'ಬಸವ ಮಂಟಪ' ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿವಾದದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬಸವಣ್ಣ ಎಲ್ಲರಿಗೂ ಸೇರಿದವರು, ಈ ಬಗ್ಗೆ ಸಿದ್ದರಾಮಯ್ಯ ಸೂಕ್ತ ಸಮಯದಲ್ಲಿ ಮಾತನಾಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ: ಲೇಖಕ ರವಿ ಹಂಜ್ ಬರೆದ 'ಬಸವ ಮಂಟಪ' ಪುಸ್ತಕದಲ್ಲಿ ಬಸವಣ್ಣ ಮತ್ತು ಲಿಂಗಾಯತ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ ಎಂದು ಆರೋಪದ ಮೇಲೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದ್ದು, ಲೇಖಕರು ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿವಾದದ ಕುರಿತಂತೆ ಮೌನ ವಹಿಸಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಈ ಕುರಿತಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬಸವ ಮಂಟಪ ವಿವಾದ: ಸಿದ್ದರಾಮಯ್ಯ ಮೌನಕ್ಕೆ ಸಚಿವರ ಪ್ರತಿಕ್ರಿಯೆ ಏನು?
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬಸವಣ್ಣ ಒಂದೇ ಜಾತಿಗೆ ಒಂದೇ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳಿದ್ದಾರೆ. ವಿವಾದದ ಬಗ್ಗೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಿದ್ದಾರೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗಿಲ್ಲ, ಸಣ್ಣ ಪ್ರಮಾಣದಲ್ಲಿ ಆಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಬರಿ ಲಿಂಗಾಯತರಷ್ಟೇ ಅಲ್ಲ, ಬೇರೆ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಬಸವಣ್ಣನವರ ಬಗ್ಗೆ ತಿರುಚಿ ಬರೆಯುವರಿಗೆ ವಿವಾದಾತ್ಮಕವಾಗಿ ಮಾತನಾಡುವವರಿಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮೌನದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ಬಸವಣ್ಣನವರ ಬಗ್ಗೆ ಮಾತನಾಡುವಂತದ್ದು, ಕೇವಲ ಜಯಂತಿ ಭಾಷಣಕ್ಕೆ ಮಾತ್ರ ಸೀಮಿತ ಆಗಬಾರದು. ಎಲ್ಲರೂ ಒಟ್ಟಾಗಿ ಕೈಜೋಡಿಸಬೇಕು. ಬಸವಣ್ಣ ಒಂದೇ ಜಾತಿಗೆ ಒಂದೇ ಧರ್ಮಕ್ಕೆ ಸೇರಿದವರಲ್ಲಎಲ್ಲರಿಗೂ ಸೇರಿದವರು. ಅದಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಆಗಬೇಕಿತ್ತು ಆಗಿಲ್ಲ. ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡುವಾಗ ಮಾತಾಡ್ತಾರೆ ಎಂದು ಸಮರ್ಥಿಸಿದರು.
ಬಸವಣ್ಣನವರನ್ನು ಪೌರಾಣಿಕ ವ್ಯಕ್ತಿಯಾಗಿ ಬಿಂಬಿಸುವ ಯತ್ನ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದನ್ನು ನಾನು ಈ ಹಿಂದೆಯೇ ಹುಬ್ಬಳ್ಳಿಯಲ್ಲಿ ಹೇಳಿದ್ದೆ ಹುಷಾರಾಗಿರಿ ಅಂತ. ಈಗಲೂ ಬಸವಣ್ಣನ ಅನುಯಾಯಿಗಳು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದರು.
ಇದು ಪ್ರತಿ ವರ್ಷಕ್ಕೆ ಒಂದು ಸಾರಿ ಹಬ್ಬ ಹುಣ್ಣಿಮೆ ಬಂದಂಗೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಬರುತ್ತದೆ ಎಂದ ಹೇಳಿದ ಜಾರಕಿಹೊಳಿದ್ದಾರೆ. ಈ ಬಗ್ಗೆ ಹಿಂದೆ ಉಮೇಶ್ ಕತ್ತಿ ಅವರು ಹೇಳುತ್ತಿದ್ದರು. ಅದನ್ನೇ ಬಾಲಚಂದ್ರ ಜಾರಕಿಹೊಳಿ ಹೇಳಿರಬಹುದು. ಎ.ಎಸ್. ಪಾಟೀಲ ನಡಹಳ್ಳಿ ಅವರು ಹೇಳುತಿದ್ದರು ಅವರವರ ಇಚ್ಛೆ. ಅದು ಅವರ ವೈಯಕ್ತಿಕ ವಿಚಾರ ಎಂದು ಸಚಿವರು ತಿಳಿಸಿದರು.
ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಆಗಬೇಕು ಅದಕ್ಕೆ ನಮ್ಮ ಸಹಮತ ಇದೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅದನ್ನು ಸರಕಾರ ಮಾಡಬೇಕು ಅದಕ್ಕೆ ನಮ್ಮ ಸಹಮತ ಇದೆ ಎಂದರು.



