ಬೆಂಗಳೂರು ಕೊರೋನಾ ಸೋಂಕಿತ ಟೆಕ್ಕಿಯ ಪತ್ನಿ ಪರಾರಿ!
ಬೆಂಗಳೂರಿನ ಕೊರೋನಾ ಸೋಂಕಿತ ಗೂಗಲ್ ಟೆಕ್ಕಿ ಪತ್ನಿ ಇಲ್ಲಿಂದ ಪರಾರಿಯಾಗಿದ್ದಾರೆ. ಇದೀಗ ಅವರಿಂದ ಹಲವಾರು ಜನರಿಗೆ ಸೋಂಕು ತಗುಲಿರುವ ಆತಂಕ ಎದುರಾಗಿದೆ.
ಆಗ್ರಾ [ಮಾ.15] : ಕೊರೋನಾ ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ರೀತಿಯ ಕ್ರಮ ಕೈಗೊಳ್ಳುತ್ತಿರುವಾಗಲೇ, ಕೊರೋನಾಗೆ ತುತ್ತಾಗಿದ್ದ ಬೆಂಗಳೂರಿನ ಗೂಗಲ್ ಉದ್ಯೋಗಿಯೊಬ್ಬರ ಪತ್ನಿ ಬೆಂಗಳೂರಿನಿಂದ ಆಗ್ರಾಕ್ಕೆ ಪರಾರಿಯಾದ ಆತಂಕಕಾರಿ ಘಟನೆ ನಡೆದಿದೆ. ಅಷ್ಟುಮಾತ್ರವಲ್ಲ, ಆಕೆ ಇದೀಗ ಇನ್ನೂ ಸಾಕಷ್ಟುಜನರಿಗೆ ರೋಗ ಹಬ್ಬಿಸಿರುವ ಭೀತಿ ಕಾಡತೊಡಗಿದೆ. ಇಷ್ಟೆಲ್ಲಾ ಅವಾಂತರದ ಬಳಿಕ ಆಕೆಯೂ ಇದೀಗ ಕೊರೋನಾ ಸೋಂಕಿಗೆ ತುತ್ತಾಗಿದ್ದಾಳೆ.
ಆಗಿದ್ದೇನು?: ಆಗ್ರಾ ಮೂಲದ ಯುವತಿ ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವಕನ ವರಿಸಿದ್ದಳು. ಬಳಿಕ ಜೋಡಿ ಹನಿಮೂನ್‌ಗೆ ಇಟಲಿ, ಫ್ರಾನ್ಸ್, ಗ್ರೀಸ್‌ಗೆ ತೆರಳಿ ಫೆ.27ಕ್ಕೆ ಬೆಂಗಳೂರಿಗೆ ಮರಳಿತ್ತು.
ದೇಶದಲ್ಲಿ 100 ಜನರಿಗೆ ಸೋಂಕು, 10 ಮಂದಿ ಗುಣಮುಖ.
ಮರಳಿದಾಕ್ಷಣವೇ ಪತಿಗೆ ಜ್ವರ ಕಾಣಿಸಿಕೊಂಡ ಪರಿಣಾಮ, ಆತ ಕೊರೋನಾ ಶಂಕೆ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆ ವೇಳೆ ಆತನಿಗೆ ಸೋಂಕು ತಗುಲಿದ್ದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನ ಪತ್ನಿಯನ್ನು ಪ್ರತ್ಯೇಕವಾಗಿರಲು ಸೂಚಿಸಲಾಗಿತ್ತು. ಈ ನಡುವೆ ನವವಧು ಬೆಂಗಳೂರಿನಲ್ಲಿ ಅಧಿಕಾರಿಗಳಿಗೆ ತಿಳಿಸದೆಯೇ ವಿಮಾನ ನಿಲ್ದಾಣದಿಂದಲೇ ದೆಹಲಿಗೆ ಮರಳಿದ್ದಳು. ಅಲ್ಲಿಂದ ಆಗ್ರಾಕ್ಕೆ ರೈಲಿನಲ್ಲಿ ತೆರಳಿದ್ದಳು.
ಈ ನಡುವೆ ಆಕೆ ನಾಪತ್ತೆಯಾಗಿರುವ ವಿಷಯ ಬೆಂಗಳೂರಿನಿಂದ ಆಗ್ರಾಕ್ಕೆ ತಲುಪಿ, ಅಲ್ಲಿನ ಅಧಿಕಾರಿಗಳು ಆಕೆಯ ಮನೆಗೆ ಧಾವಿಸಿದ್ದರು. ಆದರೆ ಈ ವೇಳೆ ಆಕೆಯ ಪೋಷಕರು, ಆಕೆ ಈಗಾಗಲೇ ಬೆಂಗಳೂರಿಗೆ ಮರಳಿದ್ದಾಳೆ ಎಂದು ಸುಳ್ಳು ಹೇಳಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದ ಬಳಿಕ ಆಕೆಯ ಭೇಟಿಗೆ ಪೋಷಕರು ಅವಕಾಶ ನೀಡಿದ್ದಾರೆ. ಆದರೆ ಆಕೆ ರೋಗ ತಪಾಸಣೆಗೆ ನಿರಾಕರಿಸಿದ್ದಾಳೆ. ಬಳಿಕ ಸಾಕಷ್ಟುಒತ್ತಾಯ, ಮನವೊಲಿಕೆ ಬಳಿಕ ಕುಟುಂಬ ಸದಸ್ಯರ ರಕ್ತವನ್ನು ಪಡೆದು, ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ನವವಧುಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ.
ನಕಾರ: ಈ ನಡುವೆ ನವವಧು ಬೆಂಗಳೂರಿನ ತನ್ನ ಮನೆಗೆ ಬಂದಿರಲಿಲ್ಲ. ಆಕೆ ಹೋಳಿ ಹಬ್ಬ ಆಚರಣೆಗಾಗಿ ಮೊದಲೇ ನಿಗದಿಯಾಗಿದ್ದಂತೆ ಬೆಂಗಳೂರು ಏರ್‌ಪೋರ್ಟ್‌ನಿಂದಲೇ ದೆಹಲಿಗೆ ಮರಳಿದ್ದಳು. ಅಲ್ಲಿಯೂ ಆಕೆ ತಪಾಸಣೆಗೆ ಸಹಕರಿಸಿದ್ದಳು ಎಂದು ಆಕೆಯ ಕುಟುಂಬ ಸದಸ್ಯರು ವಾದಿಸಿದ್ದಾರೆ.