ಬಸವಕಲ್ಯಾಣದ ಚಿನ್ನದ ವ್ಯಾಪಾರಿ ರೇವಣಪ್ಪ, ಪ್ರಧಾನಿ ಮೋದಿಯವರ ಇಂಧನ ಉಳಿತಾಯದ ಕರೆಯಿಂದ ಪ್ರೇರಿತರಾಗಿ, ತಮ್ಮ ಐಷಾರಾಮಿ ಕಾರನ್ನು ಬಿಟ್ಟು ಸೈಕಲ್‌ನಲ್ಲಿ ಅಂಗಡಿಗೆ ತೆರಳುತ್ತಿದ್ದಾರೆ. ಅವರ ಈ ನಡೆ ಇಂಧನ ಉಳಿತಾಯ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಬೀದರ್ (ಮೇ 15): ಇಂದಿನ ಕಾಲದಲ್ಲಿ ಶ್ರೀಮಂತಿಕೆ ಎಂದರೆ ಐಷಾರಾಮಿ ಕಾರುಗಳು, ಬೈಕುಗಳು ಮತ್ತು ವೈಭವದ ಜೀವನ. ಅದರಲ್ಲೂ ಚಿನ್ನದ ಅಂಗಡಿಯ ಮಾಲೀಕರು ಅಂದಮೇಲೆ ಅವರ ಜೀವನಶೈಲಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣದ ಚಿನ್ನದ ವ್ಯಾಪಾರಿಯೊಬ್ಬರು ಇದಕ್ಕೆ ಅಪವಾದ ಎಂಬಂತೆ ನಡೆದುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಐಷಾರಾಮಿ ಕಾರು ಬಿಟ್ಟು ಸೈಕಲ್ ಮೊರೆ:

ಬಸವಕಲ್ಯಾಣ ನಗರದಲ್ಲಿ ಬಂಗಾರದ ಅಂಗಡಿ ಹೊಂದಿರುವ ರೇವಣಪ್ಪ ಅವರು ಪ್ರತಿದಿನ ತಮ್ಮ ಐಷಾರಾಮಿ ಕಾರಿನಲ್ಲೇ ಅಂಗಡಿಗೆ ತೆರಳುತ್ತಿದ್ದರು. ಆದರೆ, ಇಂದು ರೇವಣಪ್ಪ ಅವರು ತಮ್ಮ ಕಾರು ಮತ್ತು ಬೈಕುಗಳನ್ನು ಮನೆಯಲ್ಲೇ ಬಿಟ್ಟು ಸೈಕಲ್ ತುಳಿಯುತ್ತಾ ಅಂಗಡಿಗೆ ಬಂದಿದ್ದಾರೆ. ಸುಡುವ ಬಿಸಿಲನ್ನೂ ಲೆಕ್ಕಿಸದೆ ಸುಮಾರು 2 ಕಿಲೋಮೀಟರ್ ಸೈಕಲ್ ತುಳಿದು ಅವರು ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.

ಪ್ರಧಾನಿ ಮೋದಿ ಮಾತೇ ಪ್ರೇರಣೆ:

ರೇವಣಪ್ಪ ಅವರು ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಪ್ರೇರಣೆಯಾಗಿದೆ. ದೇಶದ ಹಿತದೃಷ್ಟಿಯಿಂದ ಇಂಧನ ಉಳಿಸುವುದು ಅತ್ಯಂತ ಅವಶ್ಯಕವಾಗಿದೆ. ಪ್ರಧಾನಿ ಮೋದಿ ಅವರು ಇಂಧನ ಉಳಿತಾಯದ ಬಗ್ಗೆ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ರೇವಣಪ್ಪ, "ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯ. ನಾವು ಇಂಧನ ಉಳಿಸಿದರೆ ಅದು ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ. ಹೀಗಾಗಿ ಇಂದಿನಿಂದ ಸೈಕಲ್ ಮೂಲಕವೇ ಸಂಚರಿಸಲು ನಿರ್ಧರಿಸಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಆರೋಗ್ಯ ಮತ್ತು ಪರಿಸರ ಎರಡಕ್ಕೂ ಲಾಭ:

ಕೇವಲ ಇಂಧನ ಉಳಿತಾಯ ಮಾತ್ರವಲ್ಲದೆ, ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ ಎಂಬ ಸಂದೇಶವನ್ನು ರೇವಣಪ್ಪ ನೀಡಿದ್ದಾರೆ. ಬಸವಕಲ್ಯಾಣದ ರಸ್ತೆಯಲ್ಲಿ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು ಸೈಕಲ್ ತುಳಿಯುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ, ಅವರ ಸರಳತೆ ಮತ್ತು ದೇಶಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ದೇಶದ ಹಿತಕ್ಕಾಗಿ ಸಣ್ಣ ಬದಲಾವಣೆ ಮಾಡಿಕೊಳ್ಳುವುದು ದೊಡ್ಡ ವಿಷಯವಲ್ಲ. ನಾವೆಲ್ಲರೂ ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಇಂಧನ ಬಳಸದ ವಾಹನಗಳನ್ನು ಅಥವಾ ಸೈಕಲ್ ಬಳಸಿದರೆ ದೇಶಕ್ಕೆ ದೊಡ್ಡ ಲಾಭವಾಗಲಿದೆ'ಎಂಬುದು ರೇವಣಪ್ಪ ಅವರ ಮನವಿಯಾಗಿದೆ. ಬಸವಕಲ್ಯಾಣದ ಈ ಬಂಗಾರದ ವ್ಯಾಪಾರಿಯ ನಡೆ ಈಗ ಸೋಷಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗುತ್ತಿದೆ.