ಜ.22ರಿಂದ 48 ದಿನ ಅಯೋಧ್ಯೆ ಬ್ರಹ್ಮಕಲಶೋತ್ಸವ: ದೇಶಾದ್ಯಂತ ಸಡಗರ ಆಚರಣೆಗೆ ಪೇಜಾವರ ಶ್ರೀ ಕರೆ
ಜ.22ರಂದು ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ‍್ಳಲು ಅನಾನುಕೂಲ ಆಗಬಹುದು. ಆದರೆ ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲ ಜನತೆ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಹೇಳಿದ ಪೇಜಾವರ ಶ್ರೀ
ಮಂಗಳೂರು(ನ.17): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024 ಜನವರಿ 22ರಿಂದ ಮಾ.10ರ ವರೆಗೆ 48 ದಿನಗಳ ಕಾಲ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಕದ್ರಿಯ ಮಂಜುಪ್ರಾಸಾದದಲ್ಲಿ ಗುರುವಾರ ಸಾರ್ವಜನಿಕ ಗೋಪೂಜಾ ಉತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಜ.22ರಂದು ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ‍್ಳಲು ಅನಾನುಕೂಲ ಆಗಬಹುದು. ಆದರೆ ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲ ಜನತೆ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಪೇಜಾವರಶ್ರೀ ಹೇಳಿದರು.
ಪುತ್ತೂರು ಮಾಜಿ ಶಾಸಕ ಮಠಂದೂರಿಗೆ ವಿಷಪೂರಿತ ಹಾವು ಕಡಿತ: ಆಸ್ಪತ್ರೆಗೆ ದಾಖಲು
ಜ.17ರಂದು ಶ್ರೀರಾಮ ಶಿಲಾ ವಿಗ್ರಹ ಮೆರವಣಿಗೆ:
ಜ.17ರಂದು ಅಯೋಧ್ಯೆಗೆ ಶ್ರೀರಾಮನ ವಿಶಾಲ ಶಿಲಾ ವಿಗ್ರಹದ ಮೆರವಣಿಗೆ ನಡೆಯಲಿದೆ. ಸುಮಾರು ಐದಾರು ಅಡಿ ಎತ್ತರದ ಶ್ರೀರಾಮನ ಶಿಲಾ ಪ್ರತಿಮೆಯನ್ನು ಕರಸೇವಕಪುರಂನಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಪವಿತ್ರ ಸರಯೂ ನದಿಯಲ್ಲಿ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕೊಂಡೊಯ್ದು ಜ.18ರಂದು ಶ್ರೀರಾಮ ಜನ್ಮಸ್ಥಳದ ಮೂಲ ಸ್ಥಾನದಲ್ಲಿ ನಿಲ್ಲಿಸಲಾಗುವುದು. ಜ.18ರಿಂದ 20ರ ವರೆಗೆ ಜಲಾಧಿವಾಸ, ಧಾನ್ಯದಿವಾಸ, ಶಿಲಾಧಿವಾಸ ವಿಧಿವಿಧಾನ ನೆರವೇರಿಸಿ ಜ.21ರಂದು ಪ್ರತಿಷ್ಠಾಪನೆಯ ಪೂರ್ವಸಿದ್ಧತೆ ನಡೆಸಲಾಗುವುದು ಎಂದರು. ಜ.22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ, ಮಂದಿರ ಉದ್ಘಾಟನೆ ಬಳಿಕ ಮೂರು ಗಂಟೆಗಳ ಕಾಲ ಸಭಾ ಕಾರ್ಯಕ್ರಮ ನಡೆಯಲಿದೆ. ಹಾಲಿ ಪೂಜೆಗೊಳ್ಳುತ್ತಿರುವ ಶ್ರೀರಾಮನ ಮೂರ್ತಿ ಕೂಡ ಅಲ್ಲೇ ಪ್ರತಿಷ್ಠಾಪನಗೊಳ್ಳಲಿದೆ ಎಂದರು.
ದೀಪೋತ್ಸವ ಮೂಲಕ ಪ್ರತಿಷ್ಠಾಚರಣೆ:
ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆ ಹಾಗೂ ಮಂದಿರ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆಗೊಳಿಸಿದ್ದು, ದೇಶ, ವಿದೇಶಗಳಲ್ಲಿ ವೀಕ್ಷಣೆಗೆ ಅವಕಾಶ ಇದೆ. ಅಂದು ರಾತ್ರಿ ಐದು ಶತಮಾನದ ಸಂಕೇತವಾಗಿ ಐದು ದೀಪಗಳನ್ನು ಪ್ರತಿ ಮನೆಗಳಲ್ಲಿ ಬೆಳಗುವ ಮೂಲಕ ಇದನ್ನು ದೀಪೋತ್ಸವವಾಗಿಯೂ ಆಚರಿಸಬೇಕು. ಅಲ್ಲದೆ ಇಡೀ ದಿನ ದೇವಸ್ಥಾನ, ಮಂದಿರ, ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಭಜನೆ ನಡೆಸಬೇಕು ಎಂದು ಪೇಜಾವರಶ್ರೀ ಆಶಿಸಿದರು.
