ಬಂಡೀಪುರದಲ್ಲಿ ಈ ವರ್ಷ ಬೆಂಕಿ ಬೀಳುವ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ಜೊತೆಗೆ ವರುಣ ಕೂಡ ಸಾಥ್ ನೀಡಿದ್ದು, ಇದೀಗ ಬಂಡೀಪುರದಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.02): ಬಂಡೀಪುರದಲ್ಲಿ ಈ ವರ್ಷ ಬೆಂಕಿ ಬೀಳುವ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ಜೊತೆಗೆ ವರುಣ ಕೂಡ ಸಾಥ್ ನೀಡಿದ್ದು, ಇದೀಗ ಬಂಡೀಪುರದಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಇಲ್ಲಿ ಎತ್ತ ನೋಡಿದರು ಹಸಿರು ಬೆಟ್ಟ ಗುಡ್ಡಗಳ ಸಾಲು ಕಣ್ಣು ಹಾಯಿಸಿದಷ್ಟು ಹಸಿರು ಕಾನನ, ವನ್ಯಜೀವಿಗಳ ಸ್ವಚ್ಚಂದ ಓಡಾಟ ನೋಡುವುದೇ ಮನಸ್ಸಿಗೆ ಆನಂದ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಬಿಸಿಲಿನ ಬೇಗೆ ಇಂದ ತತ್ತರಿಸಿ ಬಂಡಿಪುರ ಕಾಡು ಇನ್ನೇನು ಒಣಗಲಾರಂಭಿಸಿತು ಅನ್ನೊ ಅಷ್ಟರಲ್ಲಿ ಮಳೆರಾಯನ ಆಗಮನದಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹುಲಿ ಚಿರತೆ ಆನೆ ಜಿಂಕೆ, ಕಡವೆ, ಕರಡಿ ಸೇರಿದಂತೆ ಅಸಂಖ್ಯಾತ ಪ್ರಾಣಿ ಪಕ್ಷಿಗಳ ತಾಣವಾಗಿರುವ ಬಂಡೀಪುರ ಹುಲಿಸಂರಕ್ಷಿತ ಪ್ರದೇಶ 1080 ಚದುರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸವಾಲು.

ಆಕಸ್ಮಿಕವಾಗಿ ಅಷ್ಟೇ ಅಲ್ಲದೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಸಾಧ್ಯತೆಗಳು ಇರುವುದರಿಂದ ಬಿರು ಬೇಸಿಗೆಯಲ್ಲಿ ಒಮ್ಮೆ ಬೆಂಕಿ ಬಿದ್ದರೆ ಸಾಕು ನೂರಾರು ಎಕರೆ ಅರಣ್ಯಪ್ರದೇಶ ಸುಟ್ಟು ಭಸ್ಮವಾಗಿಬಿಡುತ್ತದೆ. ಹಾಗಾಗಿ ಇಡೀ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ ಇಲ್ಲಿನ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ. ಈ ಬಾರಿ ಕಾಡಂಚಿನ 475 ಮಂದಿಯನ್ನು ಫೈರ್ ವಾಚರ್ಸ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೆಂಕಿ ಹರಡದಂತೆ 2800 ಕಿಲೋಮೀಟರ್ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ.

ಯಶಸ್ವಿ ಕಾರ್ಯಾಚರಣೆ

ಥರ್ಮಲ್ ಡ್ರೋನ್, ಇ ಗಸ್ತು ಹಾಗು ವಾಚ್ ಟವರ್ಗಳ ಮೂಲಕ ದಿನದ 24 ಗಂಟೆಯು ನಿರಂತರವಾಗಿ ನಿಗಾ ವಹಿಸಲಾಗಿದೆ. ಆ ಮೂಲಕ ಈ ಕಾಡಿಗೆ ಬೆಂಕಿ ಬೀಳದಂತೆ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಈ ಬಾರಿ ಅರಣ್ಯ ಸಿಬ್ಬಂದಿ ಶ್ರಮಕ್ಕೆ ವರುಣನು ಕೂಡ ಸಾಥ್ ನೀಡಿದ್ದಾನೆ. ಏಪ್ರಿಲ್ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಮಳೆಯಾಗಿ ಗಿಡಮರಗಳು ಚಿಗುರೊಡೆಯುತ್ತಿವೆ. ನಿಧಾನವಾಗಿ ಹಸಿರು ಆವರಿಸುತ್ತಿದ್ದು ಇದಕ್ಕೆ ಪೂರಕವಾಗಿ ನಿನ್ನೆ ಮೊನ್ನೆ ಬಿದ್ದ ಮಳೆಯು ಮತ್ತಷ್ಟು ಜೀವಕಳೆ ತಂದಿದೆ.

ಬಿಸಿಲ ಬೇಗೆಯಿಂದ ತತ್ತರಿಸಿದ್ದ ಪ್ರಾಣಿ ಪಕ್ಷಿಗಳು ಮಳೆಯಲ್ಲಿ ಮಿಂದೇಳುತ್ತಿವೆ. ಬಂಡೀಪುರದಲ್ಲಿ 13 ವಲಯಗಳಿದ್ದು 284 ಕೆರೆಕಟ್ಟೆಗಳಿವೆ. ಇತ್ತೀಚೆಗೆ ಬಿದ್ದ ಮಳೆ ಕೆರೆಗಳು ಬತ್ತಿಹೋಗದೆ ಇರುವುದಕ್ಕೆ ಸಹಕಾರಿಯಾಗಿದೆ. ಬೋರ್ಗಳಿಗೆ ಸೋಲಾರ್ ಮೋಟಾರ್ ಅಳವಡಿಸಿ 40 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗುತ್ತಿದೆ. ಅರಣ್ಯ ಸಿಬ್ಬಂದಿಯ ಪರಿಶ್ರಮ ಹಾಗು ವರುಣನ ಕೃಪೆಯಿಂದಾಗಿ ಬೆಂಕಿ ಬೀಳುವ ಆತಂಕ ದೂರವಾಗಿದೆ.ರಣಬಿಸಿಲಿನ ಪರಿಣಾಮ ಒಣಗಿದ್ದ ಈ ಅರಣ್ಯದಲ್ಲೀಗ ಮರಗಿಡಗಳು ಚಿಗುರೊಡೆಯುತ್ತಿದ್ದು ಹಸಿರು ಆವರಿಸತೊಡಗಿದೆ.