ಬಳ್ಳಾರಿ(ಮೇ.10): ಕೊರೋನಾ ವೈರಸ್‌ ಶಂಕಿತರು ಕ್ವಾರಂಟೈನ್‌ ಆಗಲು ಸರ್ಕಾರ ನಿಗದಿಗೊಳಿಸಿದ ಕಡೆ ಇರಬೇಕಾಗಿಲ್ಲ. ಖಾಸಗಿ ಸುಸಜ್ಜಿತ ಲಾಡ್ಜ್‌ಗಳಲ್ಲಿ ಸಹ 14 ದಿನಗಳನ್ನು ಕಳೆಯಬಹುದು. ಅದಕ್ಕೆ ಅಗತ್ಯ ಶುಲ್ಕವನ್ನು ಅವರೇ ಭರಿಸಬೇಕಾಗುತ್ತದೆ. ಇಂತಹದೊಂದು ಸದಾವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿದೆ!

ಸರ್ಕಾರಿ ಹಾಸ್ಟೆಲ್‌ ಹಾಗೂ ನಗರದ ಕೆಲವು ಲಾಡ್ಜ್‌ಗಳಲ್ಲಿ ಈ ಹಿಂದೆ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಆದರೆ, ಅನೇಕ ಸ್ಥಿತಿವಂತರು ತಮಗೆ ಸುಸಜ್ಜಿತ ಲಾಡ್ಜ್‌ನಲ್ಲಿ ಇರಲು ಅವಕಾಶ ಮಾಡಿಕೊಡಬೇಕು ಎಂಬ ಕೋರಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರತಿಷ್ಠಿತ ಲಾಡ್ಜ್‌ಗಳಲ್ಲಿ 14 ದಿನಗಳ ಕಾಲ ತಂಗಲು ಅವಕಾಶ ಕಲ್ಪಿಸಲಾಗಿದೆ.

ಕುಡಿದ ನಶೆಯಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ..!

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಹೊರ ರಾಜ್ಯಗಳಿಂದ ಬಂದವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ ಮಾಡುವುದು ಅನಿವಾರ್ಯವಾಗಿದೆ. ಉಚಿತವಾಗಿ ಜಿಲ್ಲೆಯ ಆಯ್ದ ವಸತಿ ನಿಲಯಗಳಲ್ಲಿ ವಸತಿ ಸೌಲಭ್ಯ ಪಡೆಯಬಹುದಾಗಿದೆ. ಅಥವಾ ಜಿಲ್ಲೆಯ ಆಯ್ದ ಲಾಡ್ಜ್‌ ಅಥವಾ ಹೋಟೆಲ್‌ಗಳಲ್ಲಿ ಹಣ ಪಾವತಿ ಆಧಾರದ ಮೇಲೆ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲು ಅವಕಾಶವಿದೆ. ಈ 14 ದಿನಗಳ ಬಾಡಿಗೆಯನ್ನು ಮುಂಗಡವಾಗಿ ಹೋಟೆಲ್‌ಗೆ ದಾಖಲಾಗುವ ದಿನವೇ ಪಾವತಿಸಬೇಕಾಗುತ್ತದೆ.

ವೆಚ್ಚಗಳ ವಿವರಗಳು:

ಹೋಟೆಲ್‌ ಬಾಲಾ ರೆಜೆನ್ಸಿ, ಪಾರ್ವತಿನಗರ, ಬಳ್ಳಾರಿ, ಹೋಟೆಲ್‌ ರಾಕ್‌ ರೆಜೆನ್ಸಿ, ಜೆ.ಎಸ್‌. ಡಬ್ಲೂ ಸ್ಟೀಲ್‌ ತೋರಣಗಲ್ಲು (ನಾನ್‌ ಎಸಿ ಟ್ವಿನ್‌ ಡಿಲಕ್ಸ್‌) (ಉಪಹಾರ, ಊಟ ಮತ್ತು ವೈಫೈ ಇಂಟರ್‌ನೆಟ್‌ ಸೌಲಭ್ಯಗಳೊಂದಿಗೆ . 19600+ ಜಿಎಸ್‌ಟಿ).

ಹೋಟೆಲ್‌ ಆಶೋಕ ಕಂಫರ್ಟ್‌ ಲಾಡ್ಜ್‌ ಮತ್ತು ಹೋಟಲ್‌ ಚಾಲುಕ್ಯ ಡಿಲಕ್ಸ್‌ ಲಾಡ್ಜ್‌, ಕೋರ್ಟ್‌ ರಸ್ತೆ, ಬಳ್ಳಾರಿ (ಸುಮಾರು 10 ಸಾವಿರ ಉಪಾಹಾರದೊಂದಿಗೆ) ಎಸಿ ಕೊಠಡಿಗಳು ಲಭ್ಯವಿದ್ದು, ಅದಕ್ಕೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.

ಕ್ವಾರಂಟೈನ್‌ ಆಗಿರುವ ಸುಮಾರು 35 ರಿಂದ 40 ಜನರು ವಿವಿಧ ಪ್ರಮುಖ ಸುಸಜ್ಜಿತ ಲಾಡ್ಜ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಕೋರಿಕೆಯಂತೆ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಹೇಳಿದ್ದಾರೆ.