ಸೋಮವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ರಮೇಶ್‌ಗೆ ಎಸ್‌ಐಟಿಯಿಂದ ನೋಟಿಸ್‌|ವಿಚಾರಣೆಗೆ ಹಾಜರಾಗಿ ಎಲ್ಲ ಮಾಹಿತಿ ತನಿಖಾಧಿಕಾರಿಗಳಿಗೆ ನೀಡಲಿರುವ ರಮೇಶ್‌| ತನಿಖೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದ್ದೇನೆ: ಬಾಲಚಂದ್ರ ಜಾರಕಿಹೊಳಿ| 

ಬೆಂಗಳೂರು(ಮಾ.29): ಯುವತಿಯ ಪೋಷಕರಿಗೆ ಯಾರೂ ಒತ್ತಡ ಹಾಕಿಲ್ಲ. ಸ್ವಯಂಪ್ರೇರಿತವಾಗಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಹೋದರರೂ ಆಗಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ರಾತ್ರಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ವಿರುದ್ಧ ಬ್ಲ್ಯಾಕ್‌ಮೇಲ್‌ ದಂಧೆಯಾಗಿದ್ದು, ಕಾನೂನು ಹೋರಾಟ ಮುಂದುವರೆಯಲಿದೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ವಿಡಿಯೋ, ಆಡಿಯೋ ಧ್ವನಿ ಮ್ಯಾಚ್‌ ಮಾಡಲಿ, ಒಂದೇ ತಾಸಿನಲ್ಲಿ ಕೇಸ್‌ ಇತ್ಯರ್ಥ ಆಗುತ್ತೆ!'

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿದೆ. ವಿಚಾರಣೆಗೆ ಹಾಜರಾಗಿ ಎಲ್ಲ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡಲಿದ್ದಾರೆ. ತನಿಖೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾಲಚಂದ್ರ, ‘ಈ ರೀತಿಯ ವಿಚಾರಗಳಲ್ಲಿ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ದುರ್ವರ್ತನೆ ತೋರಬಾರದು. ಬೆಳಗಾವಿಯಲ್ಲಿ ಬಿಜೆಪಿಯವರಾಗಲಿ, ರಮೇಶ್‌ ಜಾರಕಿಹೊಳಿ ಬೆಂಬಲಿಗರಾಗಲೀ ಈ ರೀತಿಯಲ್ಲಿ ವರ್ತಿಸಬಾರದಿತ್ತು. ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬಾರದು ಎಂಬ ಮನವಿ ಮಾಡಲಾಗುವುದು’ ಎಂದರು.