ಈ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಕನ್ನಡಿಗರು ಸೇರಿದಂತೆ ವಿವಿಧ ಋತ್ವಿಜರ ನೇತೃತ್ವ, ಮುಂದಾಳತ್ವದಲ್ಲಿ ನಡೆಯಲಿದೆ. ಕೊನೆಯ ನಾಲ್ಕೈದು ದಿನಗಳಲ್ಲಿ ಬ್ರಹ್ಮಕಲಶ ಹವನ, ಅಭಿಷೇಕ ಮತ್ತಿತರ ವಿಧಿವಿಧಾನ ನಡೆಯಲಿದೆ ಎಂದರು.
ಎಲ್ಲ 48 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ರಾಜ್ಯಗಳ ಸಂಸ್ಕೃತಿಯನ್ನು ಸಾರುವ ಕಲಾ ತಂಡಗಳ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ದೇಶದ ಸಾಂಸ್ಕೃತಿಕ ಜಗತ್ತು ಅಯೋಧ್ಯೆಯಲ್ಲಿ ಅನಾವರಣಗೊಳ್ಳಲಿದೆ ಎಂದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.
ಶ್ರೀರಾಮನಿಗೆ ಪ್ರತ್ಯೇಕ ಸೇವೆ ಇಲ್ಲ!
ಕೋಟ್ಯಂತರ ಭಕ್ತರ ಆಶಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರದ್ಧಾಕೇಂದ್ರ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮನಿಗೆ ಪ್ರತ್ಯೇಕ ಸೇವೆ ಎಂಬುದು ಇರುವುದಿಲ್ಲ. ಇಂತಹ ಅಪರೂಪದ ಯೋಚನೆ ಹೊಸ ಮೇಲ್ಪಂಕ್ತಿಯನ್ನು ಹುಟ್ಟುಹಾಕಿದೆ.
ಶ್ರೀರಾಮ ಮಂದಿರ ಮೂಲಕ ದೇಶದಲ್ಲಿ ರಾಮರಾಜ್ಯ ನಿರ್ಮಾಣದ ಕನಸು ಎಲ್ಲರದ್ದು. ಈ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ಭಕ್ತರು ಮಾಡಿದ ಸಾಮಾಜ ಸೇವೆಯನ್ನು ಶ್ರೀರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ. ಇದರ ಹೊರತು ಬೇರೆ ಯಾವುದೇ ಪ್ರತ್ಯೇಕ ಸೇವೆ ಇರುವುದಿಲ್ಲ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಖಾಲಿ: ಪ್ರಿಯಾಂಕ್ ಖರ್ಗೆ
ಭಕ್ತರಿಗಾಗಿ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಹರಕೆ, ಸೇವೆ ಯಾವುದೂ ಇರುವುದಿಲ್ಲ ಎಂದು ಪೇಜಾವರಶ್ರೀ ಸ್ಪಷ್ಟಪಡಿಸಿದರು.
ಸಮಾಜ ಸೇವೆ ಹೀಗೂ ಮಾಡಬಹುದು:
ನಮ್ಮ ಪ್ರಮುಖ ಅಪೇಕ್ಷೆ ಇರುವುದು ಶ್ರೀರಾಮನ ಆದರ್ಶ, ರಾಮರಾಜ್ಯ ಸ್ಥಾಪನೆಯ ಉದ್ದೇಶ. ಇದು ಈಡೇರಬೇಕಾದರೆ, ಭಕ್ತರು ಸ್ವಯಂ ಆಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅಂದರೆ ರಾಮನ ದರ್ಶನ, ರಾಮನ ಭಕ್ತಿ, ದೇಶ ಸೇವೆ ಎಂದರೆ ಬೇರೆ ಅಲ್ಲ, ಅದೆಲ್ಲವೂ ಒಂದೇ ಎಂಬ ಭಾವದಿಂದ ನಮ್ಮನಮ್ಮ ಊರು, ಕೇರಿ, ಗ್ರಾಮಗಳಲ್ಲಿ ದುರ್ಬಲ, ಅಶಕ್ತರಿಗೆ, ದೀನರಿಗೆ ಕೈಲಾದ ರೂಪದಲ್ಲಿ ನೆರವಾಗಬೇಕು. ಮಕ್ಕಳ ವಿವಾಹ, ಮನೆ ನಿರ್ಮಾಣ, ಉಚಿತ ಚಿಕಿತ್ಸೆಯೇ ಮೊದಲಾದ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಡಂಬರದ ವಿವಾಹ, ಆಚರಣೆಗಳ ಬದಲು ಆ ಮೊತ್ತವನ್ನು ಸಮಾಜ ಸೇವೆಗೆ ನೀವೇ ನೀಡಿ ಕೃತಾರ್ಥರಾಗುವುದೇ ರಾಮನ ಸೇವೆ, ಅರ್ಥಾತ್ ದೇಶ ಸೇವೆ ಎಂದರು.