ಆಯಸ್ಸು ವೃದ್ಧಿಗೆ ನವಯುಗದಲ್ಲಿ ಇದೇ ಬೆಸ್ಟ್ ಔಷಧ!
ಕಲುಷಿತ ಅಹಾರ ಸೇವನೆಯಿಂದ ಮನುಷ್ಯ ಕಾಯಿಲೆಗಳಿಗೆ ತುತ್ತಾಗುವುದರ ಜೊತೆಗೆ ಇಂಗ್ಲಿಷ್ ಮೆಡಿಸನ್ಸ್ ಮೊರೆಹೋಗಿ ಆರೋಗ್ಯ, ಆಯಸ್ಸು ಕಳೆದುಕೊಳ್ಳುತ್ತಿದ್ದು, ಪ್ರತಿಯೊಬ್ಬರು ಆಯುರ್ವೇದ ಚಿಕಿತ್ಸೆ ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಆಯುಷ್ ವೈದ್ಯಾಧಿಕಾರಿ ಡಾ. ಸುಮನಾ ತಿಳಿಸಿದರು.
ತಿಪಟೂರು : ಕಲುಷಿತ ಅಹಾರ ಸೇವನೆಯಿಂದ ಮನುಷ್ಯ ಕಾಯಿಲೆಗಳಿಗೆ ತುತ್ತಾಗುವುದರ ಜೊತೆಗೆ ಇಂಗ್ಲಿಷ್ ಮೆಡಿಸನ್ಸ್ ಮೊರೆಹೋಗಿ ಆರೋಗ್ಯ, ಆಯಸ್ಸು ಕಳೆದುಕೊಳ್ಳುತ್ತಿದ್ದು, ಪ್ರತಿಯೊಬ್ಬರು ಆಯುರ್ವೇದ ಚಿಕಿತ್ಸೆ ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಆಯುಷ್ ವೈದ್ಯಾಧಿಕಾರಿ ಡಾ. ಸುಮನಾ ತಿಳಿಸಿದರು.
ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯಕ್ತಾಶ್ರಯದಲ್ಲಿ ೮ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆಯುಷ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮುದ್ರ ಮಂಥನ ಕಾಲದಲ್ಲಿ ಅಮೃತ ಕಳಶ ಹೊತ್ತು ಧನ್ವಂತರಿ ದೇವತೆ ಆಯುರ್ವೇದದ ಪ್ರವರ್ತಕರು. ಈ ದೇವತೆಯು ಅವತರಿಸಿದ ದಿನವನ್ನು ಧನ್ವಂತರಿ ಜಯಂತಿ ಹಾಗೂ ರಾಷ್ಟ್ರೀಯ ಆಯರ್ವೇದ ದಿನವನ್ನಾಗಿ 2015ರಿಂದಲೂ ಆಚರಿಸುತ್ತಾ ಬರುತ್ತಿದ್ದೇವೆ. ರೋಗನಿರೋಧಕ ಶಕ್ತಿಯ ಕೊರತೆಯಿಂದಾಗಿ ಕಡಿಮೆ ವಯಸ್ಸಿನಲ್ಲೇ ಕಾಯಲೆಗಳು ಕಾಣಿಸುತ್ತಿವೆ. ಇದನ್ನು ತಡೆಗಟ್ಟಲು ಜೀವನ ಶೈಲಿ ಆಹಾರ ಪದ್ಧತಿ, ಯೋಗ ಧ್ಯಾನ ಪ್ರಾಣಾಯಾಮಗಳಿಂದ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಬಹುದು. ಗಿಡಮೂಲಿಕೆಗಳನ್ನು ಮನೆ ಮದ್ದಾಗಿ ಬಳಸುವುದರಿಂದ ರೋಗ ನಿವಾರಣೆ ಮಾಡಿಕೊಳ್ಳಬಹುದು. ದೇಶಿ ಹಸುಗಳ ಪಾಲನೆ ಪೋಷಣೆಯಿಂದಲೂ ಸಮಗ್ರ ಆರೋಗ್ಯ ಕಾಪಾಡಿಕೊಳ್ಳಬಹುದು. ಆಯುರ್ವೇದದಂತಹ ಚಿಕಿತ್ಸಾ ಪದ್ಧತಿಯಲ್ಲಿನ ಔಷಧ ಬಳಸಿಕೊಂಡು ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೆವಿಕೆ ಹಿರಿಯ ವಿಜ್ಞಾನಿ ಡಾ. ಗೋವಿಂದೇಗೌಡ ಮಾತನಾಡಿ, ನಶಿಸಿ ಹೋಗುತ್ತಿರುವ ಸಾವಯವ ಕೃಷಿ ಮತ್ತು ಗಿಡಮೂಲಿಕೆ ಬೆಳೆಯುವಂತಹ ಪದ್ಧತಿ ರೂಢಿಸುವುದು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನಿವಾರ್ಯ. ವೇಗದ ಔಷಧಿಗಳಿಂದಾಗಿ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದ್ದು, ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆ, ಆಯುರ್ವೇದಗಳಿಂದ ತಯಾರಿಸುವ ಔಷಧಿಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆಯುರ್ವೇದ ಔಷಧಿಗಳನ್ನು ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ್, ಪೌಷ್ಟಿಕ ಕೈತೋಟದ ಮಹತ್ವ ಹಾಗೂ ಅದರ ಪ್ರಯೋಜನ ತಿಳಿಸಿದರು.
ಕೆವಿಕೆ ಗೃಹ ವಿಜ್ಞಾನಿ ಡಾ. ಕೆ. ನಿತ್ಯಶ್ರೀ ಸಿರಿಧಾನ್ಯ ಮಹತ್ವ ಮತ್ತು ಆರೋಗ್ಯ ಪರಿಪಾಲನೆಯ ಬಗ್ಗೆ ತಿಳಿಸಿ ಯಾವ ಧಾನ್ಯಗಳಲ್ಲಿ ಯಾವ ಪೋಷಕಾಂಶಗಳಿವೆ ಅವುಗಳಿಂದ ಆರೋಗ್ಯದ ರಕ್ಷಣೆ ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿಪರ ರೈತ ಬರಗೂರಿನ ರಂಗಧಾಮ ಮಾತನಾಡಿ, ಅಳಿವಿನಂಚಿನಲ್ಲಿರುವ ನೈಸರ್ಗಿಕ ಸೊಪ್ಪುಗಳಾದ ಕೋಲಾನೆ ಸೊಪ್ಪು, ದಿನ್ನೆ ಸೊಪ್ಪು, ಕನ್ನೆ ಸೊಪ್ಪು, ಕಿರುಕ ಸಾಲೆ ಸೊಪ್ಪು, ಹರಿವೆ ಸೊಪ್ಪು, ಕೋಳಿಕಾಲಿನ ಸೊಪ್ಪು, ವರಗಿ ಸೊಪ್ಪು, ನುಚ್ಚುಗೋಡಿ ಸೊಪ್ಪು, ದೊಡ್ಡುಗೋನೆ ಸೊಪ್ಪು, ಅಜ್ಜಿ ಸೊಪ್ಪು, ಹಾಲೆ ಸೊಪ್ಪು, ಮುಂಗುರುಬಳ್ಳಿ ಸೊಪ್ಪು, ಅನಗೋನೆ ಸೊಪ್ಪು, ದೊಗ್ಗರೆ ಸೊಪ್ಪು, ನಗಲಿ ಸೊಪ್ಪುಗಳ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಾದ ತಡಸೂರು ಯೋಗಾನಂದಮೂರ್ತಿ, ರಂಗಧಾಮ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಬಿ.ಎನ್. ಪ್ರೇಮಾ, ಕೆ.ವಿ.ಕೆ ವಿಜ್ಞಾನಿಗಳಾದ ದರ್ಶನ್, ಡಾ. ಕೀರ್ತಿಶಂಕರ್, ಡಾ. ತಸ್ಮೀಯಾ ಕೌಸರ್, ಮನೋಜ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಆಯುರ್ವೇದ ಔಷಧಿಗಳು ಹಾಗೂ ಗೋವಿನ ಹಣತೆಗಳನ್ನು ವಿತರಿಸಲಾಯಿತು.