Asianet Suvarna News Asianet Suvarna News

ಬೆಂಗಳೂರಿನಲ್ಲಿ ಬ್ಯಾನರ್ ಬ್ಯಾನ್ : ಹಾಕಿದ್ರೆ ಜೈಲೂಟ ಗ್ಯಾರಂಟಿ

ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಜಾಹೀರಾತು ನೀತಿ, ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ನಿಂದ ಉಂಟಾಗುತ್ತಿರುವ ಸಮಸ್ಯೆಗಳು ಹಾಗೂ ಬಿಬಿಎಂಪಿ ಹೊಸ ಜಾಹೀರಾತು ನೀತಿ ರೂಪಿಸುವುದರ ಕುರಿತು ನೀಡಿದ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಂತರ ನಗರದಲ್ಲಿ ಕೂಡಲೇ ಜಾರಿಗೆ ಬರುವಂತೆ ಎಲ್ಲ ಮಾದರಿಯ ಜಾಹೀರಾತು ಫಲಕಗಳ ಅಳವಡಿಕೆಗೆ ಒಂದು ವರ್ಷ ನಿಷೇಧ ಹೇರಲಾಗಿದೆ.

Ban on all advertisements in public places for one year
Author
Bengaluru, First Published Aug 7, 2018, 12:09 PM IST

ಬೆಂಗಳೂರು[ಆ.07]: ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್, ಭಿತ್ತಿಪತ್ರ, ಗೋಡೆ ಬರಹ ಸೇರಿದಂತೆ ಎಲ್ಲ ಬಗೆಯ ಜಾಹೀರಾತು ಪ್ರದರ್ಶನವನ್ನು ಒಂದು ವರ್ಷಗಳ ಕಾಲ ನಿಷೇಧಿಸಲು ಪಾಲಿಕೆ ಸಾಮಾನ್ಯಸಭೆ ಸರ್ವಾನುಮತದಿಂದ ತೀರ್ಮಾನಿಸಿದೆ.
ನಗರದ ಅಂದಗೆಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್ ಗಳ ತೆರವುಗೊಳಿಸುವ ವಿಷಯಲ್ಲಿ ನಿರ್ಲಕ್ಷ್ಯದ ವಿರುದ್ಧ ಕಳೆದ ವಾರ ಹೈಕೋರ್ಟ್ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರ ಮೇಯರ್ ಸಂಪತ್‌ರಾಜ್ ಅವರು ಜಾಹೀರಾತು ನೀತಿ ರೂಪಿಸುವುದರ ಕುರಿತು ಚರ್ಚೆ ನಡೆಸಲು ವಿಶೇಷ ಸಭೆ ಕರೆದಿದ್ದರು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಜಾಹೀರಾತು ನೀತಿ, ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ನಿಂದ ಉಂಟಾಗುತ್ತಿರುವ ಸಮಸ್ಯೆಗಳು ಹಾಗೂ ಬಿಬಿಎಂಪಿ ಹೊಸ ಜಾಹೀರಾತು ನೀತಿ ರೂಪಿಸುವುದರ ಕುರಿತು ನೀಡಿದ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಂತರ ನಗರದಲ್ಲಿ ಕೂಡಲೇ ಜಾರಿಗೆ ಬರುವಂತೆ ಎಲ್ಲ ಮಾದರಿಯ ಜಾಹೀರಾತು ಫಲಕಗಳ ಅಳವಡಿಕೆಗೆ ಒಂದು ವರ್ಷ ನಿಷೇಧ ಹೇರಲಾಗಿದೆ. ಫ್ಲೆಕ್ಸ್, ಬ್ಯಾನರ್, ಹೋಲ್ಡಿಂಗ್ ಅಳವಡಿಸಿದರೆ ಆರು ತಿಂಗಳು ಜೈಲು, 1 ಲಕ್ಷದವರೆಗೆ ದಂಡ ವಿಧಿಸಲು ಸಭೆ ತೀರ್ಮಾನಿಸಿದೆ. ಅಲ್ಲದೇ ಹೊಸ ಜಾಹೀರಾತು ನೀತಿ ಜಾರಿಗೆ ತರುವುದಕ್ಕೆ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಲು ಆಯುಕ್ತರಿಗೆ ಕ್ರಮವಹಿಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.

