ಬಸವಕಲ್ಯಾಣ(ಏ.02): ಬಸವಕಲ್ಯಾಣ ಕ್ಷೇತ್ರ ಜೆಡಿಎಸ್‌ಗೆ ಭದ್ರ ನೆಲೆಯಾಗಿದೆ. ನಮ್ಮ ಪಕ್ಷದಿಂದ ಕ್ಷೇತ್ರದಲ್ಲಿ ಒಟ್ಟು 7 ಬಾರಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಬಾರಿ ಕೂಡ ಮತದಾರರು ಆಶೀರ್ವದಿಸಲಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಗರದ ಜೆಡಿಎಸ್‌ ಅಭ್ಯರ್ಥಿ ಸೈಯದ್‌ ಯಸ್ರಾಬ್‌ ಅಲಿ ಖಾದ್ರಿ ನಿವಾಸದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀಡಿರುವ ಜನಪರ ಯೋಜನೆಗಳು ನಮ್ಮ ಕೈ ಹಿಡಿಯಲಿವೆ ಎಂದರು.

ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ:

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ, ಬಡವರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಕೋವಿಡ್‌ ಸಂದರ್ಭದಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸಿದರೂ ನೆರವಿಗೆ ಧಾವಿಸಿಲ್ಲ. ಆದರೆ ಎಚ್‌ಡಿಕೆ ಅಧಿಕಾರವಧಿಯಲ್ಲಿ ರೈತರ 24 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಬಸವಕಲ್ಯಾಣವೊಂದಕ್ಕೆ 89 ಕೋಟಿ ರು. ರೈತರ ಸಾಲ ಮನ್ನಾ ಆಗಿದೆ. ಇದರಿಂದ 19 ಸಾವಿರ ರೈತರಿಗೆ ಸದುಪಯೋಗವಾಗಿದೆ ಎಂದು ಹೇಳಿದರು.

'ಪ್ರಜಾಪ್ರಭುತ್ವ ಉಳಿಯಲು ಬಿಜೆಪಿ ತೊಲಗಬೇಕು'

ಏ.5ಕ್ಕೆ ಎಚ್ಡಿಕೆ ಆಗಮನ:

ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತ ಕಾಪಾಡಲು ಸಾಧ್ಯವಿಲ್ಲ. ರಾಜ್ಯದ ಹಿತ ಕಾಪಾಡುವಲ್ಲಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಹೀಗಾಗಿ ಕಲ್ಯಾಣದಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪಕ್ಷಕ್ಕೆ ಇನ್ನಷ್ಟುಶಕ್ತಿ ನೀಡಬೇಕು, ಏ. 5 ಅಥವಾ 6ರಂದು ಕುಮಾರಸ್ವಾಮಿ ಕ್ಷೇತ್ರಕ್ಕೆ ಆಗಮಿಸಿ, ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ 30 ಪರ್ಸಂಟ್‌ ಸರ್ಕಾರ ಎಂದು ಆರೋಪಿಸುವ ಕಾಂಗ್ರೆಸ್‌ ವಿರೋಧ ಪಕ್ಷದಲ್ಲಿದ್ದು, ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕರ ಮುಂದಿಟ್ಟು ಹೋರಾಡಲು ಯಾಕೆ ಹಿಂಜರಿಯುತ್ತಿದೆ. ಬಿಜೆಪಿ ಜೊತೆಗೆ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿಲ್ಲ. ಬದಲಾಗಿ ಕಾಂಗ್ರೆಸ್‌ ಮಾಡಿಕೊಂಡಿದೆ ಎಂಬ ಅನುಮಾನ ಮೂಡುತ್ತಿದೆ. ಅಷ್ಟಕ್ಕೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ, ತಾಲೂಕು ಅಧ್ಯಕ್ಷ ಶಬ್ಬಿರಪಾಶಾ, ಅಭ್ಯರ್ಥಿ ಯಸ್ರಾಬ ಅಲಿ ಖಾದ್ರಿ, ಜಿಪಂ ಸದಸ್ಯ ಆನಂದ ಪಾಟೀಲ, ರಾಜು ಸುಗರೆ, ಆಕಾಶ ಖಂಡಾಳೆ ಹಾಗೂ ಶರಣಪ್ಪ ಪರೆಪ್ಪ ಇದ್ದರು.