ಬೆಂಗಳೂರು ತಿಂಡೀಸ್ ಚಹಾ ಕೊಡುವ 3ಡಿ ಜಾಹಿರಾತು; ಸಿಲಿಕಾನ್ ಸಿಟಿ ಜನರಿಂದ ಭಾರಿ ಆಕ್ರೋಶ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಗಳೂರು ತಿಂಡೀಸ್ ಹೋಟೆಲ್‌ನ ಚಹಾ ಕೊಡುವ 3ಡಿ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಹೊಸ ಮಾದರಿಯ ಜಾಹೀರಾತುಗಳು ಅಪಘಾತಗಳಿಗೆ ಆಹ್ವಾನ ನೀಡುತ್ತವೆ ಎಂಬ ಪ್ರಶ್ನೆಗಳು ಎದ್ದಿವೆ.
ಬೆಂಗಳೂರು (ಅ.01): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶವಿಲ್ಲ. ಆದರೆ, ವ್ಯಾಪಾರಿಗಳು, ಉದ್ಯಮಿಗಳು ತಮ್ಮ ವ್ಯಾಪಾರ ವಹಿವಾಟಿಗೆ ಹೊಸ ಜಾಹೀರಾತು ಮಾರ್ಗವನ್ನು ಹುಡುಕಿಕೊಂಡಿದ್ದು, ಬೆಂಗಳೂರು ರಸ್ತೆಯ ಪಕ್ಕದಲ್ಲಿ 3ಡಿ ಜಾಹೀರಾತು ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಆಗುವ ನಗರವೆಂಬ ಅಪಖ್ಯಾತಿಯನ್ನು ಬೆಂಗಳೂರು ಹೊಂದಿದೆ. ಅದರಲ್ಲಿಯೂ 1 ಕೋಟಿಗೂ ಅಧಿಕ ವಾಹನಗಳಿದ್ದು, ಟ್ರಾಫಿಕ್ ಜಾಮ್ ಜೊತೆಗೆ ಸಣ್ಣಪುಟ್ಟ ಅಪಘಾತಗಳಿಗೇನೂ ಕಡಿಮೆ ಇಲ್ಲ. ಹೀಗಿರುವಾಗ ಬೆಂಗಳೂರಿನಲ್ಲಿ ವಾಹನ ಸವಾರರ ಗಮನ ಸೆಳೆಯುವಂತೆ 3ಡಿ ಜಾಹೀರಾತು ಫಲಕ ಅಳವಡಿಕೆ ಮಾಡಿದರೆ ಅಫಘಾತಗಳ ಸರಣಿಯೇ ಸಂಭವಿಸಬಹುದು. ಆದರೆ, ಇದರ ಪರಿಜ್ಞಾನವಿಲ್ಲದೆ ಬೆಂಗಳೂರು ತಿಂಡೀಸ್ ವತಿಯಿಂದ ಆನ್‌ಲೈನ್‌ನಲ್ಲಿ ಸೃಜನಾತ್ಮಕತೆಯಿಂದ 3ಡಿ ಜಾಹೀರಾತು ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದೆ.
ಇದನ್ನೂ ಓದಿ: ಹೃದಯ, ಕಿಡ್ನಿ, ಶ್ವಾಸಕೋಶ, ಕಣ್ಣು ಬಹು ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದ ಮಂಜುಳಾ!
ಇನ್ನು ಬೆಂಗಳೂರು ತಿಂಡೀಸ್ ಹೋಟೆಲ್ ಉದ್ಯಮದಾರರಿಂದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿರುವ 3ಡಿ ಜಾಹೀರಾತನ್ನು ವೇಣುಗೋಪಾಲ್ (@ksvenu247) ಎನ್ನುವವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟರ್) ಖಾತೆಯ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನು ಸುಮಾರು 1.4 ಲಕ್ಷ ಜನರು ವೀಕ್ಷಣೆ ಮಾಡಿದ್ದು, ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಜಾಹೀರಾತು ಎಲ್ಲಿದೆ? ಇದನ್ನು ಯಾರು ಅಳವಡಿಕೆ ಮಾಡಿದ್ದು? ಇದರಿಂದ ವಾಹನ ಸವಾರರ ಗಮನ ರಸ್ತೆಯಲ್ಲಿ ಸಂಚಾರದ ಮೇಲೆ ಬಿಟ್ಟು