Ballari ವಿಮ್ಸ್‌ನಲ್ಲಿ ಮುಂದುವರೆದ ಮರಣ ಮೃದಂಗ! ಸತ್ತಿದ್ದು ಎರಡೋ? ನಾಲ್ಕೋ?
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮುಂದುವರೆದ ಮರಣ ಮೃದಂಗ. ಬೆಂಗಳೂರಿನ ವಿಶೇಷ ತನಿಖಾತಂಡ ಆಗಮನ ಪರಿಶೀಲನೆ. ಮೊನ್ನೆ ಎರಡು ನಿನ್ನೆ ಮೂರು ಇಂದಿಗೆ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆಯಂತೆ. ರೋಗಿಗಳ ಸಂಬಂಧಿಕರಿಂದ ವಿಡಿಯೋ ಬಿಡುಗಡೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಸೆ.16): ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ವೆಂಟಿಲೇಟರ್ ಕೈಕೊಟ್ಟ ಪರಿಣಾಮ ಮೊನ್ನೆ ಎರಡು ಸಾವು ಅಂದ್ರು, ನಿನ್ನೆಗೆ ಅದು ಮೂರಾಯ್ತು, ಇಂದು ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆಯಂತೆ ಹೀಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಯಲ್ಲಿ ಸಾವಿನ ಸರಣಿ ಮುಂದುವರೆದಿದೆ ಎನ್ನುವುದು ರೋಗಿಗಳ ಆರೋಪವಾಗಿದೆ. ಆದ್ರೇ, ಇದನ್ನು ನಿರಾಕರಿಸಿದ ವಿಮ್ಸ್ ಆಡಳಿತ ಮಂಡಳಿ ಇದೆಲ್ಲವೂ ಸುಳ್ಳು ಎನ್ನುತ್ತಿದೆ. ಈ ಮಧ್ಯೆ ಸರ್ಕಾರ ನಿಯೋಜನೆ ಮಾಡಿದ ಬೆಂಗಳೂರಿನಿಂದ ಬಂದ ಡಾ.ಸ್ಮಿತ ನೇತೃತ್ವದ ಸಮಿತಿ ವಿಮ್ಸ್ ನಲ್ಲಿ ನಡೆದ ಎಡವಟ್ಟಿನ ಬಗ್ಗೆ ಮಾಹಿತಿಯನ್ನು ಪಡೆಯಿತು. ಒಂದು ಕಡೆ ಬ್ಲಾಸ್ಟ್ ಆದ ಸ್ಥಳದಲ್ಲಿ ಹೊಸ ಕೇಬಲ್ ಅಳವಡಿಸಲು ಹರಸಾಹಸ ಪಡುತ್ತಿರೋ ಎಲೆಕ್ಟ್ರಿಕಲ್ ಸಿಬ್ಬಂದಿ. ಮತ್ತೊಂದು ಕಡೆ ಸಿರಗುಪ್ಪ ಮೂಲದ ಕುಟುಂಬ ವೆಂಟಿಲೇಟರ್ ವ್ಯವಸ್ಥೆ ಇಲ್ಲದೆ ನಮ್ಮ ಮಗು ಸಾವನ್ನಪ್ಪಿದೆಯೆಂದು ವಿಡಿಯೋ ಮಾಡಿದೆ. ಈ ಮಧ್ಯೆ ಸರ್ಕಾರ ನಿಯೋಜನೆ ಮಾಡಿದ ಡಾ. ಸ್ಮಿತಾ ನೇತೃತ್ವದ ಸಮಿತಿ ವಿಮ್ಸ್ ಆಸ್ಪತ್ರೆಯ ಭೇಟಿ ನೀಡಿ ಪರಿಶೀಲನೆ. ಇದು ಬಳ್ಳಾರಿ ವಿಮ್ಸ್ ಆವರಣದಲ್ಲಿನ ಚಿತ್ರಣ. ಕಳೆದೆರೆಡು ದಿನಗಳಿಂದ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯವಾಗಿ ವೆಂಟಿಲೇಟರ್ ಕೈಕೊಟ್ಟ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲೆ ನಿನ್ನೆ ಜೋಳದ ರಾಶಿ ಗ್ರಾಮದ ಕುಟುಂಬ ಮತ್ತು ಇಂದು ಸಿರಗುಪ್ಪದ ಕುಟುಂಬಗಳು ನಮ್ಮ ಮನೆಯ ಮಕ್ಕಳು ವೆಂಟಿಲೇಟರ್ ಇಲ್ಲದೇಯೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ ವಿಡಿಯೋ ಹರಿಬಿಟ್ಟಿದ್ದಾರೆ.ಸಿರಗುಪ್ಪದ ಬಾಲಕ ನಿಖಿಲ್ ಸೆಪ್ಟೆಂಬರ್ 11 ರಂದು ಡೆಂಗ್ಯೂ ಕಾರಣಕ್ಕೆ ದಾಖ ಲಾಗಿದ್ದ ಆತನಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಸೆಪ್ಟೆಂಬರ್ 14 ರಂದು ವೆಂಟಿಲೇಟರ್ ಸ್ಥಗಿತವಾಗಿ ಸಾವಿಗೀಡಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನೊಂದೆಡೆ ವಿದ್ಯುತ್ ವ್ಯತ್ಯಯದಿಂದಾಗಿ ರಕ್ತ ಪರಿಕ್ಷೆ, ಸ್ಕ್ಯಾನಿಂಗ್, ಎಕ್ಸ್ ರೇ ಎಲ್ಲದ ರ ವರದಿ ವಿಳಂಭವಾಗಿದೆ ಎಂದು ರೋಗಿಗಳು ದೂರುತ್ತಿದ್ದಾರೆ.
