೀಕ್ಷಾ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ನಮ್ಮ ಮಠದ ಆವರಣದಲ್ಲಿ ಮುಂಭಾಗದಲ್ಲಿ ಇಂದು ಆಯೋಜಿಸಿದ್ದರು. ಸಮಾಜ ಸೇವಾ ದೀಕ್ಷೆ ಸ್ವೀಕರಿಸಿ ಎರಡು ದಶಕಗಳಾದ ಶುಭ ಸಂದರ್ಭದಲ್ಲಿ ಪರಮಪೂಜ್ಯ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಭಕ್ತಿ ಸಮರ್ಪಣೆ ಸಲ್ಲಿಸಿದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಸಮಾಜ ಸೇವಾ ದೀಕ್ಷೆ ಸ್ವೀಕರಿಸಿ 2022ರ ಜೂನ್ 24 ನೇ ದಿನಾಂಕಕ್ಕೆ ಎರಡು ದಶಕಗಳಾಗುತ್ತಿದೆ.
ತಮ್ಮ ಪೂರ್ವಾಶ್ರಮದಲ್ಲಿ ಶ್ರೀಗಳಿಗೆ ಚಿಕ್ಕಂದಿನಿಂದಲೂ ಚಿತ್ರದುರ್ಗ ಮುರುಘಾಮಠದೊಂದಿಗೆ ಅತ್ಯಂತ ನಿಕಟ ಸಂಬಂಧ ಈ ಸಂದರ್ಭದಲ್ಲಿ ಪರಮ ಪೂಜ್ಯ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾದಾರ ಸಮಾಜದ ಪ್ರಗತಿಗೆ ಗುರುಪೀಠ ಸ್ಥಾಪಿಸಿ, ಸಮಾಜಸೇವಾ ದೀಕ್ಷೆ ನೀಡಿದರು. ನಂತರ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಕಳೆದ 20 ವರ್ಷಗಳಲ್ಲಿ ಸಾಧಿಸಿದ್ದು ಅಪಾರ. ದೀಕ್ಷೆ ಪಡೆದ ಈ 20 ವರ್ಷಗಳಲ್ಲಿ ತಾವು ನಡೆದ ಹಾದಿಗೆ ಸಿಕ್ಕ ಕಲ್ಲು–ಮುಳ್ಳುಗಳನ್ನು ದಾಟಿ ನಾಡಿನ ಪ್ರಮುಖ ಮಠಾಧೀಶರ ಸಾಲಿನಲ್ಲಿ ಸ್ಥಾನ ಪಡೆದಿರುವುದರ ಹಿಂದೆ ಶ್ರೀಗಳ ಸಹನೆ, ಧೈರ್ಯ ಹಾಗೂ ಬುದ್ದಿವಂತಿಕೆ ಪ್ರಮುಖ ಪಾತ್ರವಹಿಸಿದೆ.
ತಮ್ಮ ಸಂಪೂರ್ಣ ಜೀವನವನ್ನು ಸಮಾಜದ ಅಭ್ಯುದಯಕ್ಕಾಗಿ ಸಮರ್ಪಸಿರುವ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾಮಾಜಿಕ ಜವಾಬ್ದಾರಿಗಳೊಂದಿಗೆ ರಾಜ್ಯ ಹೊರ ರಾಜ್ಯಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಜಾತೀಯತೆ, ಅಸ್ಪೃಶ್ಯತೆ, ಮೂಢನಂಬಿಕೆ,ದುಶ್ಚಟಮುಕ್ತ ಸಮಾಜ ನಿರ್ಮಾಣ, ದೇವದಾಸಿ ಪದ್ಧತಿ ನಿರ್ಮೂಲನೆ, ಸೌಹಾರ್ದ ಸಮಾಜ ನಿರ್ಮಾಣ,ಬಸವತತ್ವ ಪ್ರಚಾರ, ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆ, ಪರಿಸರ, ಯುವಜನ ಸಬಲೀಕರಣ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಯಾಶೀಲವಾಗಿ ದುಡಿಯುತ್ತಿದ್ದಾರೆ. ಸಮ ಸಮಾಜದ ಕನಸು ಕಂಡು ಅದರ ಸಾಕಾರಕ್ಕಾಗಿ ಶ್ರಮಿಸುತ್ತಿದ್ದಾರೆ.
ಚಿತ್ರದುರ್ಗ: 2023ಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ಸಿಎಂ ಬೊಮ್ಮಾಯಿ
ಚಿತ್ರದುರ್ಗವನ್ನು ಕಾರ್ಯ ಕ್ಷೇತ್ರವನ್ನಾಗಿಸಿಕೊಂಡು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠ ಸ್ಥಾಪಿಸಿರುವ ಶ್ರೀಗಳು ಈ ಮಠದ ಪ್ರಥಮ ಪೀಠಾಧ್ಯಕ್ಷರಾಗಿದ್ದಾರೆ. ಶ್ರೀಮಠ ಹೆಸರಿನಿಂದ ಒಂದು ವರ್ಗಕ್ಕೆ ಸೀಮಿತವಾದಂತೆ ಭಾಸವಾಗುತ್ತದೆ ಆದರೆ ಶ್ರೀ ಮಠಕ್ಕೆ ಸರ್ವ ಜಾತಿ ಧರ್ಮಗಳ ಜನರು ಒಡನಾಟ ಹೊಂದಿದ್ದಾರೆ. ತಮ್ಮ ಪ್ರೀತಿಪೂರ್ವಕ ನಡೆಯಿಂದ ಎಲ್ಲರನ್ನೂ ಸೆಳೆಯುವ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳ ಸಾರ್ಥಕ ಸೇವೆಗೆ ಈಗ ಎರಡು ದಶಕಗಳ ಸಂಭ್ರಮ. ಇನ್ನೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾದಾರ ಚನ್ನಯ್ಯ ಸ್ವಾಮೀಜಿಗಳು.