ಜಾಹೀರಾತು ನೋಡುವುದರ ಮೇಲೆ ಡೈವರ್ಟ್ ಆಗಲಿದ್ದು, ಇದನ್ನು ಕೂಡಲೇ ತೆರವು ಮಾಡಬೇಕು ಎಂದು ನೆಟ್ಟಿಗರು ಆಗ್ರಹ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಮುಖ ರಸ್ತೆಯೊಂದರ ಪಕ್ಕದಲ್ಲಿ ಈಗಾಗಲೇ ಧಾರಾವಾಹಿಗಳಲ್ಲಿ ಪ್ರದರ್ಶನ ಆಗುವ ಜಾಹೀರಾತುಗಳ ಮಾದರಿಯಲ್ಲಿ ಇಲ್ಲಿಯೂ ಸೃಜನಾತ್ಮಕತೆಯನ್ನು ಬಳಸಿ 3ಡಿ ಜಾಹೀರಾತು ಮಾಡಲಾಗಿದೆ. ಇದು ಆನ್‌ಲೈನ್ ವೀಕ್ಷಣೆಗೆ ಮಾತ್ರ ಲಭ್ಯವಿದೆ. ಭೌತಿಕವಾಗಿ ಈ ಜಾಹೀರಾತನ್ನು ಎಲ್ಲಿಯೂ ಅಳವಡಿಕೆ ಮಾಡಿಲ್ಲ. ಜಾಹೀರಾತಿನಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಯೊಂದರ ಬಳಿ ದೊಡ್ಡ ಫ್ಲೆಕ್ಸ್‌ನಲ್ಲಿ ಬೆಂಗಳೂರು ತಿಂಡೀಸ್‌ನ ಕ್ಯಾಂಟೀನ್ ವಾಯ್‌ವಾಲಾ ಚಹಾದ ಗ್ಲಾಸ್‌ಗಳನ್ನು ಹಿಡಿದು ಗಾಜಿನ ಲೋಟವೊಂದಕ್ಕೆ ಚಹಾವನ್ನು ಸುರಿದು ಅದನ್ನು ಗ್ರಾಹಕರಿಗೆ ಕೊಡುತ್ತಾನೆ. ಈ ಜಾಹೀರಾತಿನ ಮುಂದೆ ಪಾರಿವಾಳಗಳ ಹಿಂಡು ಕೂಡ ಪುರ್ರೆಂದು ಹಾರಿ ಹೋಗುತ್ತದೆ. ಇನ್ನು ಈ ಜಾಹೀರಾತಿನಲ್ಲಿ ಬೆಂಗಳೂರು ತಿಂಡೀಸ್ ವತಿಯಿಂದ ಬೆಂಗಳೂರಿನ 3 ಕಡೆಗಳಲ್ಲಿ ಶಾಖೆಗಳನ್ನು ತೆರೆಯಲಾಗಿದೆ ಎಂಬ ಸಂದೇಶವನ್ನು ನೀಡಲಾಗಿದೆ. ಇದು ಆನ್‌ಲೈನ್‌ನಲ್ಲಿ ಜನರನ್ನು ಸೆಳೆಯುವ ಹೊಸ ಜಾಹೀರಾತಿನ ಶೈಲಿ ಆಗಿದೆ.
ಇದನ್ನೂ ಓದಿ: ಕೀರ್ತಿ ಸುರೇಶ್ ನಟಿಸಿದ ಮಹಾನಟಿಯೊಂದಿಗೆ ಒಂದೇ ದಿನದಲ್ಲಿ ಗಂಡ ಹಾಗೂ ಮಗನಾಗಿ ಪಾತ್ರ ಮಾಡಿದ ನಟನಾರು ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಜಾಹೀರಾತು ಪ್ರದರ್ಶನಕ್ಕೆ ಅವಕಾಶವೇ ಇರಲಿಲ್ಲ. ಆದರೆ, ಕೆಲವು ದಿನಗಳ ಹಿಂದೆ ಜಾಹೀರಾತು ಪ್ರದರ್ಶನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಾಮಾಜಿಕ ಕಾರ್ಯಕರ್ತ ಮೃಪಟ್ಟ ಹಿನ್ನೆಲೆಯಲ್ಲಿ ಯಾರೊಬ್ಬರೂ ಇದಕ್ಕೆ ಕಡಿವಾಣ ಹಾಕುವವರಿಲ್ಲವಾಗಿದ್ದಾರೆ. ಇದೀಗ ಬಿಬಿಎಂಪಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಯೋಜನೆಗಳನ್ನು ಜಾರಿಗೊಳಿಸಿ ಎಲ್ಲೆಡೆ ಜಾಹೀರಾತು ಫಲಕ ಅಳವಡಿಕೆಗೆ ವಾಮ ಮಾರ್ಗವನ್ನು ಮಾಡಿಕೊಟ್ಟಿದೆ. ಎಲ್ಲೆಡೆ ಬಿಎಂಟಿಸಿ ಬಸ್ ತಂಗುದಾಣಗಳು (BMTC Bus stops), ಪಾದಾಚಾರಿ ಮೇಲ್ಸೇತುವೆಗಳು (Sky Walks) ಸೇರಿದಂತೆ ವಿವಿಧೆಡೆ ಜಾಹೀರಾತು ಫಲಕಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.