ಕೆಲವರು ಆಯುರ್ವೇದಿಕ್‌ ಹೆಸರಿನಲ್ಲಿ ಗಿಡಮೂಲಿಕೆಗಳಿಂದ ವಾಸಿ ಮಾಡಬಹುದು ಎನ್ನುವುದಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹುಗಳಿಗೆ ಕಿವಿಗೊಡದೆ ಲಾಕ್‌ಡೌನ್‌ ಪಾಲಿಸುವುದು ಅಗತ್ಯವೆಂದು ಜಿಲ್ಲೆಯ ಪ್ರಮುಖ ಆಯುಷ್‌ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

ಚಿತ್ರದುರ್ಗ(ಏ.17): ಕೊರೊನಾಗೆ ಇದುವರೆಗೂ ಯಾವುದೇ ಔಷಧ ಲಭ್ಯವಿಲ್ಲ. ಕೆಲವರು ಆಯುರ್ವೇದಿಕ್‌ ಹೆಸರಿನಲ್ಲಿ ಗಿಡಮೂಲಿಕೆಗಳಿಂದ ವಾಸಿ ಮಾಡಬಹುದು ಎನ್ನುವುದಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹುಗಳಿಗೆ ಕಿವಿಗೊಡದೆ ಲಾಕ್‌ಡೌನ್‌ ಪಾಲಿಸುವುದು ಅಗತ್ಯವೆಂದು ಜಿಲ್ಲೆಯ ಪ್ರಮುಖ ಆಯುಷ್‌ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಐದಕ್ಕೂ ಹೆಚ್ಚು ವೈದ್ಯರು ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದರು.

ರಂಜಾನ್‌ ತಿಂಗಳಲ್ಲೂ ಲಾಕ್‌ಡೌನ್‌ ಪಾಲನೆ ಕಡ್ಡಾಯ

ಪೌಷ್ಟಿಕಾಂಶ, ನಾರಿನಾಂಶ, ವಿಟಮಿನ್‌-ಸಿ ಯುಕ್ತ ಆಹಾರ ಪದಾರ್ಥಗಳ ಹೆಚ್ಚು ಬಳಕೆಯ ಜೊತೆಗೆ, ತುಳಸಿ, ದಾಲ್ಚಿನ್ನಿ, ಮೆಣಸು, ಅರಿಶಿಣ, ಕರಿಬೇವು, ಶುಂಠಿಯನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು. ಅಲ್ಲದೆ ಪಾಲಕ್‌, ನುಗ್ಗೆ, ನೆಲ್ಲಿಕಾಯಿ, ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಕೆ.ಎಲ್‌.ವಿಶ್ವನಾಥ್‌ ಹೇಳಿದರು.

ನಮ್ಮ ದೇಹದ ಮೂಳೆಯ ಅಸ್ಥಿಮಜ್ಜೆಯಲ್ಲಿ ಕೆಂಪು ರಕ್ತಕಣ, ಬಿಳಿರಕ್ತಕಣ ಹಾಗೂ ಕಿರುತಟ್ಟೆಗಳು ಉತ್ಪತ್ತಿಯಾಗುತ್ತವೆ. ಬಿಳಿರಕ್ತಕಣಗಳಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುತ್ತದೆ. ಅಲ್ಲದೇ ಲಿಂಪೋಸೈಟ್ಸ್‌ ಬಿ ಮತ್ತು ಟಿ ಗಳಲ್ಲೂ ರೋಗ ನಿರೋಧಕ ಶಕ್ತಿ ಇದ್ದು, ಇವು ವೈರಾಣುಗಳ ವಿರುದ್ಧ ಸದಾ ಹೋರಾಟ ನಡೆಸುತ್ತಿರುತ್ತವೆ. ಕೆಲವು ರೋಗಗಳಿಗೆ ದೇಹವೇ ರೋಗ ನಿರೋಧಕ ಶಕ್ತಿಯ ಮೂಲಕ ನಿರ್ನಾಮ ಮಾಡುತ್ತದೆ. ಹೊರಗಿನಿಂದ ದೇಹ ಪ್ರವೇಶಿಸಿದ ವೈರಾಣುಗಳ ವಿರುದ್ಧ ಹೋರಾಟ ನಡೆಸಿ ದೇಹಕ್ಕೆ ರಕ್ಷಣೆ ಒದಗಿಸುತ್ತವೆ. ಜೀವಸತ್ವ ಸಿ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ದಾದಿಗೂ ಕೊರೋನಾ ಸೋಂಕು ದೃಢ: ಇಡೀ ಆಸ್ಪತ್ರೆಯೇ ಕ್ವಾರಂಟೈನ್‌..!

ಜೀರಿಗೆ ಹಾಗೂ ಅರಿಶಿಣವನ್ನು ಪ್ರತಿನಿತ್ಯ ಆಹಾರದಲ್ಲಿ ಬಳಸಲಾಗುತ್ತದೆ. ಜೀರ್ಣ ಶಕ್ತಿ ಉತ್ತಮವಾಗಿದ್ದಲ್ಲಿ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಹೇರಳವಾಗಿ ದೊರೆಯುವ ಹಣ್ಣು, ತರಕಾರಿಗಳನ್ನು ಆಹಾರ ಪದ್ಧತಿಯಲ್ಲಿ ಬಳಸಬೇಕು. ಗಿಡಮೂಲಿಕೆಯ ಕಾರ್ಯವೈಖರಿಗೆ ಅನುಗುಣವಾಗಿ ಕಷಾಯ ಮಾಡುವುದು, ಕಾಯಿಸಿ ಸೇವಿಸುವುದು, ಮೊಳಕೆ ಬರಿಸುವುದು ಅಥವಾ ಅದನ್ನು ಜಜ್ಜಿ ಸೇವಿಸಬಹುದು ಎಂದು ಹಿರಿಯೂರು ಸರ್ಕಾರಿ ಆಯುರ್ವೇದಿಕ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಕುಮಾರ್‌ ಹೇಳಿದರು.

ಚಳ್ಳಕೆರೆ ಬಾಪೂಜಿ ಆರ್ಯುವೇದಿಕ್‌ ಮೆಡಿಕಲ್‌ ಕಾಲೇಜು ರಸಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂದೀಪ್‌ , ಮಲ್ಲಾಡಿಹಳ್ಳಿ ಆಯುರ್ವೇದಿಕ್‌ ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ್‌, ವಾರ್ತಾಧಿಕಾರಿ ಧನಂಜಯ ಪಾಲ್ಗೊಂಡಿದ್ದರು.