ಯಾದಗಿರಿ: ಬಸವಸಾಗರ ಜಲಾಶಯ ಬಹುತೇಕ ಭರ್ತಿ

* ನೀರಾವರಿ ಸಲಹಾ ಸಮಿತಿ ಬಳಿಕ ಕಾಲುವೆಗೆ ನೀರು
* ಜು.17 ನೀರಾವರಿ ಸಲಹಾ ಸಮಿತಿ ಸಭೆ:
* ವಾರಾಬಂದಿ ಕೈಬಿಡಲು ರೈತರ ಒತ್ತಾಯ
 

Basava Sagar Dam Is Almost Full in Yadgir grg

ಬಸವರಾಜ ಎಂ. ಕಟ್ಟಿಮನಿ

ಹುಣಸಗಿ(ಜು.14):  ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಿಂದ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿದೆ.

ಬಸವ ಸಾಗರ ಜಲಾಶಯದ ಒಟ್ಟು ನೀರಿನ ಸಂಗ್ರಹ 33.31 ಟಿಎಂಸಿ ಇದ್ದು, ಇಲ್ಲಿಯವರೆಗೆ 30.78 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಜಲಾಶಯದ ಒಟ್ಟು ನೀರಿನ ಮಟ್ಟ492.25 ಮೀ. ರಲ್ಲಿ 491.70 ಮೀ. ನೀರು ಸಂಗ್ರಹವಾಗಿದ್ದು, ಮಂಗಳವಾರ ಬಸವಸಾಗರ ಜಲಾಶಯಕ್ಕೆ ಏಕಾಏಕಿ ಒಳಹರಿವು ಹೆಚ್ಚಳವಾದ (1.20 ಲಕ್ಷ ಕ್ಯೂಸೆಕ್‌) ಪ್ರಯುಕ್ತ 14 ಸಾವಿರ ಕ್ಯುಸೆಕ್‌ ನೀರನ್ನು ಕೃಷ್ಣ ನದಿಗೆ ಹರಿಬಿಡಲಾಗಿದೆ.

ಜಲಾಶಯ ಭರ್ತಿ:

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವ ನಾಡಿಯಾಗಿರುವ ಬಸವಸಾಗರ ಜಲಾಶಯವು ಮತ್ತೇ ಒಳ ಹರಿವು ಹೆಚ್ಚಿಸಿಕೊಂಡು ಬಹುತೇಕ ಭರ್ತಿಯಾಗಿದೆ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಮೂಲಕ 12 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಬಸವಸಾಗರ ಜಲಾಶಯವು ಕೂಡ ಬಹುತೇಕ ಭರ್ತಿಯಾಗಿದೆ, ಮಂಗಳವಾರ ಸಂಜೆ 14 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿ ಬಿಡಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದರಿಂದ ಮುಂಗಾರು ಹಂಗಾಮಿಗೆ ಕಾಲುವೆ ನೀರನ್ನೆ ನೆಚ್ಚಿಕೊಂಡು ಕುಳಿತಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಸವಸಾಗರ ಜಲಾಶಯದಿಂದ ಕೆಲವೇ ದಿನಗಳಲ್ಲಿ ಎಡದಂಡೆ ಮತ್ತು ಬಲದಂಡೆ ಮುಖ್ಯ ಕಾಲುವೆಗಳ ಮೂಲಕ ಕೃಷಿಗಾಗಿ ನೀರು ಹರಿಸಲಾಗುತ್ತಿದೆ.

ಹೆಚ್ಚಿದ ಒಳಹರಿವು: ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ನೀರು

ಜು.17 ನೀರಾವರಿ ಸಲಹಾ ಸಮಿತಿ ಸಭೆ:

ಕೃಷ್ಣ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ಎಲ್ಲಿಂದ ಎಲ್ಲಿಯವರೆಗೆ ನೀರು ಹರಿಸಬೇಕೆಂದು ನಿರ್ಧರಿಸುವ ಮಹತ್ವದ ನೀರಾವರಿ ಸಲಹಾ ಸಮಿತಿ ಜು.17 ರಂದು ಆಲಮಟ್ಟಿಯಲ್ಲಿ ಜರುಗಲಿದೆ. ಅಚ್ಚುಕಟ್ಟು ಪ್ರದೇಶ ಶಾಸಕರು ಹಾಗೂ ಸಂಸದರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಕೆಬಿಜೆಎನ್‌ಎಲ್‌ ಅ​ಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತೆಗೆದುಕೊಳ್ಳುವ ತೀರ್ಮಾನದಂತೆ ಕಾಲುವೆಗಳ ಮೂಲಕ ಕೃಷಿಗೆ ನೀರು ಹರಿಸಲಾಗುವುದು ಎಂದು ಕೆಬಿಜೆಎನ್‌ಎಲ್‌ ಮೂಲಗಳಿಂದ ತಿಳಿದುಬಂದಿದೆ.

ವಾರಾಬಂದಿ ಕೈ ಬಿಡಿ:

ಜು.17ರಂದು ನಡೆಯಲಿರುವ ನೀರಾವರಿ ಸಲಹಾ ಸಮಿತಿಯಲ್ಲಿ ವಾರ ಬಂದಿ ಪದ್ಧತಿ ಪ್ರಕಾರ ನೀರು ಹರಿಸುವ ನಿರ್ಣಯ ಕೈಗೊಳ್ಳಲಾಗುತ್ತಿತ್ತು. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪದೆ ರೈತರು ಸಂಕಷ್ಟಎದುರಿಸುವಂತಾಗಿದೆ. ಅದಕ್ಕಾಗಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಾರ ಬಂದಿ ಪದ್ಧತಿಯನ್ನು ಕೈಬಿಡಬೇಕೆಂದು ರೈತ ಮುಖಂಡರಾದ ಮಹಾದೇವಿ ಬೇವಿನಾಳಮಠ ಒತ್ತಾಯಿಸಿದ್ದಾರೆ.

ಈಗ ಬಸವಸಾಗರ ಜಲಾಶಯ ಸಂಪೂರ್ಣವಾಗಿ ಭರ್ತಿಯಾದರೂ ಕಾಲುವೆಗೆ ನೀರು ಹರಿಸಲು ಸಾಧ್ಯವಿಲ್ಲ. ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಬಿಡಲಾಗುವುದು ಹೊರತು ಕಾಲುವೆ ನೀರು ಹರಿಸುವುದಿಲ್ಲ. ಆಲಮಟ್ಟಿಯಲ್ಲಿ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದ ಪ್ರಕಾರ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಬಸವಸಾಗರ ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ ಶಂಕರ ನಾಯ್ಕೋಡಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios