ಬಾಗಲಕೋಟೆಯಲ್ಲಿ ನಿಲ್ಲದ ಕಬ್ಬು ಬೆಳೆಗಾರರ ಹೋರಾಟ, ಡಿಸಿ ಸಭೆ
ಬಾಗಲಕೋಟೆಯಲ್ಲಿ ನಿಲ್ಲದ ಕಬ್ಬು ಬೆಳೆಗಾರರ ಹೋರಾಟ. ರೈತರ ವಿರುದ್ದವಾಗಿ ಕಾರ್ಖಾನೆ ಆರಂಭಿಸಿದ್ದಕ್ಕೆ ರೊಚ್ಚಿಗೆದ್ದ ರೈತರು. ಬೆಂಬಲ ಬೆಲೆಗೆ ಆಗ್ರಹಿಸಿ ಮುಧೋಳ ತಾಲೂಕಿನ ರೈತರ ಬೀದಿ ಹೋರಾಟ. ಸಭೆ ನಡೆಸಿದ ಡಿಸಿ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್,
ಬಾಗಲಕೋಟೆ (ಅ.21): ಅವರೆಲ್ಲಾ ಕಷ್ಟಪಟ್ಟು ಬೆಳದಿದ್ದ ಕಬ್ಬಿನ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡಿದೆ. ಆದರೆ ಅವರಿಗೆ ನಿಗದಿಯಾದ ಬೆಲೆ ಕೊಡಲು ಆ ಕಾರ್ಖಾನೆಗಳು ಮೀನಾ ಮೇಷ ಎನಿಸುತ್ತಿವೆ. ಇದರಿಂದ ಆಕ್ರೋಶಗೊಂಡ ಆ ರೈತರು ಹೋರಾಟದ ಎಚ್ಚರಿಕೆ ಕೊಟ್ಟು, ಬೆಲೆ ನಿಗದಿ ನಂತರ ಕಾರ್ಖಾನೆ ಶುರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇವುಗಳ ಮಧ್ಯೆ ಕಾರ್ಖಾನೆಯೊಂದು ರೈತರನ್ನ ವಿರೋಧಿಸಿ ಕಬ್ಬು ನುರಿಸುವಿಕೆ ಮಾಡಿದ್ದಕ್ಕೆ ಕಲ್ಲು ತೂರಾಟ ನಡೆದ ಪ್ರಸಂಗ ಸಹ ನಡೆದಿದ್ದು, ಇವುಗಳ ಮಧ್ಯೆ ರೈತರ ಹೋರಾಟ ಮುಂದುವರೆದಿದೆ. ಈ ಕುರಿತ ವರದಿ ಇಲ್ಲಿದೆ. ಒಂದೆಡೆ ವಿವಿಧ ಬೇಡಿಕೆಗೆ ಆಗ್ರಹಿಸಿದ ಕಬ್ಬು ಬೆಳೆಗಾರರು ಹಾಗೂ ಅಧಿಕಾರಿಗಳ ಮಧ್ಯೆ ನಡೆದ ಸಭೆ, ಮತ್ತೊಂದೆಡೆ ಸರ್ಕಾರದ ವಿರುದ್ಧ ಘೋಷಣೆ ಗುಡುಗಿದ ಬೆಳೆಗಾರರು. ಇವುಗಳ ಮಧ್ಯೆ ಅಲ್ಲಲ್ಲಿ ಬೀದಿ ಹೋರಾಟಕ್ಕೆ ಮುಂದಾದ ರೈತರು, ಅಂದ್ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಕಬ್ಬು ಬೆಳೆ ಬೆಳೆಯುತ್ತಿದ್ದು, ಇದಕ್ಕೆ ಕಾರಣ ಇಲ್ಲಿರುವ ನೀರಾವರಿ ಸೌಲಭ್ಯ. ಅದರಂತೆ ಕಬ್ಬು ಬೆಳೆಗಳಿಗೆ ಅನುಗುಣವಾಗಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭ ಆಗುತ್ತವೆ. ಅದ್ರಂತೆ ಪ್ರಸಕ್ತ ಕಬ್ಬಿನ ಹಂಗಾಮು ಶುರುವಾಗಿದ್ದು, ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಪ್ರಾರಂಭ ಆಗಿವೆ. ಆದ್ರೆ ಕಬ್ಬು ಬೆಳೆಗೆ ಬೆಲೆ ಘೋಷಣೆ ಮಾಡದೇ ಪ್ರಾರಂಭ ಮಾಡಿರೋದಕ್ಕೆ ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಭೆ
ಇನ್ನು ಬಾಗಲಕೋಟೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಡಳಿತ ಸಭಾ ಭವನದಲ್ಲಿ ಕಬ್ಬು ಬೆಳೆಗಾರರ ಜೊತೆಗೆ ಸಭೆ ನಡೆಸಿದರು. ಈ ವೇಳೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆಯುವುದಾಗಿ ಡಿಸಿ ಭರವಸೆ ನೀಡಿದರು. ಈ ಮಧ್ಯೆ ಎಫ್ಆರ್ಪಿ ಬೆಲೆ ಘೋಷಣೆ ಮಾಡದೇ ಆರಂಭ ಆಗಿರುವ ಕಾರ್ಖಾನೆಗಳನ್ನು ಬಂದ್ ಮಾಡಿಸಿ ಬೆಲೆ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದರು.