ಒಂದೂ ಅಧಿಕೃತ ಹೋರ್ಡಿಂಗ್ ಇಲ್ಲ: 
ಈ ವೇಳೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, 2016 ಡಿಸೆಂಬರ್‌ನಿಂದ ಯಾವುದೇ ಫ್ಲೆಕ್ಸ್, ಹೋರ್ಡಿಂಗ್ ಪ್ರದರ್ಶನಕ್ಕೆ ಬಿಬಿಎಂಪಿ ಅನುಮತಿ ನೀಡಿಲ್ಲ. ಈಗಾಗಲೇ ನಗರದಲ್ಲಿ ಇರುವ ಯಾವುದೇ ಹೋರ್ಡಿಂಗ್‌ಗಳು ಅಧಿಕೃತವಲ್ಲ. ಬಿಬಿಎಂಪಿ, ಖಾಸಗಿ ಹಾಗೂ ಇತರೆ ಸರ್ಕಾರಿ ಇಲಾಖೆಗಳು ಅಳವಡಿಸಿರುವ ಹೋರ್ಡಿಂಗ್‌ಗಳು ನಗರದಲ್ಲಿ ಇವೆ. ಬಿಬಿಎಂಪಿ ಅಳವಡಿಸಿದ್ದ ಹೋರ್ಡಿಂಗ್ ಗಳನ್ನು ಬಿಬಿಎಂಪಿಯೇ ತೆರವು ಮಾಡಲಿದೆ. ವಿವಿಧ ಇಲಾಖೆ ಅಳವಡಿಸಿರುವ ಹೋರ್ಡಿಂಗ್‌ಗಳ ತೆರವಿಗೆ ಸೂಚನೆ ನೀಡಲಾಗುವುದು. ಖಾಸಗಿಯವರು ಅಳವಡಿಸಿರುವ ಹೋರ್ಡಿಂಗ್‌ಗಳ ತೆರವಿಗೆ ಒಂದು ವಾರ ಅವಕಾಶ ನೀಡಲಾಗುವುದು. ತೆರವು ಮಾಡದಿದ್ದರೆ, ಕ್ರಿಮಿಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಹಾಗೂ ಇತರೆ ಇಲಾಖೆಗಳಿಂದ ರಾಜಕಾಲುವೆ, ಪುಟ್‌ಪಾತ್‌ನಲ್ಲಿ ಸುಮಾರು 250 ಹೋರ್ಡಿಂಗ್ ಅಳವಡಿಸಲಾಗಿದೆ. ಖಾಸಗಿ ಏಜನ್ಸಿಗಳು ಸುಮಾರು 2500ಕ್ಕೂ ಹೆಚ್ಚು ಹೋರ್ಡಿಂಗ್ ಅಳವಡಿಸಿದ್ದಾರೆ. ಅದರಲ್ಲಿ 880 ತೆರವು ಮಾಡಲಾಗಿದೆ. ಇನ್ನುಳಿದಂತೆ ಕೆಲವು ಕೇಸ್ ಕೋರ್ಟ್‌ನಲ್ಲಿವೆ. ಏಜನ್ಸಿಗಳಿಂದ ಬರಬೇಕಾದ ಬಾಕಿ ವಸೂಲಿ ಕಾರ್ಯ ಮುಂದುವರಿಯಲಿದೆ. ಸುಮಾರು ₹೬೫ ಕೋಟಿ ಪಾಲಿಕೆಗೆ ಬರಬೇಕಾಗಿದೆ ಎಂದರು.
ಪ್ಲಾಸ್ಟಿಕ್‌ನಿಂದ ಸಿದ್ದಪಡಿಸುವ ಫ್ಲೆಕ್ಸ್ ಅಳವಡಿಸುವಂತಿಲ್ಲ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಳವಡಿಸಿರುವ ಬಸ್ ಶೆಲ್ಟರ್, ಸ್ಕೈವಾಕ್‌ಗಳಿಗೆ ಪಾಲಿಕೆಯಿಂದಲೇ ಅನುಮತಿ ನೀಡಲಾಗಿರುವುದರಿಂದ ಅವರಿಗೆ ನಿಷೇಧ ಹೇರಲು ಸಾಧ್ಯವಿಲ್ಲ. ಆದರೆ, ಪ್ಲಾಸ್ಟಿಕ್ ಬಳಕೆ ಮಾಡದ ಫ್ಲೆಕ್ಸ್ ಹಾಕುವಂತೆ ತಿಳಿಸಿದರು.