ಅಷ್ಟಕ್ಕೂ ಸಾವಿನ ಸಂಖ್ಯೆ ಎರಡೋ ಮೂರು ಅಥವಾ ನಾಲ್ಕೋ ?
ಈ ಮಧ್ಯೆ ವಿಮ್ಸ್ ಗೆ ವಿದ್ಯುತ್ ಸರಬರಾಜು ಮಾಡಲು ವಿಮ್ಸ್ ಆಡಳಿತ ಮಂಡಳಿ ಹರಸಾಹಸ ಪಡ್ತಾ ಇದ್ದು, ಸ್ಥಳದಲ್ಲೇ ವಿಮ್ಸ್ ನಿರ್ದೇಶಕ ಮೊಕ್ಕಾಂ ಹೂಡಿ ಕೆಲಸ ಮಾಡಿಸುತ್ತಿದ್ದಾರೆ. ಇನ್ನೂ ದಿನನಿತ್ಯ ವೈರಲ್ ಆಗುವ ವೀಡಿಯೋಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಿರ್ದೇಶಕ ಗಂಗಾಧರ ಗೌಡ, ವಿದ್ಯುತ್ ವ್ಯತ್ಯಯವಾದ ದಿನ ಇಬ್ಬರು ಮಾತ್ರ ಸಾವಿಗೀಡಾಗಿದ್ದಾರೆ. ಇನ್ನುಳಿದ ವೀಡಿಯೋಗಳು ಸುಳ್ಳು ಎಂದಿದ್ದಾರೆ. ಈ ಮಧ್ಯೆ ಒಂದು ಕಡೆ ಪಾಲಿಕೆ ಮೇಯರ್ ತಮ್ಮ ಸದಸ್ಯರೊಂದಿಗೆ ಬಂದು ವಿಮ್ಸ್ ಆಸ್ಪತ್ರೆ ವ್ಯವಸ್ಥೆ ಪರಿಶೀಲಿಸೋ ಹೈಡ್ರಾಮ ಮಾಡಿದ್ರು. ಇದರ ಜೊತೆಗೆ ಮೇಯರ್ ರಾಜೇಶ್ವರಿ ಮತ್ತವರ ಪಾಲಿಕೆ ಸದಸ್ಯರು ವಿಮ್ಸ್ ನಲ್ಲಿ ಬಂದು ಒಂದಷ್ಟು ಪರಿಶೀಲನೆ ನೆಪದಲ್ಲಿ ಹೈಡ್ರಾಮ ಮಾಡಿದ್ರು.
ಬಳ್ಳಾರಿ ದುರಂತ: ವಿಮ್ಸ್ ಐಸಿಯುನಲ್ಲಿ 3 ಸಾವು, ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ
ಡಾ.ಸ್ಮಿತಾ ನೇತೃತ್ವದ ತಂಡದಿಂದ ಮಾಹಿತಿ
ಇನ್ನು ವಿಮ್ಸ್ ದುರಂತದ ಬಗ್ಗೆ ಸರ್ಕಾರ ನೇಮಿಸಿರುವ ತನಿಖಾ ತಂಡ ವಿಮ್ಸ್ ಗೆ ಬಂದು ಸಮಗ್ರ ಮಾಹಿತಿ ಪಡೆಯಿತು. ವಿದ್ಯುತ್ ವ್ಯತ್ಯಯವಾಗಿ ಬ್ಲಾಸ್ ಆಗಿರೋ ಕೇಬಲ್ ಇರೋ ಸ್ಥಳ, ಐಸಿಯು ವಾರ್ಡ್, ಜನರೇಟರ್ ಕೊಠಡಿ ಸೇರಿದಂತೆ ಎಲ್ಲೇಡೆ ಪರಿಶೀಲನೆ ನಡೆಸಿತು. ರೋಗಿಗಳ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕೋದ್ರ ಜೊತೆ ಡ್ಯೂಟಿಯಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯವೈಖರಿ ಬಗ್ಗೆಯೂ ಪ್ರಶ್ನಿಸಿದ್ರು. ಈ ಬಗ್ಗೆ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಸೋದಾಗಿ ಹೇಳಿದ್ರು.
ಬಳ್ಳಾರಿ ವಿಮ್ಸ್ ದುರಂತ: ಬಡವರಿಗೆ ಬ್ಯಾನಿ ಬರಬಾರದ್ರಿ, ರೋಗಿಗಳ ಸಂಬಂಧಿಕರ ಅಳಲು
ಪರಿಹಾರ ಎಷ್ಟು ಜನರಿಗೆ ಕೊಡ್ತೀರಿ
ಸದ್ಯ ಸರ್ಕಾರ ಮೃತಪಟ್ಟವರಿಗೆ ಪರಿಹಾರವನ್ನೇನೋ ಘೋಷಣೆ ಮಾಡಿದೆ. ಆದ್ರೇ, ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ನಿಖರವಾದ ಮಹಿತಿ ಇಲ್ಲದೇ ಇರೋದು ಮಾತ್ರ ನಿಜಕ್ಕೂ ವಿಮ್ಸ್ ಆಸ್ಪತ್ರೆಯ ಆಡಳಿತ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತಿದೆ.