Asianet Suvarna News Asianet Suvarna News

ಮನೆ ಬಾಗಿಲಿಗೆ ಹಣ್ಣು, ತರಕಾರಿ ತಂದು ಕೊಡುತ್ತೆ ಹಾಪ್‌ಕಾಮ್ಸ್‌!

ಮನೆ ಬಾಗಿಲಿಗೆ ಹಣ್ಣು, ತರಕಾರಿ ತಂದು ಕೊಡುತ್ತೆ ಹಾಪ್‌ಕಾಮ್ಸ್‌!| ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ ನಿರ್ದಿಷ್ಟ ಸಮಯದಲ್ಲಿ ಸೇವೆ| 2 ತಿಂಗಳಲ್ಲಿ ಕಾರ್ಯಾರಂಭ| ಶೇ.20 ವಹಿವಾಟು ಹೆಚ್ಚಳ ನಿರೀಕ್ಷೆ

Bangalore Now Hopcoms Will Deliver Fruits And Vegetables To Your Doorstep
Author
Bangalore, First Published Nov 23, 2019, 7:42 AM IST

ಬೆಂಗಳೂರು[ನ.23]: ಮಳಿಗೆಗಳು ಹಾಗೂ ಟೆಂಪೋಗಳ ಮೂಲಕ ಗ್ರಾಹಕರಿಗೆ ತಾಜಾ ತರಕಾರಿ ಮತ್ತು ಹಣ್ಣುಗಳ ಒದಗಿಸುತ್ತಿದ್ದ ‘ಹಾಪ್‌ ಕಾಮ್ಸ್‌’ ಇದೀಗ ಬಿಗ್‌ಬಾಸ್ಕೆಟ್‌ ಮಾದರಿಯಲ್ಲಿ ಮನೆ ಮನೆಗೆ ತರಕಾರಿ ತಲುಪಿಸುವ ಸೇವೆ ಪ್ರಾರಂಭಿಸಲು ಮುಂದಾಗಿದೆ.

ಆಹಾರ ಪಾದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವ ಸ್ವಿಗ್ಗಿ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ, ನಿಗದಿತ ಸಮಯದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಯೋಜನೆ ಜಾರಿಗೆ ಹಾಪ್‌ ಕಾಮ್ಸ್‌ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಯೋಜನೆ ಜಾರಿಯಾಗಲಿದೆ.

ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಣ್ಣ ಮತ್ತು ತರಕಾರಿಗಳನ್ನು ಒದಗಿಸುವುದು ಹಾಪ್‌ಕಾಮ್ಸ್‌ ಮುಖ್ಯ ಉದ್ದೇಶವಾಗಿದ್ದು, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ಮತ್ತು ತರಕಾರಿ ತಲುಪಿಸಲು ಈ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ ತಿಳಿಸಿದ್ದಾರೆ.

ಹಾಪ್ ಕಾಮ್ಸ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ತರಕಾರಿ ಮಾರಾಟ

ಬೆಂಗಳೂರು ನಗರದಲ್ಲಿ ಈಗಾಗಲೇ ಹಲವು ಖಾಸಗಿ ಕಂಪನಿಗಳು ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆಯಲ್ಲಿ ನಿರತವಾಗಿವೆ. ಆದರೆ, ಈ ಸಂಸ್ಥೆಗಳು ಲಾಭದ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿವೆ. ಆದರೆ, ಹಾಪ್‌ಕಾಮ್ಸ್‌ ರೈತರ ಪರವಾಗಿ ಸೇವೆ ಸಲ್ಲಿಸುತ್ತಿದ್ದು, ಕನಿಷ್ಟಸೇವಾ ಶುಲ್ಕ ಪಡೆದುಕೊಳ್ಳಲಿದೆ. ಇದರಿಂದ ರೈತರಿಗೂ ಲಾಭವಾಗಲಿದೆ, ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಹಣ್ಣು ಮತ್ತು ತರಕಾರಿ ರೈತರಿಂದ ನೇರವಾಗಿ ಗ್ರಾಹಕರಿಗೆ ಲಭ್ಯವಾಗಲಿವೆ ಎಂದರು.

ಈ ಸೇವೆಯಿಂದ ಶೇ.10ರಿಂದ 20ರವರೆಗೂ ವ್ಯಾಪಾರ ವಹಿವಾಟು ವೃದ್ಧಿಯಾಗುವ ಸಾಧ್ಯತೆಯಿದೆ. ಜೊತೆಗೆ, ಗ್ರಾಹಕರಿಗೆ ವಿತರಿಸುವ ಹಣ್ಣ ಮತ್ತು ತರಕಾರಿಗಳನ್ನು ರೈತರಿಂದ ನೇರವಾಗಿ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಿದ್ದು, ರೈತರಿಗೂ ಹೆಚ್ಚು ಲಾಭಾಂಶವಿರಲಿದೆ ಎಂದು ಅವರು ತಿಳಿಸಿದರು.

ಹಂತ ಹಂತವಾಗಿ ವಿಸ್ತರಣೆ:

ಈ ಯೋಜನೆಗೆ ಕನಕಪುರ ಮೂಲದ ಸಂಸ್ಥೆ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಜೆ.ಪಿ.ನಗರ, ಜಯನಗರ, ಬನಶಂಕರಿ ಭಾಗಗಳಲ್ಲಿನ ಗ್ರಾಹಕರಿಗೆ ಹಣ್ಣು ತರಕಾರಿಗಳನ್ನು ತಲುಪಿಸಲಾಗುವುದು. ಬಳಿಕ ಹಂತ ಹಂತವಾಗಿ ಬೆಂಗಳೂರು ನಗರದ ವಿವಿಧ ಭಾಗಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಆನ್‌ಲೈನ್‌ನಲ್ಲಿ ಬುಕ್‌ಮಾಡಬೇಕು:

ಈಗಿರುವ ಹಾಪ್‌ಕಾಮ್ಸ್‌ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಪುಟ ರಚಿಸಲಾಗುವುದು. ಆ ಪುಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬುಕ್‌ ಮಾಡಲು ಅವಕಾಶ ಕಲ್ಪಿಸಿ ಗ್ರಾಹಕರಿಗೆ ನೆರವಾಗುವಂತೆ ಮಾಡಲಾಗುವುದು ಎಂದರು.

ಖಾಸಗಿ ಸಂಸ್ಥೆಗಳ ಮಾದರಿಯಲ್ಲಿ ನಾವೂ ಸಹ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ತರಕಾರಿ ತಲುಪಿಸುವ ಯೋಜನೆ ಜಾರಿ ಮಾಡಬೇಕು ಎಂಬುದು ಹಲವು ದಿನಗಳ ಕನಸಾಗಿತ್ತು. ಈ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಪ್ರಾರಂಭಿಸುತ್ತೇವೆ.

-ಪ್ರಸಾದ್‌, ಹಾಪ್‌ ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ.

Follow Us:
Download App:
  • android
  • ios