Bengaluru: ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್‌ ಅಧಿಕಾರಿ ಸಾವು

*   ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
*   ಬ್ಯಾಂಕ್‌ ಉದ್ಯೋಗಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ
*  ಮೇಲೆ ಬಿದ್ದ ಮಹಿಳೆ ಮೇಲೆ ಲಾರಿ ಚಕ್ರ ಹರಿದು ಸ್ಥಳದಲ್ಲೇ ಕೊನೆಯುಸಿರು
 

Bank Officer Dies Due to BBMP Garbage Truck Accident in Bengaluru grg

ಬೆಂಗಳೂರು(ಏ.19): ಬಿಬಿಎಂಪಿ(BBMP) ಕಸದ ಲಾರಿ ಹರಿದು ಮಹಿಳೆಯೊಬ್ಬರು(Woman) ಮೃತಪಟ್ಟ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಆರ್‌.ಆರ್‌.ನಗರ ನಿವಾಸಿ ಪದ್ಮಿನಿ(40) ಮೃತ(Death) ದುರ್ದೈವಿ. ಖಾಸಗಿ ಬ್ಯಾಂಕ್‌ವೊಂದರ ಡೆಪ್ಯೂಟಿ ಮ್ಯಾನೇಜರ್‌ ಆಗಿರುವ ಪದ್ಮಿನಿ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಸಂಜೆ 7.10ರ ಸುಮಾರಿಗೆ ಮನೆಗೆ ತೆರಳುತ್ತಿದ್ದರು. ಈ ವೇಳೆ ನಾಯಂಡಹಳ್ಳಿ ರಿಂಗ್‌ ರಸ್ತೆಯಲ್ಲಿ ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ಬಿಬಿಎಂಪಿ ಕಸದ ಲಾರಿ, ನಾಯಂಡಹಳ್ಳಿ ರೈಲ್ವೆ ಅಂಡರ್‌ ಪಾಸ್‌ ಬಳಿ ವೇಗವಾಗಿ ಬಂದು ಪದ್ಮಿನಿ ಅವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಪದ್ಮಿನಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಕಸದ ಲಾರಿಯ ಮುಂದಿನ ಎಡಭಾಗದ ಚಕ್ರ ಪದ್ಮಿನಿ ಅವರ ಸೊಂಟದ ಮೇಲೆ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಪದ್ಮಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಟರಾಯನಪುರ ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅವಘಡ, ದಾಖಲೆಗಳು ನಾಶ

ಚಾಲಕ ಪರಾರಿ:

ಅಪಘಾತದ(Accident) ಸುದ್ದಿ ತಿಳಿದು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತಕ್ಕೆ ಬಿಬಿಎಂಪಿ ಕಸದ ಲಾರಿ(Garbage Truck) ಚಾಲಕನ ವೇಗದ ಚಾಲನೆ ಹಾಗೂ ಅಜಾಗರೂಕತೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತದ ಬಳಿಕ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿಯನ್ನು ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣಗಳು

ಪ್ರಕರಣ-1

ಮಾ.21ರಂದು ಹೆಬ್ಬಾಳ ಬಳಿ ರಸ್ತೆ ದಾಟುವಾಗ 15 ವರ್ಷ ಅಕ್ಷಯಾ ಎಂಬ ಬಾಲಕಿಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಸೊಂಟದ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಬಿಬಿಎಂಪಿ ಕಸದ ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಗೆ ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಕ್ಷಯಾ ಬಲಿಯಾಗಿದ್ದಳು. ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ-2

ಮಾ.31ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಯಲಹಂಕ ನಿವಾಸಿ ರಾಮಯ್ಯ(60) ಎಂಬುವವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ರೈತರಾಗಿದ್ದ ರಾಮಯ್ಯ ಸಂಪಿಗೆಹಳ್ಳಿಯಲ್ಲಿ ಕುಟುಂಬದ ಕಾರ್ಯಕ್ರವೊಂದರಲ್ಲಿ ಭಾಗವಹಿಸಲು ದ್ವಿಚಕ್ರವಾಹನದಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿತ್ತು. ಬಿಬಿಎಂಪಿ ಕಸದ ಲಾರಿ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಗೆ ರಾಮಯ್ಯ ಪ್ರಾಣ ತೆತ್ತಿದ್ದರು. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸರ್ಕಾರಿ ಬಸ್‌ ಹರಿದು ತಂಗಿ ಸಾವು; ಸಹೋದರಗೆ ಗಾಯ

ಬೆಂಗಳೂರು: ಕೆಎಸ್‌ಆರ್‌ಟಿಸಿ(KSRTC) ಬಸ್‌ ಡಿಕ್ಕಿಯಾದ ಪರಿಣಾಮ ಬೈಕ್‌ ಹಿಂದೆ ಕುಳಿತಿದ್ದ ತಂಗಿ ಮೇಲೆ ಬಸ್‌ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟು, ಅಣ್ಣ ಗಾಯಗೊಂಡ ಘಟನೆ ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಂತಾಮಣಿ ಮೂಲದ ಲಕ್ಷ್ಮಿದೇವಿ(50) ಮೃತ ದುರ್ದೈವಿ. ಆಕೆಯ ಅಣ್ಣ ಕೋಡಿಪಾಳ್ಯ ನಿವಾಸಿ ರಘುನಾಥ ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Accident: ಓವರ್‌ಟೇಕ್‌ ವೇಳೆ ಬೈಕ್‌ಗೆ ಲಾರಿ ಡಿಕ್ಕಿ: ಯುವತಿ ಸಾವು

ಚಿಂತಾಮಣಿ ಮೂಲದ ಲಕ್ಷ್ಮಿದೇವಿ ಅವರು ಆಸ್ಪತ್ರೆಗೆ ಹೋಗುವ ಸಲುವಾಗಿ ಅಣ್ಣ ರಘುನಾಥ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ 8.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ರಘುನಾಥ್‌ ಅವರು ತಂಗಿ ಲಕ್ಷ್ಮಿದೇವಿ ಅವರನ್ನು ಕೂರಿಸಿಕೊಂಡು ಮಾಧವನಗರದ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದರು. ಮಾರ್ಗದ ಅರಮನೆ ರಸ್ತೆಯ ಗೇಟ್‌ ಸಂಖ್ಯೆ 7ರ ಬಳಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದಿರುವ ಕೆಎಸ್‌ಆರ್‌ಟಿಸಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಣ್ಣ-ತಂಗಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಮುಂದಿನ ಚಕ್ರ ಲಕ್ಷ್ಮಿದೇವಿ ಅವರ ತಲೆಯ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಣ್ಣ ರಘುನಾಥ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೆ ಕೆಎಸ್‌ಆರ್‌ಟಿಸಿ ಚಾಲಕನ ಅಜಾಗರೂಕ ಚಾಲನೆ ಹಾಗ ಅತಿಯಾದ ವೇಗವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಸ್‌ ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios