ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರಾಷ್ಟ್ರ ಮಟ್ಟದ “ಲಕ್ಷ್ಯ” ಪ್ರಶಸ್ತಿ ಗರಿ..!

*   ಹೆರಿಗೆ ಮತ್ತು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಉತ್ತಮ ಕಾರ್ಯನಿರ್ವಹಣೆ
*   ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆಯಲ್ಲಿ ತಾಯಿ ಹಾಗೂ ಶಿಸು ಮರಣ ಕಡಿಮೆಗೊಳಿಸಿ ಕಾರ್ಯನಿರ್ವಹಣೆ
*   ಹೊರ ಜಿಲ್ಲೆಗಳಿಂದಲೂ ಬರುತ್ತಿರುವ ರೋಗಿಗಳು 
 

Bagalkot District Hospital Got Lakshya Award grg

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜೂ.26): ಸಾಮಾನ್ಯವಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗಳು ಅಂದರೆ ಸಾಕು ಅಲ್ಲೇನು ಸರಿಯಾಗಿ ಸೌಲಭ್ಯ ಸಿಗದೇ ಸಾವು ನೋವೇ ಜಾಸ್ತಿ ಅನ್ನೋ ಮಾತು ಕೇಳಿ ಬರುತ್ತಿವೆ, ಆದರೆ ಬಾಗಲಕೋಟೆಯಲ್ಲಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ತಾಯಿ ಹಾಗೂ ಶಿಶು ಮರಣ ಕಡಿಮೆಗೊಳಿಸುವಲ್ಲಿ ಉತ್ತಮ ಕಾರ್ಯನಿರ್ವಣೆ ಮಾಡಿದ ಪರಿಣಾಮ ಬಾಗಲಕೋಟೆ ಸರ್ಕಾರಿ ಜಿಲ್ಲಾಸ್ಪತ್ರೆಯು ರಾಷ್ಟ್ರ ಮಟ್ಟದ ಲಕ್ಷ್ಯ ಪ್ರಶಸ್ತಿಗೆ ಭಾಜನವಾಗಿ ಗಮನ ಸೆಳೆದಿದೆ.

ಹೌದು, ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾದ ಲಕ್ಷ್ಯ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಆಸ್ಪತ್ರೆ ಶ್ರಮಿಸಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ದೆಹಲಿ ಹಾಗೂ ಮಧ್ಯಪ್ರದೇಶದ ನುರಿತ ತಜ್ಞರ ಸಮಿತಿ ತಂಡವು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕೂಲಂಕುಶವಾಗಿ ಪರಿಶೀಲನೆ ನಡೆಸಿದ ನಂತರ ತಂಡ ಒದಗಿಸಿದ ವರದಿಯನ್ವಯ ರಾಷ್ಟ್ರೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತವಾಗಿ  ಪ್ರಶಸ್ತಿಯನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ. 

ಬಾಗಲಕೋಟೆಯಲ್ಲಿ ಕತ್ತೆಗಳ ಓಟದ ಸ್ಪರ್ಧೆ: ಡಾಂಕಿ ಓಟಕ್ಕೆ ಹುಚ್ಚೆದ್ದು ಕುಣಿದ ಯುವ ಜನತೆ..!

3 ವರ್ಷ, 3 ಲಕ್ಷ ಪ್ರತ್ಯೇಕ ಅನುದಾನ

ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಲಕ್ಷ್ಯ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಯ ವಿಭಾಗಕ್ಕೆ ಪ್ರತಿ ವರ್ಷ 3 ಲಕ್ಷ ರೂ.ಗಳಂತೆ ಮೂರು ವರ್ಷಗಳ ಕಾಲ ವಿಶೇಷ ಅನುದಾನ ದೊರೆಯಲಿದೆ. ಆ ಅನುದಾನದಲ್ಲಿ ಶೇ.25 ರಷ್ಟು ಲಕ್ಷ್ಯ ಪ್ರಶಸ್ತಿಗೆ ಸಂಬಂಧಿಸಿದ ಗುಣಮಟ್ಟ ಕಾಯ್ದಿರಿಸುವಲ್ಲಿ ಶ್ರಮಿಸಿದ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಉಳಿದ ಶೇ.75 ರಷ್ಟು ಅನುದಾನವನ್ನು ಆಯಾ ವಿಭಾಗದ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಇನ್ನು ಹೆರಿಗೆಗಾಗಿಯೇ ಪ್ರತ್ಯೇಕವಾಗಿ 6 ಹಾಸಿಗೆಗಳ ಐಸಿಯು ವಿಭಾಗವನ್ನು ಸಹ ಆರಂಭಿಸಲಾಗುತ್ತಿದೆ. ಆ ವಿಭಾಗಕ್ಕೆ ಬೇಕಾಗುವ ಪ್ರತ್ಯೇಕ ವೈದ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಅತ್ಯಾಧುನಿಕ ಉಪಕರಣಗಳೊಂದಿಗೆ ಆಸ್ಪತ್ರೆ ಮೇಲ್ದರ್ಜೆಗೆ