ನಾನು ಮುರುಘಾ ಮಠದ ಶ್ರೀ ಪರಮಪೂಜ್ಯ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಎಂದೆಂದಿಗೂ ಚಿರ ಋಣಿ ಆಗಿರುತ್ತೇನೆ. ಮಠವೇ ಬೇಡ ನಾನು ಸ್ವಾಮೀಜಿ ಆಗಲಾರೆ ಎಂದು ಓಡಿ ಹೋಗಿದ್ದವನನ್ನು ಕರೆದುಕೊಂಡು ಬಂದು ಶರಣರು ಸ್ವಾಮೀಜಿ ಮಾಡಿದರು. ಅವರ ತತ್ವ ಮಾರ್ಗದರ್ಶನದಲ್ಲಿ ನಾವು ಸದಾ ಇರುತ್ತೇವೆ. ಇದೇ ರೀತಿ ರಾಜ್ಯದ ಇನ್ನೂ ಮೂರ್ನಾಲ್ಕು ಕಡೆ ಉಪ ಮಠಗಳನ್ನು ಮಾಡುವ ಕನಸಿದೆ. ಆದರೆ ಅವೆಲ್ಲವಕ್ಕೂ ಶ್ರೀ ಮುರುಘಾ ಶರಣರ ನೇತೃತ್ವದಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿಯೇ ಸ್ವಾಮಿಗಳ ನೇಮಕ ಕಾರ್ಯ ನಡೆಯುತ್ತದೆ. ಹಿಂದೆಯೂ ಮುಂದೆಯೂ ಎಂದೆಂದಿಗೂ ಮುರುಘಾ ಶರಣರ ಮಾರ್ಗದರ್ಶನದಲ್ಲಿಯೇ ನಾವು ಮುಂದುವರೆಯುತ್ತೀವಿ ಎಂದು ಗುರುಗಳನ್ನು ಸ್ಮರಿಸಿದರು.
ಸದ್ಯ ಹುಬ್ಬಳ್ಳಿಯಲ್ಲಿ ಸರ್ಕಾರ ನಮ್ಮ ಮಠಕ್ಕೆ 81 ಎಕರೆ ಜಮೀನನ್ನು ಮಂಜೂರು ಮಾಡಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪೂಜ್ಯ ಶರಣರು ನನ್ನನ್ನು ಒಂದು ಕಡೆ ಕುಳಿತುಕೊಳ್ಳುವಂತೆ ಆದರೂ ಮಾಡಲಿ, ಇಲ್ಲವಾದಲ್ಲಿ ರಾಜ್ಯಾದ್ಯಂತ ಸುತ್ತಿ ಮಠ ಕಟ್ಟಿ ಅಭಿವೃದ್ಧಿ ಪಡಿಸುವ ಕೆಲಸವನ್ನಾದ್ರು ಮಾಡಲಿ ಎಲ್ಲ ಅವರ ವಿವೇಚನೆಗೆ ಬಿಟ್ಟಿದ್ದು. ಅವರ ಯಾವುದೇ ನಿರ್ಧಾರಕ್ಕೂ ನಾನು ನನ್ನ ಸಮುದಾಯ ಸದಾ ಸಿದ್ದವಾಗಿರುತ್ತದೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು. ಈ ವೇಳೆ ಗುರುವಂದನಾ ಸ್ವೀಕರಿಸಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಚನ್ನಯ್ಯ ಶ್ರೀಗಳು 20 ವರ್ಷ ಸಮಾಜ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅವರ ಪರಿಶ್ರಮ, ಬುದ್ದಿ, ಸಂಘಟನೆ ಮುಖಾಂತರ ಅವರು ಒಂದು ಬೃಹತ್ ಪೀಠವನ್ನು ಕಟ್ಟಿರೋದು ಅವರು ಭರವಸೆಯ ವ್ಯಕ್ತಿಗಳು ಎಂಬುದನ್ನು ತೋರಿಸುತ್ತದೆ.
ಚಳ್ಳಕೆರೆ ತಾಲ್ಲೂಕಿನ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನೆರವು!
ನಮಗೆ ಸಂಘರ್ಷದ ಹಾದಿ ಬೇಡ ಸಮಾನತೆಯ ಹಾದಿ ಬೇಕು ಎಂದು ಅನೇಕ ವಿಚಾರವಂತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಅವರ ಬುದ್ದಿವಂತಿಕೆಯ ಸಂಕೇತ. ಅವರು ಬೇರೆ ಅಲ್ಲವೇ ಅಲ್ಲ ಅವರು ನಮ್ಮವರೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು ಎಂದರು. ಇದೆ ವೇಳೆ ದೀಕ್ಷೆ ಸ್ವೀಕರಿಸಿದ ಮಾದಾರ ಚನ್ನಯ್ಯ ಶ್ರೀಗಳು ತಮ್ಮ ಗುರುಗಳಾದ ಡಾ.ಮುರುಘಾ ಶರಣರ ಪಾದ ಪೂಜೆ ನೆರವೇರಿಸಿ ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭೋವಿ ಗುರು ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಮಹಾಸ್ವಾಮಿಗಳು, ಕಬೀರಾನಂದ ಶ್ರೀಗಳು, ಸಮುದಾಯದ ನಾಯಕರಾದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಉಪಸ್ಥಿತರಿದ್ದರು.