ಬಸವಕಲ್ಯಾಣ(ಏ.05):  ಕಾಂಗ್ರೆಸ್‌ ಹಾಗೂ ಬಿಜೆಪಿಯವರು ಮ್ಯಾಚ್‌ ಫಿಕ್ಸಿಂಗ್ ಗಿರಾಕಿಗಳು. ರಾಜ್ಯಕ್ಕೆ ಒಳ್ಳೆಯದಾಗ್ಬೇಕಾದರೆ ಈ ಎರಡೂ ಪಕ್ಷಗಳು ಮನೆಗೆ ಹೋಗ್ಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪೂರ್‌ ಹೇಳಿದ್ದಾರೆ.

ಭಾನುವಾರ ಬಸವಕಲ್ಯಾಣ, ಹತ್ಯಾಳ, ಹಾರಕೂಡ, ಸಿರಗಾಪೂರ, ಗದಲೇಗಾಂವ್‌, ಮೈಸಲಗಾ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಸೈಯದ್‌ ಯಸ್ರಬ್‌ ಅಲಿ ಖಾದ್ರಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸಂಸದರು ರಾಜ್ಯದ ಜನತೆಯ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತಿಲ್ಲ. ಬಸವಕಲ್ಯಾಣದಲ್ಲಿ ಖಾದ್ರಿ, ಬೀದರ್‌ನಲ್ಲಿ ಬಂಡೆಪ್ಪ ಖಾಶೆಂಪುರ್‌, ಬೆಂಗಳೂರಿನಲ್ಲಿ ಕುಮಾರಣ್ಣ ಯಾವಾಗಲೂ ನಿಮ್ಮ ಕೆಲಸ ಮಾಡಲು ತಯಾರಿದ್ದೇವೆ ಎಂದರು.

ಮೇ 2ರ ನಂತರ ಕಾಂಗ್ರೆಸ್‌ ನಾಯಕರ ವಲಸೆ ಆರಂಭ: ಕಟೀಲ್‌

ಕಾಂಗ್ರೆಸ್‌ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದೆ. ಆದರೆ ರಾಜ್ಯ ಸರ್ಕಾರದ ಒಂದೇ ಒಂದು ಹಗರಣ ಬಯಲಿಗೆಳೆದಿಲ್ಲ. ಅವರೆಲ್ಲ ಬರೀ ಮ್ಯಾಚ್‌ ಪಿಕ್ಸಿಂಗ್‌ ಮಾಡಿಕೊಳ್ತಾರೆ. ಬಸವಣ್ಣನ ನಾಡು ಬಸವಕಲ್ಯಾಣದಲ್ಲಿ ಜಾತ್ಯತೀತವಾಗಿ ಎಲ್ಲರೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲಮನ್ನಾ ಮಾಡಲು ನಾವು ಮುಂದಾದಾಗ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಆಗ ನಾವು ರೈತರ ಸಾಲಮನ್ನಾಕ್ಕೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದು ರೈತರ ಸಾಲಮನ್ನಾ ಮಾಡಿದ್ದೇವೆ ಎಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್‌ ಪಾಟೀಲ್‌ ಸೋಲಾಪೂರ, ಅಭ್ಯರ್ಥಿ ಸೈಯದ್‌ ಯಸ್ರಬ್‌ ಅಲಿ ಖಾದ್ರಿ ಇದ್ದರು.