Basava Jayanti 2022: ಬಸವನ ಬಾಗೇವಾಡಿಯಲ್ಲಿ ಮೂರು ದಿನಗಳ ಕಾಲ ಬಸವ ಜಯಂತಿ ಆಚರಣೆ!
ವಿಶ್ವಗುರು ಬಸವಣ್ಣವರ ಜಯಂತಿಯನ್ನು ಅವರ ಹುಟ್ಟೂರಿನಲ್ಲೇ ಆಚರಿಸಿಬೇಕು ಅನ್ನೋದು ಬಹುವರ್ಷಗಳ ಕನಸಾಗಿತ್ತು. ಬಸವಾಭಿಮಾನಿಗಳು, ಜನಪ್ರತಿನಿಧಿಗಳು ಕೂಡ ಈ ವಿಚಾರಕ್ಕೆ ಧ್ವನಿಯಾಗಿದ್ದರು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನು ನೀಡಲಾಗಿತ್ತು.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಏ.30): ವಿಶ್ವಗುರು ಬಸವಣ್ಣವರ ಜಯಂತಿಯನ್ನು (Basava Jayanti) ಅವರ ಹುಟ್ಟೂರಿನಲ್ಲೇ ಆಚರಿಸಿಬೇಕು ಅನ್ನೋದು ಬಹುವರ್ಷಗಳ ಕನಸಾಗಿತ್ತು. ಬಸವಾಭಿಮಾನಿಗಳು, ಜನಪ್ರತಿನಿಧಿಗಳು ಕೂಡ ಈ ವಿಚಾರಕ್ಕೆ ಧ್ವನಿಯಾಗಿದ್ದರು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನು ನೀಡಲಾಗಿತ್ತು. ಅಂತಿಮವಾಗಿ ಸರ್ಕಾರ ಬಸವೇಶ್ವರರ ಹುಟ್ಟೂರಲ್ಲೆ ಬಸವ ಜಯಂತಿ ಆಚರಣೆಗೆ ಬಸವಾಭಿಮಾನಿಗಳು ಹೋರಾಟದ ಎಚ್ಚರಿಕೆ ನೀಡಿದ್ದರು. ಸದ್ಯ ಸರ್ಕಾರ (Karnataka Govt) ಹುಟ್ಟೂರಲ್ಲೆ ಬಸವ ಜಯಂತಿ ಆಚರಣೆಗೆ ಆದೇಶ ಹೊರಡಿಸಿದ್ದು ಬಸವಾಭಿಮಾನಿಗಳು ಸಂಸತಗೊಂಡಿದ್ದಾರೆ.
ಪ್ರಸಕ್ತ ವರ್ಷದಿಂದಲೇ ಆದೇಶ ಜಾರಿಗೆ: ಬಸವ ಜಯಂತಿಯನ್ನ ಶ್ರೀ ಜಗಜ್ಯೋತಿ ಬಸವೇಶ್ವರರ ಹುಟ್ಟೂರಿನಲ್ಲೆ ಆಚರಿಸಬೇಕು ಎನ್ನುವ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಪ್ರಸಕ್ತ ವರ್ಷದಿಂದಲೇ ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಆಚರಣೆಗೆ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ಬಸವನ ಬಾಗೇವಾಡಿಯಲ್ಲಿ ಮೇ 3ರಂದು ಬಸವ ಜಯಂತಿಯನ್ನು ರಜೆ ಸಹಿತ ಆಚರಿಸಲಾಗುತ್ತಿದೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಬಸವಾಭಿಮಾನಿಗಳಲ್ಲಿ ಸಂತಸ ತಂದಿದೆ.
ಮುತ್ತಿಡಲು ಹೋದ ಸಿಎಂಗೆ ಹಾಯಲು ಬಂದ ಗೋವು: ಅಪಾಯದಿಂದ ಪಾರಾದ ಬೊಮ್ಮಾಯಿ..!
ಹಲವು ವರ್ಷಗಳಿಂದ ಅರ್ಥಪೂರ್ಣ ಬೇಡಿಕೆಯಾಗಿತ್ತು: ವಿಶ್ವಗುರು ಬಸವಣ್ಣನವರ ಜಯಂತಿ, ರಾಷ್ಟ್ರೀಯ ಉತ್ಸವವನ್ನು ಅವರ ಹುಟ್ಟೂರಾದ ಬಸವನ ಬಾಗೇವಾಡಿಯಲ್ಲೇ ಆಚರಿಸಿ ಅನ್ನೋದು ಬಹುದಿನಗಳ ಬೇಡಿಕೆಯಾಗಿತ್ತು. ಪ್ರತಿ ವರ್ಷ ರಾಜ್ಯ ಸರ್ಕಾರ ಬಸವ ಜಯಂತಿಯನ್ನು ಬೆಂಗಳೂರಿನಲ್ಲಿ ಆಚರಿಸಿಕೊಂಡು ಬರಲಾಗ್ತಿತ್ತು. ಬಸವ ಜಯಂತಿ ಅರ್ಥಪೂರ್ಣವಾಗ್ಬೇಕಾದರೆ ಬಸವಣ್ಣನವರ ಹುಟ್ಟೂರು ಬಸವನಬಾಗೇವಾಡಿಯಲ್ಲಿ ಆಚರಿಸಿ ಅನ್ನೋ ಕೂಗು ಹೆಚ್ಚಾಗಿತ್ತು. ಈ ವಿಚಾರದಲ್ಲಿ ಈ ಹಿಂದೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗಿದೆ.