21 ಸಾವಿರ ಫ್ಲೆಕ್ಸ್ ತೆರವು
ಹೈಕೋರ್ಟ್ ಆದೇಶದಂತೆ ಈವರೆಗೆ ನಗರದಲ್ಲಿ 20,140 ಫ್ಲೆಕ್ಸ್, ಬ್ಯಾನರ್ ಬಂಟಿಂಗ್ಸ್ ತೆರವು ಮಾಡಲಾಗಿದ್ದು, 65 ಫ್ಲೆಕ್ಸ್ ಮುದ್ರಣಾ ಘಟಕಗಳನ್ನು ಬಂದ್ ಮಾಡಲಾಗಿದೆ. ಮತ್ತೆ ಫ್ಲೆಕ್ಸ್ ಹಾಕಿದ 13 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೈಕೋರ್ಟ್ ಸೂಚನೆಗೂ ಮುನ್ನವೇ ಬಿಬಿಎಂಪಿ ನಿರಂತವಾಗಿ ಅನಧಿಕೃತ ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ ಮಾಡುತ್ತಿತ್ತು. ಕಳೆದ ನಾಲ್ಕು ವರ್ಷದಲ್ಲಿ 94 ಸಾವಿರ ಫ್ಲೆಕ್ಸ್ ತೆರವು ಮಾಡಿ, 456
ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ವಿವರಿಸಿದರು.

1 ಲಕ್ಷ ದಂಡ, 6 ತಿಂಗಳು ಜೈಲುವಾಸ: 
1981ರ ಕಾಯ್ದೆಯ ಪ್ರಕಾರ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಗೂ ಇತರೆ ಜಾಹೀರಾತು ಅಳವಡಿಕೆಗೆ ಸಕ್ಷಮ ಪ್ರಾಧಿಕಾರದ(ನಗರ ಆಯುಕ್ತ) ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ ಅಳವಡಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಿ ಆರು ತಿಂಗಳು ಜೈಲು ಹಾಗೂ 1 ಲಕ್ಷ ದಂಡ ವಿಧಿಸುವುದಕ್ಕೆ ಅವಕಾಶವಿದೆ. ಪಾಲಿಕೆ ಬೈಲಾ ಪ್ರಕಾರ ಮರ, ವಿದ್ಯುತ್ ಕಂಬ ಮೇಲೆ ಭಿತ್ತಿ ಪತ್ರ ಅಂಟಿಸುವುದು, ಮರಗಳಿಗೆ ವಿದ್ಯುತ್ ದೀಪದ ಅಲಂಕಾರ, ಗೋಡೆ ಬರಹಕ್ಕೆ 1 ಲಕ್ಷ ದಂಡ ವಿಧಿಸಹುದಾಗಿದೆ ಎಂದು ತಿಳಿಸಿದರು.

ಫ್ಲೆಕ್ಸ್ ಹಾಕಿ ಆಯುಕ್ತರ ಮೇಲೆ ಕೇಸ್

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಯಾರ ಮೇಲಾದರೂ ದ್ವೇಷವಿದ್ದರೆ, ಅವರ ಹೆಸರಿನಲ್ಲಿ ಫ್ಲೆಕ್ಸ್ ಹಾಕಿದ ಪ್ರಕರಣ ದಾಖಲಾಗುವಂತೆ ಮಾಡಬಹುದು. ಒಂದು ವೇಳೆ ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಫ್ಲೆಕ್ಸ್ ಹಾಕಿಸಿ, ಅವರ ವಿರುದ್ಧವೇ ಪ್ರಕರಣ ದಾಖಲಾಗುವಂತೆ ಮಾಡಬಹುದು. ಈ ರೀತಿಯ ತೊಂದರೆ ಆಗದಂತೆ ಬಿಬಿಎಂಪಿ ನೀತಿ ರೂಪಿಸುವಾಗ ಸೂಕ್ಷ್ಮವಾಗಿ ಗಮನಿಸಬೇಕು ಎಂದರು.
 

Follow Us:
Download App:
  • android
  • ios