ಬೆಳಗಾವಿ[ಆ.30]: ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರವಾಗಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ನಡುವೆ ವಾಕ್ಸಮರ ನಡೆದಿದ್ದು, ಇದರೊಂದಿಗೆ ಜಾರಕಿಹೊಳಿ ಸಹೋದರರು ಹಾಗೂ ಹೆಬ್ಬಾಳಕರ್‌ ನಡುವೆ ಮತ್ತೆ ಮುಸುಕಿನ ಗುದ್ದಾಟ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ.

‘ಘಟಪ್ರಭಾ ಜಲಪ್ರವಾಹಕ್ಕೆ ಮನೆ ಕಳೆದುಕೊಂಡು ಗೋಕಾಕ್‌ನ ಬಹುತೇಕ ಕುಟುಂಬಗಳು ಬೀದಿಗೆ ಬಂದಿವೆ. ಸರ್ಕಾರ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಂದಲೂ ಸ್ಪಂದಿಸುತ್ತಿಲ್ಲ. ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ದೇವರ ಮೇಲಾಣೆ ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತೇನೆ’ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿಕೆ ನೀಡಿದ್ದಾರೆ.

ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿರುವ ಬಾಲಚಂದ್ರ ಜಾರಕಿಹೊಳಿ, ‘ಸಂತ್ರಸ್ತರಿಗೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ .10 ಸಾವಿರ ಪರಿಹಾರ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಭಿಕ್ಷೆ ಬೇಡುವಂತಹ ಮಾತುಗಳನ್ನಾಡಿರುವುದು ಸರಿಯಲ್ಲ. ಹೆಬ್ಬಾಳಕರ ತಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನಷ್ಟೇ ನೋಡಿಕೊಂಡರೆ ಒಳ್ಳೆಯದು. ಗೋಕಾಕ್‌ ಮತ್ತು ಮೂಡಲಗಿ ಕ್ಷೇತ್ರಗಳನ್ನು ನಾವು (ಜಾರಕಿಹೊಳಿ ಸಹೋದರರು) ನೋಡಿಕೊಳ್ಳುತ್ತೇವೆ. ನಮ್ಮ ಕ್ಷೇತ್ರಗಳನ್ನು ನೋಡಿಕೊಳ್ಳುವ ಶಕ್ತಿಯೂ ನಮಗಿದೆ. ದಯಮಾಡಿ ಯಾರು ಪ್ರವಾಹದ ವಿಚಾರದಲ್ಲಿ ರಾಜಕಾರಣ ಮಾಡಬಾರದು’ ಎಂದಿದ್ದಾರೆ.