ವಿಧಾನಸೌಧದಲ್ಲು ಪ್ರತಿಧ್ವನಿಸಿದ್ದ ಬಸವ ಜಯಂತಿ ವಿಚಾರ: ಕಳೆದ ವಿಧಾನಸಭಾ ಅಧಿವೇಶನದಲ್ಲೂ ಈ ವಿಚಾರ ಪ್ರತಿ ಧ್ವನಿಸಿತ್ತು. ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್ ವಿಷಯ ಪ್ರಸ್ತಾಪಿಸಿದರು., ಸರಕಾರ ಈ ಬಗ್ಗೆ ಗಮನ ಹರಿಸಬೇಕು ಅಂತ ಮನವಿ ಮಾಡಿದ್ದರು. ಆ ಬಳಿಕ ಬಸವನಾಡಿನಲ್ಲಿ ಬಸವ ಜಯಂತಿ ಆಚರಣೆ ಬಸವಣ್ಣನವರ ಜನ್ಮಸ್ಥಳದಲ್ಲೇ ಆಗಬೇಕು ಅನ್ನೋದು ಮುನ್ನೆಲೆಗೆ ಬಂದಿತ್ತು.
ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಸ್ವಾಮೀಜಿಗಳು, ಬಸವಾಭಿಮಾನಿಗಳು: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲೇ ಬಸವ ಜಯಂತಿ ಆಚರಿಸಬೇಕು ಅಂತ ಸ್ವಾಮೀಜಿಗಳು, ಬಸವಾಭಿಮಾನಿಗಳು, ಶಾಸಕರ ಒತ್ತಾಯವಾಗಿತ್ತು. ಈ ವಿಚಾರವಾಗಿಯೂ ಹೋರಾಟ ಮಾಡಲಾಗಿತ್ತು. ಬಸವನ ಬಾಗೇವಾಡಿಯ ಮಠಾಧೀಶರು, ಹೋರಾಟಗಾರರು ಜಯಂತಿ ಆಚರಣೆ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಈ ಬಾರಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಸದನದಲ್ಲಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಈ ವಿಚಾರ ಪ್ರಸ್ತಾಪಿಸಿರೋದ್ರಿಂದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿತ್ತು.
ಬಸವ ತತ್ವ ಪ್ರಚಾರಕ್ಕೆ ಸಹಕಾರಿ: ಬಸವನ ಬಾಗೇವಾಡಿಯಲ್ಲಿ ಜಯಂತಿ ಆಚರಣೆ ಮಾಡೋದ್ರಿಂದ ಬಸವ ತತ್ವಗಳ ಪ್ರಸಾರವಾಗಲು ಸಹಕಾರಿಯಾಗುತ್ತೆ. ಅಲ್ದೆ ಬಸವಣ್ಣನವರ ಹುಟ್ಟು, ಬಾಲ್ಯದ ಜೀವನ, ಈ ಭಾಗದ ಅಗ್ರಹಾರಗಳು ಜನರಿಗೆ ಪರಿಚಯವಾಗುತ್ತವೆ. ಜೊತೆಗೆ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ವರ್ಷದಿಂದಲೇ ಬಸವನಬಾಗೇವಾಡಿಯಲ್ಲಿ ರಾಷ್ಟ್ರೀಯ ಬಸವ ಉತ್ಸವ, ಹಾಗೂ ಬಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿ ಅನ್ನೋ ಬೇಡಿಕೆ ಇತ್ತು. ಇದೆಲ್ಲದಕ್ಕು ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಸ್ಪಂದಿಸಿದೆ.
Vijayapura ಬೇಸಿಗೆ ಬಿಸಿಗಾಳಿ-ಸಿಡಿಲು ನಿಭಾಯಿಸಲು ಜನತೆಗೆ ಸಲಹೆ ನೀಡಿದ ಹೊಸ ಜಿಲ್ಲಾಧಿಕಾರಿ!
ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಜಿಲ್ಲೆಯ ಜನಪ್ರತಿನಿಧಿಗಳು: ಸರ್ಕಾರ ಬಸವ ಜಯಂತಿಯನ್ನು ಬಸವಣ್ಣನವರ ಹುಟ್ಟೂರಿನಲ್ಲಿ ಆಚರಿಸೋ ನಿರ್ಧಾರ ಮಾಡುವ ಮೂಲಕ ರಾಷ್ಟ್ರೀಯ ಬಸವ ಉತ್ಸವಕ್ಕೆ ಅರ್ಥಪೂರ್ಣಗೊಳಿಸಿದೆ. ಈ ವರ್ಷ ಮೂರು ದಿನಗಳ ಕಾಲ ಬಸವ ಜಯಂತಿ ಆಚರಣೆ ಕಾರ್ಯಕ್ರಮ ನಡೆಯುತ್ತಿರೋದು ಬಸವಾಭಿಮಾನಿಗಳಲ್ಲಿ ಸಂತಸ ತಂದಿದೆ. ಇತ್ತ ಸಂಸದ ರಮೇಶ ಜಿಗಜಿಣಗಿ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ಮಾಜಿ ಸಚಿವ ಎಂ ಬಿ ಪಾಟೀಲ್, ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ನಗರ ಶಾಸಕ ಬನಗೌಡ ಪಾಟೀಲ್, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಿಂದಗಿ ಶಾಸಕ ರಮೇಶ ಬೂಸನೂರು, ದೇ.ಹಿಪ್ಪರಗಿ ಶಾಸಕ ಸೋಮನಗೌಡ ಸಾಸನೂರು ಸೇರಿದಂತೆ ಜಿಲ್ಲೆಯ ಬಹುತೇಕ ನಾಯಕರು, ಜನಪ್ರತಿನಿಧಿಗಳು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.