ಕೆಲಸ ಮಾಡುತ್ತಿದ್ದಾಗಲೇ VISL ಕಾರ್ಮಿಕ ಸಾವು : 10 ಲಕ್ಷ ಪರಿಹಾರ
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಭದ್ರಾವತಿ (ಜ.26): ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೃದಯಾಘಾತ ಸಂಭವಿಸಿದ ತಕ್ಷಣ ಆಂಬ್ಯುಲೆನ್ಸ್ ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಆಂತೋಣಿ ರಾಜ್ ಮೃತಪಟ್ಟಿದ್ದು, ಆಂಬ್ಯುಲೆನ್ಸ್ ಸಕಾಲದಲ್ಲಿ ಆಗಮಿಸ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಗುತ್ತಿಗೆ ನೌಕರರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಸ್ಫೋಟ ಪ್ರಕರಣದ ತನಿಖೆ ಬಗ್ಗೆ ಅಶೋಕ್ ಮಹತ್ವದ ಹೇಳಿಕೆ ...
ಸಂಧಾನ ಯಶಸ್ವಿ: ಕಾರ್ಖಾನೆ ಆಡಳಿತ ಮಂಡಳಿ, ಗುತ್ತಿಗೆದಾರರೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಇದರ ಪರಿಣಾಮ ಮೃತನ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ಹಾಗೂ ಹೆಂಡತಿ ಮತ್ತು ಮಗಳಿಗೆ ನಗರಾಡಳಿತ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಯಿತು. ಸಭೆಯಲ್ಲಿ ನಡೆದ ಮಾತುಕತೆ ಪ್ರಕಾರ ಶಾಸಕ ಬಿ.ಕೆ. ಸಂಗಮೇಶ್ವರ್ ಗುತ್ತಿಗೆದಾರರು ನೀಡಬೇಕಾಗಿರುವ ಪರಿಹಾರ ಮೊತ್ತವನ್ನು ತಕ್ಷಣ ನೊಂದ ಕುಟುಂಬಕ್ಕೆ ನೀಡಬೇಕೆಂಬ ಉದ್ದೇಶದಿಂದ ಸ್ಥಳದಲ್ಲಿಯೇ 10 ಲಕ್ಷ ಪರಿಹಾರ ವಿತರಿಸಿ ಮಾನವೀಯತೆ ಮೆರದರು.
ಸಭೆಯಲ್ಲಿ ಪ್ರಮುಖರಾದ ಆಡಳಿತ ಮಂಡಳಿ ಅಧಿಕಾರಿಗಳು, ಸ್ನೇಹಜೀವಿ ಬಳಗದ ಉಮೇಶ್, ನಗರಸಭಾ ಸದಸ್ಯ ಎಂ.ಎ. ಅಜಿತ್, ಎಎಪಿ ಜಿಲ್ಲಾಧ್ಯಕ್ಷ ಎಚ್.ರವಿಕುಮಾರ್, ಬಾಲಕೃಷ್ಣ, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಮತ್ತು ಪದಾಧಿಕಾರಿಗಳು, ಗುತ್ತಿಗೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.