Asianet Suvarna News Asianet Suvarna News

Bengaluru: ಸಾಕು ನಾಯಿಗಳಿಗೆ ಕಬ್ಬನ್‌ ಪಾರ್ಕ್‌ ಪ್ರವೇಶವಿಲ್ಲ!

ನಗರದ ಕಬ್ಬನ್‌ ಉದ್ಯಾನವನದಲ್ಲಿ ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಜುಲೈ 1ರಿಂದ ಉದ್ಯಾನದಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. 

government banning pet dog promenade at cubbon park in bengaluru gvd
Author
Bangalore, First Published Jun 27, 2022, 5:15 AM IST

ಬೆಂಗಳೂರು (ಜೂ.27): ನಗರದ ಕಬ್ಬನ್‌ ಉದ್ಯಾನವನದಲ್ಲಿ ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಜುಲೈ 1ರಿಂದ ಉದ್ಯಾನದಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. ಈ ಸಂಬಂಧ ತೋಟಗಾರಿಕೆ ಮತ್ತು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದು, ಮತ್ತೊಂದು ಸಭೆ ನಡೆಸಿ ಕಬ್ಬನ್‌ ಉದ್ಯಾನದಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ. 

ಸಾಕು ನಾಯಿಗಳಿಂದ ಉದ್ಯಾನದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತ ಪಡಿಸಿ, ಈ ಸಂಬಂಧ ಮಾರ್ಗಸೂಚಿಗಳನ್ನು ರಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ, ಸಾಕು ನಾಯಿಗಳನ್ನು ಉದ್ಯಾನ ಪ್ರವೇಶಕ್ಕೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. 

Bengaluru: ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗೆ ಮತ್ತೆ ಕಳೆ: ಪ್ರವಾಸಿಗರ ಸಂಖ್ಯೆ ಹೆಚ್ಚಳ

ಮಾರ್ಗಸೂಚಿಗಳ ಫಲಕಗಳನ್ನು ಎಲ್ಲ ದ್ವಾರಗಳಲ್ಲಿ ಅಳವಡಿಸಿತ್ತು. ಈ ಸಂಬಂಧ ಭದ್ರತಾ ಸಿಬ್ಬಂದಿಯಿಂದ ನಾಯಿ ಮಾಲಿಕರಿಗೆ ಸೂಚನೆ ನೀಡುತ್ತಿದ್ದರೂ, ಪ್ರಯೋಜನವಾಗಿರಲಿಲ್ಲ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಶ್ವಾನಪ್ರಿಯರು ತಮ್ಮ ನಾಯಿಗಳನ್ನು ಹಿಡಿದಿಟ್ಟುಕೊಳ್ಳುವುದು, ಅವುಗಳಿಂದ ಉಂಟಾದ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದರು. ಇದರಿಂದ ಇತರೆ ವಾಯು ವಿಹಾರಿಗಳಿಗೆ ಕಿರಿಕಿರಿಯುಂಟು ಮಾಡುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

300ಕ್ಕೂ ಹೆಚ್ಚು ದೂರು: ಕಬ್ಬನ್‌ ಉದ್ಯಾನವನಕ್ಕೆ ಸಣ್ಣ ಮಕ್ಕಳು ಮತ್ತು ಹಿರಿಯ ನಾಗರಿಕರು ಬರುತ್ತಿದ್ದಾರೆ. ಮನೆಗಳಲ್ಲಿ ಸಾಕಿರುವ ದೊಡ್ಡ ನಾಯಿಗಳನ್ನು ಉದ್ಯಾನದಲ್ಲಿ ಹಿಡಿತವಿಲ್ಲದೆ ಬಿಡಲಾಗುತ್ತಿದ್ದಾರೆ. ಇದರಿಂದ ಭಯದಿಂದ ಇಡೀ ಉದ್ಯಾನದಲ್ಲಿ ವಿಹಾರ ಮಾಡುವ ಸ್ಥಿತಿ ಉಂಟಾಗುತ್ತಿತ್ತು. ಆದ್ದರಿಂದ ಸಾಕು ನಾಯಿಗಳನ್ನು ನಿಯಂತ್ರಿಸಲು ಸೂಚಿಸಬೇಕು, ಅವುಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಈವರೆಗೂ 300ಕ್ಕೂ ಹೆಚ್ಚು ದೂರುಗಳು ಬಂದಿವೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದಂಡ ವಿಧಿಸಲು ಅಧಿಕಾರ ಇಲ್ಲ: ನಾಯಿಗಳ ಪ್ರವೇಶಕ್ಕೆ ವಿಧಿಸಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ಕೇವಲ ಎಚ್ಚರಿಕೆ ಮಾತ್ರ ನೀಡಬಹುದಾಗಿತ್ತು. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರವಿರಲಿಲ್ಲ. ಕಬ್ಬನ್‌ ಉದ್ಯಾನದ ಏಳು ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದರೂ, ಸಿಬ್ಬಂದಿಯ ಕಣ್ತಪ್ಪಿಸಿ ಕಾರುಗಳ ಮೂಲಕ ಉದ್ಯಾನ ಪ್ರವೇಶಿಸಿದ ಬಳಿಕ ನಾಯಿಗಳು ಬಿಡುತ್ತಿದ್ದರು. ಇದನ್ನು ನಿಯಂತ್ರಿಸುವುದು ದೊಡ್ಡ ಹರಸಾಸಹವಾಗಿತ್ತು.

Pet Dogs: ಕಬ್ಬನ್‌ ಪಾರ್ಕ್‌ನಲ್ಲಿ ನಾಯಿ ಮಲ-ಮೂತ್ರ ಮಾಡಿದ್ರೆ ಮಾಲೀಕರೇ ಕ್ಲೀನ್‌ ಮಾಡ್ಬೇಕು..!

ನಾಯಿ ಪ್ರೇಮಿಗಳು ಕಬ್ಬನ್‌ ಉದ್ಯಾನವನದಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರಿಂದ ಬರುವ ದೂರುಗಳು ಹೆಚ್ಚಾಗುತ್ತಿವೆ. ಆದ್ದರಿಂದ ಉದ್ಯಾನವನದಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ವಾಯುವಿಹಾರ ಮಾಡಲು ಸಾಕು ನಾಯಿಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ.
-ಬಾಲಕೃಷ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್‌ ಪಾರ್ಕ್)

Follow Us:
Download App:
  • android
  • ios