ಬೆಂಗಳೂರು(ನ.04): ‘ಕೊರೋನಾ ಚಿಕಿತ್ಸೆಯಲ್ಲಿ ಬ್ಯುಸಿ ಇದ್ದೇವು. ಹೀಗಾಗಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಯಾವಾಗ ಡಿಸ್ಚಾರ್ಜ್‌ ಆಯ್ತು ಎಂಬುದು ಗೊತ್ತಾಗಲಿಲ್ಲ’ ಎಂದು ಸಿಸಿಬಿಗೆ ಬ್ಯಾಪಿಸ್ಟ್‌ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ಸೋಂಕು ನೆಪದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ಯಾಪಿಸ್ಟ್‌ ಆಸ್ಪತ್ರೆಯಿಂದ ಡಿ.ಜೆ.ಹಳ್ಳಿ- ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್‌ ಹಾಗೂ ಕಾಂಗ್ರೆಸ್‌ ಮುಖಂಡ ಸಂಪತ್‌ ರಾಜ್‌ ದಿಢೀರ್‌ ನಾಪತ್ತೆಯಾಗಿದ್ದಾರೆ. ಆರೋಪಿ ಬಿಡುಗಡೆಗೆ ಮುನ್ನ ಸಿಸಿಬಿ ಗಮನಕ್ಕೆ ತರಬೇಕು ಎಂದು ಆಸ್ಪತ್ರೆಗೆ ಅಧಿಕಾರಿಗಳು ಸೂಚಿಸಿದ್ದರು. ಹೀಗಿದ್ದರೂ ಸಿಸಿಬಿಗೆ ತಿಳಿಸದೆ ಮಾಜಿ ಮೇಯರ್‌ರನ್ನು ಆಸ್ಪತ್ರೆ ವೈದ್ಯರು ಡಿಸ್ಚಾಜ್‌ರ್‍ ಮಾಡಿದ್ದರು. ಈ ಸಂಬಂಧ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಿಸಿಬಿ ವಿಚಾರಣೆ ನಡೆಸಿತ್ತು.

ಈ ವೇಳೆ ‘ತಮಗೆ ಸಂಪತ್‌ ಡಿಸ್ಚಾಜ್‌ರ್‍ ಆಗಿದ್ದು ಗೊತ್ತಾಗಲಿಲ್ಲ. ಕೊರೋನಾ ಸೋಂಕಿತರ ಶ್ರುಶೂಷೆಯಲ್ಲಿ ತೊಡಗಿಕೊಂಡಿದ್ದೇವು. ಆ ಗಡಿಬಿಡಿಯಲ್ಲಿ ಸಂಪತ್‌ ರಾಜ್‌ ಬಗ್ಗೆ ಹೆಚ್ಚು ನಿಗಾವಹಿಸಲು ಸಾಧ್ಯವಾಗಲಿಲ್ಲ. ನಮ್ಮಿಂದ ತಪ್ಪಾಗಿದೆ’ ಎಂದು ಸಿಸಿಬಿ ಎಸಿಪಿ ಬಿ.ಆರ್‌. ವೇಣುಗೋಪಾಲ್‌ ಮುಂದೆ ವೈದ್ಯರು ಗೋಳಾಡಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರು ಗಲಭೆ ಪ್ರಕರಣ: ಸಂಪತ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ

‘ನಿಮ್ಮ ತಪ್ಪಿನಿಂದ ನಮಗೆ ತೊಂದರೆಯಾಗಿದೆ. ನಿಮಗೆ ಪ್ರಕರಣದ ಗಂಭೀರತೆ ಅರ್ಥವಾಗಬೇಕಿತ್ತು. ಸಾಮಾನ್ಯ ರೋಗಿಯನ್ನು ಡಿಸ್ಚಾಜ್‌ರ್‍ ಮಾಡಿದಂತೆ ಸಂಪತ್‌ ರಾಜ್‌ ಪ್ರಕರಣದಲ್ಲಿ ಸಹ ನೀವು ನಡೆದುಕೊಂಡಿದ್ದು ಸರಿಯಲ್ಲ. ನಿಮಗೆ ಎರಡು ಬಾರಿ ನೋಟಿಸ್‌ ಸಹ ಕೊಡಲಾಗಿತ್ತು. ಉಡಾಫೆ ಉತ್ತರ ನೀಡಬೇಡಿ’ ಎಂದು ವೈದ್ಯರಿಗೆ ಸಿಸಿಬಿ ಅಧಿಕಾರಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಪೆಚ್ಚು ಮೊರೆ ಹಾಕಿಕೊಂಡ ವೈದ್ಯರು ಹಾಗೂ ಸಿಬ್ಬಂದಿ, ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಕೊರೋನಾ ಸೋಂಕಿತರ ಚಿಕಿತ್ಸೆ ನೆಪ ಹೇಳಿ ಜಾರಿಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮಾಜಿ ಮೇಯರ್‌ ಅರ್ಜಿ ವಿಚಾರಣೆ ಮುಂದೂಡಿಕೆ

ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಗೆ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 70ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ(ಎಸ್ಸಿ,ಎಸ್ಟಿ ವಿಶೇಷ ನ್ಯಾಯಾಲಯ) ನ.5ಕ್ಕೆ ಮುಂದೂಡಿದೆ. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿ ಆದೇಶಿಸಿದ್ದಾರೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಗಲಭೆಗೆ ಒಳಸಂಚು ರೂಪಿಸಿರುವುದಾಗಿ ತಮ್ಮ ವಿರುದ್ಧ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ, ಎಲ್ಲಿ ಸಂಚು ನಡೆಸಲಾಗಿದೆ, ಯಾರ ಜೊತೆ ಸಂಚು ಮಾಡಲಾಗಿದೆ ಎಂಬುದುನ್ನು ತಿಳಿಸಿಲ್ಲ. ಅಲ್ಲದೆ, ಗಲಭೆಯಲ್ಲಿ ಭಾಗಿಯಾಗಿರುವ ಬಗ್ಗೆ ಪುರಾವೆಗಳು ಇಲ್ಲ. ಘಟನೆ ಸಂಬಂಧ 67 ಎಫ್‌ಐಆರ್‌ಗಳು ದಾಖಲಾಗಿವೆ. ಯಾವುದರಲ್ಲಿಯೂ ತಮ್ಮ ಹೆಸರು ಉಲ್ಲೇಖಿಸಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಸಂಪತ್‌ರಾಜ್‌ ಅರ್ಜಿಯಲ್ಲಿ ಕೋರಿದ್ದರು.

ಸಂಪತ್‌ ರಾಜ್‌ ಸಿಸಿಬಿ ಬಲೆಗೆ?

ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿನ ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯಿಂದ ಪರಾರಿಯಾಗಿದ್ದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರು ಮಂಗಳವಾರ ಸಿಸಿಬಿ ಬಲೆಗೆ ಬಿದ್ದಿದ್ದಾರೆ ಎಂಬ ವದಂತಿ ಹಬ್ಬಿದೆ.

ಮಾಜಿ ಮೇಯರ್‌ ಆಪ್ತರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡವು, ನಗರದಲ್ಲಿ ಸಂಪತ್‌ ರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಂಧನ ವಿಚಾರವನ್ನು ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ನಿರಾಕರಿಸಿದ್ದಾರೆ.

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ವೇಳೆ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ಕೃತ್ಯದಲ್ಲಿ ಸಂಪತ್‌ ರಾಜ್‌ ವಿರುದ್ಧ ಸಿಸಿಬಿ ಆರೋಪ ಪಟ್ಟಿ ಸಲ್ಲಿಸಿದೆ. ಈ ಕೃತ್ಯದಲ್ಲಿ ಆರೋಪಿಯಾಗಿದ ಒಂದು ಬಾರಿ ಸಿಸಿಬಿ ವಿಚಾರಣೆ ಎದುರಿಸಿದ್ದ ಮಾಜಿ ಮೇಯರ್‌, ಬಳಿಕ ಕೊರೋನಾ ಸೋಂಕು ನೆಪದಲ್ಲಿ ಬ್ಯಾಪಿಸ್ಟ್‌ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ರಾತ್ರೋರಾತ್ರಿ ಡಿಸ್ಚಾಜ್‌ರ್‍ ಮಾಡಿಕೊಂಡು ಅವರು ನಾಪತ್ತೆಯಾಗಿದ್ದರು.