ಜಿಲ್ಲಾಸ್ಪತ್ರೆಯು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಮೀರಿ ಕೆಲಸ ನಿರ್ವಹಿಸುತ್ತಿದೆ. ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರತಿ ದಿನ 700 ದಿಂದ 800 ವರೆಗೆ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಪ್ರಕಾಶ ಬಿರಾದಾರ ನೇತೃತ್ವದಲ್ಲಿ 32 ವಿಭಾಗಗಲ್ಲಿ ಆಸ್ಪತ್ರೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಹೆರಿಗೆ, ಸರ್ಜರಿ ಹಾಗೂ ಮೆಡಿಸಿನ್ ವಿಭಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದ್ದಾರೆ.

ಗುಳೇದಗುಡ್ಡ: ಸಾಕು ನಾಯಿಗೆ ಸೀಮಂತ ಮಾಡಿ ಸಂಭ್ರಮಿಸಿದ ಜ್ಯೋತಿ ಕುಟುಂಬ..!

ಹೊರ ಜಿಲ್ಲೆಗಳಿಂದಲೂ ಬರುತ್ತಿರುವ ರೋಗಿಗಳು 

ಬಾಗಲಕೋಟೆ ಜಿಲ್ಲಾಸ್ಪತ್ರೆ ಒಂದೆಡೆ ಹೆಚ್ಚುವರಿ ಸೌಲಭ್ಯ ಹೊಂದಿರೋದು ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳಿಗೂ ಅನುಕೂಲವಾಗಿದೆ. ಬೆಳಗಾವಿ, ವಿಜಯಪುರ, ಕೊಪ್ಪಳ, ರಾಯಚೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳು ಸಹ ಇಲ್ಲಿಗೆ ಹೆಚ್ಚಾಗಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಈ ಮಧ್ಯೆ ಹೆರಿಗೆ ಕೇಸ್‌ಗಳಲ್ಲಿ ಸರ್ಕಾರದ ಉತ್ತಮ ಸೌಲಭ್ಯಗಳ ಜೊತೆಗೆ ಸಾವು ನೋವು ಹೆಚ್ಚು ಕಾಣದೇ ಉತ್ತಮ ಚಿಕಿತ್ಸೆ ಸಿಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಈ ಮಧ್ಯೆ ಜಿಲ್ಲಾಸ್ಪತ್ರೆಗೆ ಲಕ್ಷ್ಯ ಯೋಜನೆ ಕಾರ್ಯಕ್ರಮ ಪ್ರಶಸ್ತಿ ದೊರಕಿರುವುದು ತೀವ್ರ ಸಂತಸಕ್ಕೆ ಕಾರಣವಾಗಿದ್ದು, ಸೇವೆ ಮಾಡಲು ಪ್ರೇರಣೆಯಾಗಿದೆ ಎಂದು ಹೇಳ್ತಾರೆ ಜಿಲ್ಲಾಸ್ಪತ್ರೆ ಹೆರಿಗೆ ವಿಭಾಗದ ಸಿಬ್ಬಂದಿ ದ್ರಾಕ್ಷಾಯಿಣಿ.

ಅದೇನೆ ಇರಲಿ ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯಲಾಗದೇ ಇರುವ ಅದೆಷ್ಟೋ ರೋಗಿಗಳಿಗೆ ಇಂತಹ ಸರ್ಕಾರಿ ಆಸ್ಪತ್ರೆಗಳು ಹೆಚ್ಚಾಗಿ ಅವರಿಗೆ ಅನುಕೂಲತೆ ಕಲ್ಪಿಸುವಂತಾಗಲಿ ಅನ್ನೋದು ಎಲ್ಲರ ಆಶಯ. 
 

Latest Videos
Follow Us:
Download App:
  • android
  • ios