ಹಾವೇರಿ(ಫೆ.09): ಸಚಿವರಾಗಲು ಅರ್ಹರಾಗಿರುವ ಹಿರಿಯ ಶಾಸಕರು ಬಿಜೆಪಿಯಲ್ಲಿ ಬಹಳಷ್ಟಿದ್ದಾರೆ. ತಾವು ಸಚಿವರಾಗಬೇಕೆಂಬ ಆಕಾಂಕ್ಷೆ ಅನೇಕ ಶಾಸಕರಿಗಿದೆ. ನನ್ನಂಥವರಿಗೆ ಇನ್ನೂ ದೊಡ್ಡ ಸ್ಥಾನ ಸಿಗಬೇಕು ಎಂಬ ಆಕಾಂಕ್ಷೆಯೂ ಇರಬಹುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಲ್ಲರಿಗೂ ಅವಕಾಶ ಮಾಡಿಕೊಡುತ್ತಾರೆ. ಆದರೆ, ಅದಕ್ಕೆ ಕಾಲಾವಕಾಶ ಬೇಕು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರಕ್ಕೆ ಶನಿವಾರ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲ ವರ್ಗದ ಬಹುಜನರು ಶ್ರೀರಾಮುಲು ಉಪಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ನನ್ನ ಮೇಲೆ ಯಡಿಯೂರಪ್ಪ ಅವರಿಗೆ ಪ್ರೀತಿ, ವಿಶ್ವಾಸವಿದೆ. ಆದರೆ, ಆ ಸ್ಥಾನ ಕೊಡಲು ಅವಕಾಶ ಬೇಕಲ್ಲ. ಅವಕಾಶ ಸಿಕ್ಕಾಗ ಕೊಟ್ಟೇ ಕೊಡುತ್ತಾರೆ. ಪ್ರತಿಯೊಬ್ಬರಿಗೂ ಆಸೆ ಸಹಜ. ಆದರೆ, ಪಕ್ಷದ ಮೇಲೆ ಹೊರೆ ಹಾಕುವುದು ಸರಿಯಲ್ಲ. ಸೂಕ್ತ ಸಮಯಕ್ಕಾಗಿ ಕಾಯಬೇಕು. ವರಿಷ್ಠರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಕ್ಷದಲ್ಲಿ ಸಚಿವರಾಗಲು ಅರ್ಹರಾಗಿರುವ ಹಿರಿಯ ಶಾಸಕರು ಬಹಳಷ್ಟಿದ್ದಾರೆ. ಅವರೆಲ್ಲ ಈಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕುವ ಬದಲಿಗೆ ಅವಕಾಶಕ್ಕಾಗಿ ಕಾಯುವುದು ಸೂಕ್ತ. ನಾಲ್ಕೈದು ಬಾರಿ ಶಾಸಕರಾದ ಹಿರಿಯರು ಮಂತ್ರಿ ಆಗಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿದೆ. ನಾನು ಅವರಲ್ಲಿ ವಿನಂತಿ ಮಾಡುವುದೇನೆಂದರೆ, ಪ್ರಸ್ತುತ ಯಡಿಯೂರಪ್ಪ ಅವರ ಮೇಲೆ ಇದಕ್ಕಾಗಿ ಒತ್ತಡ ಹಾಕಿದರೆ ಏನೂ ಪ್ರಯೋಜನ ಆಗಲ್ಲ. ಪ್ರತಿಯೊಬ್ಬರನ್ನೂ ಅವರೇ ಗುರುತಿಸುತ್ತಾರೆ, ಕಾಲಾವಕಾಶ ಕೂಡಿ, ಅವಕಾಶ ಸಿಕ್ಕಾಗ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುತ್ತಾರೆ ಎಂದರು.

ಕೊರೋನಾ ಮುಂಜಾಗ್ರತೆ:

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಬಂದರು, ಕರಾವಳಿ ಪ್ರದೇಶ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 97 ಜನರ ರಕ್ತದ ಮಾದರಿ ತಪಾಸಣೆ ಮಾಡಲಾಗಿದ್ದು ಎಲ್ಲವೂ ನೆಗೆಟಿವ್‌ ಬಂದಿದೆ. ಆದ್ದರಿಂದ ಕೊರೋನಾ ವೈರಸ್‌ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಕೇರಳದಿಂದ ಬರುವ ವಾಹನಗಳಲ್ಲಿರುವ ಜನರ ರಕ್ತ ತಪಾಸಣೆಯೂ ಮಾಡಲಾಗುತ್ತಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯನ್ನು ಮೀಸಲಿಡಲಾಗಿದೆ ಎಂದರು.

ಆರೋಗ್ಯ ಸೇವೆ ನೀಡುವ ಮೊಬೈಲ್‌ ಎಲ್‌ಇಡಿ ವಾಹನಗಳನ್ನು 15 ಜಿಲ್ಲೆಗಳಿಗೆ ನೀಡಲಾಗಿದ್ದು ಮುಂದಿನ ತಿಂಗಳು ಉಳಿದ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಸಾಂಕ್ರಾಮಿಕ ರೋಗ ಬಂದಾಗ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಎಂಆರ್‌ಐ ಭರವಸೆ

ಇಲ್ಲಿಯ ಜಿಲ್ಲಾಸ್ಪತ್ರೆಗೆ ಎಂಆರ್‌ಐ ಸ್ಕಾ್ಯನಿಂಗ್‌ ಯಂತ್ರವನ್ನು ಅಳವಡಿಸಲು ಖಾಸಗಿಯವರು ಮುಂದಾದರೆ ಒಪ್ಪಂದ ಮಾಡಿಕೊಳ್ಳುವಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ನೆಹರು ಓಲೇಕಾರ ಅವರ ಮನವಿ ಮೇರೆಗೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ಒಂದು ವೇಳೆ ಖಾಸಗಿಯವರು ಬರದಿದ್ದರೆ ಸರ್ಕಾರದಿಂದಲೇ ಎಂಆರ್‌ಐ ಯಂತ್ರ ಅಳವಡಿಸುವ ಕಾರ್ಯ ಮಾಡಲಾಗುವುದು ಎಂದರು.