ಬೆಂಗಳೂರು[ಜೂ.25]: ಅನೈತಿಕ ಸಂಬಂಧಕ್ಕಾಗಿ ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಕಹಿಮುದ್ದೀನ್ (18) ಹಾಗೂ ಶಾಂತಿ (29) ಬಂಧಿತ ಆರೋಪಿಗಳು. ಇವರು ಜೂ.22ರಂದು ಕಣ್ಣಪ್ಪನನ್ನು (27) ಆರೋಪಿಗಳು ಹತ್ಯೆ ಮಾಡಿದ್ದರು.

ಮೂಲತಃ ಶಿವಮೊಗ್ಗ ಜಿಲ್ಲೆಯ ಕಣ್ಣಪ್ಪ ನಾಲ್ಕು ವರ್ಷಗಳ ಹಿಂದೆ ಶಾಂತಿ ಯನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗು ಇದೆ. ಕಣ್ಣಪ್ಪ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಆಗಿದ್ದ. ಶಾಂತಿ ಮನೆ ಕೆಲಸ ಮಾಡಿಕೊಂಡಿದ್ದಳು.

ಮನೆ ಕೆಲಸಕ್ಕೆ ಹೋಗುತ್ತಿದ್ದ ಸ್ಥಳದಲ್ಲಿ ಶಾಂತಿಗೆ ಕಹಿಮುದ್ದೀನ್‌ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಅಕ್ಕ ಪಕ್ಕದವರ ಮೂಲಕ ಪತಿ ಕಣ್ಣಪ್ಪನಿಗೆ ತಿಳಿದಿತ್ತು. ಹಿಂಬಾಲಿಸಿದ ಪತಿ ಕಣ್ಣಪ್ಪಗೆ ಆಕೆಯ ಅನೈತಿಕ ಸಂಬಂಧದ ವಿಚಾರ ಖಚಿತವಾಗಿತ್ತು. ಹೀಗಾಗಿ, ಪತ್ನಿಗೆ ಆತನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದ. ಆದರೂ ಶಾಂತಿ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ಹಲವು ಬಾರಿ ದಂಪತಿ ನಡುವೆ ಜಗಳ ನಡೆದಿತ್ತು.

ಪತಿ ಇದ್ದರೆ ನಮ್ಮ ಅನೈತಿಕ ಸಂಬಂಧಕ್ಕೆ ತೊಂದರೆ, ಹೀಗಾಗಿ ಪತಿಯನ್ನು ಕೊಲ್ಲಲು ಶಾಂತಿ ಪ್ರೇರಣೆ ನೀಡಿದ್ದಳು. ಜೂ.22ರಂದು ಆರೋಪಿ ಮನೆಯಲ್ಲಿ ಮಲಗಿದ್ದ ವೇಳೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದರು. ಮೂರು ವರ್ಷದ ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ನೋಡಿ ಚೀರಾಡಿತ್ತು. ಸ್ಥಳೀಯರು ಕೂಡಲೇ ಬಂದು ಕಣ್ಣಪ್ಪನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಶಾಂತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.