ಬಾಗಲಕೋಟೆ ನಗರದಲ್ಲಿ ವ್ಯಾಪಾರೋದ್ಯಮ ಉತ್ತೇಜನಕ್ಕಾಗಿ 200 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ನಿವೇಶನ ಅಭಿವೃದ್ಧಿಪಡಿಸುವ ಯೋಜನೆಗೆ ಚಾಲನೆ ದೊರೆಯುವ ಆಶಾಭಾವನೆ ಮೂಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ಸಭೆಯಲ್ಲಿ ಈ ಯೋಜನೆಯ ವಿಸ್ತೃತ ವರದಿ ತಯಾರಿಸಲು ಅನುಮತಿ ನೀಡಲಾಗಿದೆ.

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ವ್ಯಾಪಾರೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 200 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ವ್ಯಾಪಾರೋದ್ಯಮ ನಿವೇಶನ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಇದೀಗ ಚಾಲನೆ ದೊರೆಯುವ ಆಶಾಭಾವನೆ ಮೂಡಿದೆ ಎಂದು ಬಾಗಲಕೋಟೆ ಶಾಸಕ ಉಮೇಶ ಮೇಟಿ ತಿಳಿಸಿದ್ದಾರೆ.

200 ಎಕರೆ ವಿಸ್ತೀರ್ಣದ ವ್ಯಾಪಾರೋದ್ಯಮ ನಿವೇಶನ ಅಭಿವೃದ್ಧಿ

ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣ ಭಾಗ್ಯ ಜಲ ನಿಗಮದ ಉನ್ನತ ಮಟ್ಟದ ಸಭೆಯಲ್ಲಿ, ಬಾಗಲಕೋಟೆಯಲ್ಲಿ 200 ಎಕರೆ ವಿಸ್ತೀರ್ಣದ ವ್ಯಾಪಾರೋದ್ಯಮ ನಿವೇಶನ ಅಭಿವೃದ್ಧಿಪಡಿಸುವ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಯೋಜನಾ ಸಲಹಾ ಸಂಸ್ಥೆಯ ಮೂಲಕ ವರದಿ ತಯಾರಿಸುವ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ. ಈ ಕುರಿತು ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಂಡಿರುವುದು ಬಾಗಲಕೋಟೆಯ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

ದಿ.ಎಚ್.ವೈ.ಮೇಟಿಯವರು ಬಾಗಲಕೋಟೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿಯ ಕನಸು ಕಂಡಿದ್ದರು. ನಗರದ ಆರ್ಥಿಕ ಪ್ರಗತಿಗೆ ಪೂರಕವಾಗಿ ವ್ಯಾಪಾರೋದ್ಯಮ ಚಟುವಟಿಕೆಗಳನ್ನು ವಿಸ್ತರಿಸುವುದು, ಸ್ಥಳೀಯ ಉದ್ಯಮಿಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಕ್ಕೆ ಹೊಸ ಉತ್ತೇಜನ

ಈ ಯೋಜನೆ ಸಾಕಾರಗೊಂಡರೆ ಬಾಗಲಕೋಟೆ ಜಿಲ್ಲೆಯ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯಲಿದೆ. ಸ್ಥಳೀಯ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಅನುಕೂಲವಾಗುವುದರ ಜೊತೆಗೆ, ಜಿಲ್ಲೆಯ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಕಾರಾತ್ಮಕ ಕ್ರಮ ಕೈಗೊಂಡಿರುವುದು ಸಂತಸದ ಸಂಗತಿ. ಯೋಜನೆಯ ಮುಂದಿನ ಹಂತಗಳಲ್ಲಿ ಅಗತ್ಯ ಅಧ್ಯಯನ, ತಾಂತ್ರಿಕ ಪರಿಶೀಲನೆ ಹಾಗೂ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.