ಸಕ್ಕರೆ ಕಾರ್ಖಾನೆಗಳಿಗೆ ಖಡಕ್ ವಾರ್ನಿಂಗ್
ಈ ಮಧ್ಯೆ ಜಿಲ್ಲೆಯ ಕಬ್ಬು ಬೆಳೆಗಾರರು , ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಲು ೨೦೧೮ ರಿಂದ ಬಾಕಿ ಇರುವ ಹಣ ಪಾವತಿಸಬೇಕು. ಅಲ್ಲದೇ ಈ ಬಾರಿಯ ಕಬ್ಬು ನುರಿಸುವ ಮುನ್ನ ಬೆಲೆ ಘೋಷಣೆ ಮಾಡಬೇಕು. ನಮ್ಮ ಬೇಡಿಕೆಯಂತೆ ಒಂದು ಟನ್ ಗೆ ೩೫೦೦ ರೂಪಾಯಿ ಬೆಲೆ ನಿಗದಿ ಮಾಡಬೇಕು. ಯಾವುದೇ ರೈತರು ಕಬ್ಬು ಕಟಾವು ಮಾಡಬಾರದು. ಕಾರ್ಖಾನೆಗಳಿಗೆ ಕಬ್ಬು ಕಳುಹಿಸಬಾರದೆಂಬುದು ಸೇರಿದಂತೆ ರೈತರು ಜಾಗೃತರಾಗಿ ಬೆಲೆ ಘೋಷಣೆ ಆಗುವವರೆಗೂ, ಬಾಕಿ ನೀಡುವರೆಗೂ ಕಬ್ಬು ಕಳಿಸಬಾರದು ಅಂತಾ ಮನವಿ ಮಾಡಿದರಲ್ಲದೆ, ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಅತಿವೃಷ್ಟಿಯಿಂದ ಬೆಳೆ ಹಾನಿ: ಹಾವೇರಿಯಲ್ಲಿ 10 ತಿಂಗಳಲ್ಲಿ 112 ರೈತರ ಆತ್ಮಹತ್ಯೆ
ಪ್ರಭುಲಿಂಗೇಶ್ವರ ಶುಗರ್ಸ್ ಬಳಿ ಕಲ್ಲು ತೂರಾಟ ವಾಹನಗಳು ಜಖಂ:
ಇನ್ನು ರೈತರು ತಮ್ಮ ಬೇಡಿಕೆಗೆ ಆಗ್ರಹಿಸಿ ಮುಧೋಳದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಯಾರೂ ಸಹ ಕಬ್ಬು ಕಟಾವಿಗೆ ಕಾರ್ಖಾನೆಗೆ ಕಬ್ಬು ಒಯ್ಯದಂತೆ ನಿರ್ಧಾರ ಮಾಡಿದ್ರು. ಆದ್ರೆ ಏಕಾಏಕಿ ಜಮಖಂಡಿಯ ಪ್ರಭುಲಿಂಗೇಶ್ವರ ಶುಗರ್ ಕಾರ್ಖಾನೆ ಕಬ್ಬು ನುರಿಸಲು ಆರಂಭಿಸಿತು, ಇಷ್ಟೊತ್ತಿಗಾಗಲೇ ರೈತ್ರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ರು, ಈ ವೇಳೆ ಕಬ್ಬು ಕಟಾವಿಗೆ ಕೊಂಡೊಯ್ಯುತ್ತಿದ್ದ ವಾಹನ ಚಾಲಕನನ್ನ ಥಳಿಸಿದ ಘಟನೆ ನಡೆದು, ಸುತ್ತಮುತ್ತಲಿನಲ್ಲಿದ್ದ ನಾಲ್ಕೈದು ವಾಹನಗಳು ಸಹ ಜಖಂಗೊಂಡವು, ಈ ಘಟನೆ ಬೆನ್ನಲ್ಲೆ ಪ್ರಭುಲಿಂಗೇಶ್ವರ ಶುಗರ್ ಕಾರ್ಖಾನೆ ತಕ್ಷಣ ಬಂದ್ ಮಾಡಲಾಯಿತು. ನಂತರ ಎಚ್ಚರಿಕೆ ನೀಡಿದ ರೈತ ಮುಖಂಡರು ಯಾವುದೇ ಕಾರಣಕ್ಕೂ ಬೆಂಬಲ ಬೆಲೆ ನಿಗದಿಯಾಗುವರೆಗೆ ಯಾವ ಕಾರ್ಖಾನೆ ಸಹ ಆರಂಭಿಸಬಾರದು ಎಂದು ರೈತರು ಎಚ್ಚರಿಕೆ ನೀಡಿದರು.
ಕಬ್ಬು ನಿಯಂತ್ರಣ ಮಂಡಳಿ ಜತೆ ಸಭೆ: ರೈತರಿಗೆ ಅನುಕೂಲವಾಗಲು ಹೊಸ ಆಪ್ ಬಿಡುಗಡೆ
ಈ ಮಧ್ಯೆ ಜಿಲ್ಲೆಯಾದ್ಯಂತ ಮುಧೋಳ ಸೇರಿದಂತೆ ಎಲ್ಲೆಡೆ ಸೂಕ್ತ ಪೋಲಿಸ ಬಿಗಿ ಭದ್ರತೆ ಒದಗಿಸಲಾಗಿದೆ. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರೆದಿದ್ದು, ಇದಕ್ಕೆ ಆದಷ್ಟು ಶೀಘ್ರ ಕಾರ್ಖಾನೆಗಳ ಮಾಲೀಕರ ಜೊತೆ ಸಭೆ ನಡೆಸಿ ಸೂಕ್ತ ಕ್ರಮಕೈಗಳ್ಳಲಿ ಎನ್ನೋದೆ ಎಲ್ಲರ ಆಶಯ.