Asianet Suvarna News Asianet Suvarna News

ಸತೀಶ ಹಿಂದು ಅಲ್ಲದಿದ್ದರೆ ಮತಾಂತರವಾಗಲಿ: ಚರಂತಿಮಠ

ಜಾರಕಿಹೊಳಿಯದ್ದು ಉದ್ಧಟತನದ ಪರಮಾವಧಿ: ಶಾಸಕ ಚರಂತಿಮಠ ಆಕ್ರೋಶ

Bagalkot BJP MLA Veeranna Charantimath Slams Satish Jarkiholi grg
Author
First Published Nov 10, 2022, 8:00 PM IST

ಬಾಗಲಕೋಟೆ(ನ.10):  ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದು ಎಂದರೆ ಅಶ್ಲೀಲ ಪದವಾಗಿದೆ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ, ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಬಿಜೆಪಿ ಕಾರ್ಯಾಲಯದಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ರಾರ‍ಯಲಿ ಬಸವೇಶ್ವರ ವೃತ್ತ ತಲುಪಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ಅಲ್ಲಿ ಸತೀಶ ಜಾರಕಿಹೊಳಿ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಹಿಂದು ಎಂದರೆ ಅಶ್ಲೀಲ, ಪರ್ಶಿಯನ್‌ ಭಾಷೆಯಲ್ಲಿ ಹಿಂದು ಪದಕ್ಕೆ ಕೆಟ್ಟಅರ್ಥವಿದೆ ಎಂದು ಹೇಳಿಕೆ ನೀಡಿರುವುದು ಅವರ ಉದ್ಧಟತನದ ಪ್ರದರ್ಶನದ ಪರಮಾವಧಿ ಎಂದು ಜಾರಕಿಹೊಳಿ ವಿರುದ್ಧ ಹರಿಹಾಯ್ದರು.

ಬಣಜಿಗರ ಅವಹೇಳನ: ಕಾಶಪ್ಪನವರ & ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ

ಹಿಂದು ಪದದ ಕುರಿತು ಮಾತನಾಡುವ ಸಂದರ್ಭವೇ ಅದಲ್ಲ. ಜಾರಕಿಹೊಳಿ ಅವರ ಹೇಳಿಕೆ ಒಂದು ಅನವಶ್ಯಕ ಮಾತು. ಸಾವಿರಾರು ವರ್ಷಗಳ ಹಿಂದೆ ದೇಶದ ರಾಜ, ಮಹಾರಾಜರು ಹಿಂದು ದೇವಾಲಯ ಕಟ್ಟಿರುವ ಪುರಾವೆಗಳು ಇದೆ. ಹಿಂದು ಶಬ್ದಕ್ಕೆ ತನ್ನದೇ ಆದ ಪರಂಪರೆ ಇದೆ. ಸತೀಶ ಜಾರಕಿಹೊಳಿಯವರು ಹಿಂದು ಅಲ್ಲವೆಂದರೆ ಮತಾಂತರ ಆಗಬಹುದಿತ್ತು. ಅನವಶ್ಯಕವಾಗಿ ಭಾರತದಲ್ಲಿರುವ 110 ಕೋಟಿ ಜನ ಹಿಂದುಗಳ ಮನಸಿಗೆ ನೋವಾಗುವ ರೀತಿ ಮಾತನಾಡಿರುವುದನ್ನು ಖಂಡಿಸಿದರು.

ಮೂಢನಂಬಿಕೆ ಬಗ್ಗೆ ಮಾತನಾಡುವುದು ಬೇರೆ, ಮೂಢನಂಬಿಕೆ ನಂಬುವಂತೆ ನಾವೂ ಕೂಡ ಹೇಳುವುದಿಲ್ಲ. ಹಿಂದು ಪದ ಮೂಢನಂಬಿಕೆ ಅಲ್ಲ. ಹಿಂದು ಸ್ಥಾನದಲ್ಲಿ ಹಿಂದುಗಳು ಅಲ್ಲದೇ ಬೇರೆ ಯಾರು ಇರಲು ಸಾಧ್ಯ. ದೇಶದ ಹೆಸರೇ ಹಿಂದುಸ್ತಾನ ಎಂದಿದೆ. ತುಷ್ಟೀಕರಣದ ನೀತಿ, ಮತಬ್ಯಾಂಕ್‌ ಗಳಿಸಿಕೊಳ್ಳಲು ಇದೊಂದು ಗಿಮಿಕ್‌ ಮಾತ್ರ ಎಂದು ಜಾರಕಿಹೊಳಿಯವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಪದ ಕುರಿತು ಮಾತನಾಡಿರುವ ಸತೀಶ ಜಾರಕಿಹೊಳಿಯವರ ಮಾತಿಗೆ ಯಾರೂ ಮನ್ನಣೆ ಕೊಟ್ಟಿಲ್ಲ. ಜಾರಕಿಹೊಳಿ ಅವರು ಸಾರ್ವಜನಿಕವಾಗಿ ಹಿಂದುಗಳ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ತೊಂದರೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದು ಪದ ಕುರಿತು ದುರಂಹಕಾರದ ಮಾತುಗಳನ್ನು ಆಡುವುದು ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದರು.

ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್‌ ಮುತಾಲಿಕ್‌

ಕಾಂಗ್ರೆಸ್‌ ಪಕ್ಷದವರು ತಡವಾಗಿ ಜಾರಕಿಹೊಳಿಯವರ ಹೇಳಿಕೆ ವೈಯಕ್ತಿಕ. ಅದಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ, ಎಂದು ಹೇಳುವ ಮೂಲಕ ತೇಪೆ ಸವರುವ ಯತ್ನ ಮಾಡಿದ್ದಾರೆ. ಹಿಂದು ಪದದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರ ಪರಿಣಾಮ ಏನೆಂಬುದು ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಗೊತ್ತಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬುಡಾ ಮಾಜಿ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾ ಅವರಾದಿ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್‌.ಪಾಟೀಲ, ಶಿವಾನಂದ ಟವಳಿ, ಉಮೇಶ ಹಂಚಿನಾಳ, ಪ್ರದೀಪ್‌ ರಾಯ್ಕರ, ಶ್ರೀನಾಥ ಸಜ್ಜನ, ಅಂಬಾಜಿ ಜೋಶಿ, ಸಂಗಪ್ಪ ಸಜ್ಜನ, ಶಶಿಕಲಾ ಮಜ್ಜಗಿ, ಶೋಭಾ ರಾವ್‌, ಹನಮಕ್ಕನವರ, ಯಲ್ಲಪ್ಪ ನಾರಾಯಣಿ, ಅಯ್ಯಪ್ಪ ವಾಲ್ಮೀಕಿ, ಮಾಧ್ಯಮ ಸಂಚಾಲಕ ರಾಜು ಗಾಣಿಗೇರ ಮುಂತಾದವರು ಪಾಲ್ಗೊಂಡಿದ್ದರು.
 

Follow Us:
Download App:
  • android
  • ios