ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಏರ್‌ಪೋರ್ಟ್ ರಸ್ತೆಯಲ್ಲಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಸಹಯೋಗದಲ್ಲಿ ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾ (ಎಎನ್‌ಪಿಆರ್ ಕ್ಯಾಮರಾ)’ ಅಳವಡಿಸಲು ನಗರ ಸಂಚಾರ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು (ಫೆ.13): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಸಂಪರ್ಕ ಕಲ್ಪಿಸುವ ಏರ್‌ಪೋರ್ಟ್ ರಸ್ತೆಯಲ್ಲಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು (Accident Control) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಹಯೋಗದಲ್ಲಿ ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾ (ಎಎನ್‌ಪಿಆರ್ ಕ್ಯಾಮರಾ)’ ಅಳವಡಿಸಲು ನಗರ ಸಂಚಾರ ಪೊಲೀಸರು (Traffic Police) ಸಿದ್ಧತೆ ನಡೆಸಿದ್ದಾರೆ.
ಈ ಸಂಬಂಧ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ (Dr BR Ravikanthe Gowda , ಎನ್‌ಎಚ್‌ಎಐ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಏರ್‌ಪೋರ್ಟ್ ರಸ್ತೆಯಲ್ಲಿ ಹೆಬ್ಬಾಳ ಮೇಲ್ಸೇತುವೆಯಿಂದ ಏರ್‌ಪೋರ್ಟ್ ಸಾದಹಳ್ಳಿ ಟೋಲ್ ಗೇಟ್ ವರೆಗೆ 12 ಎಎನ್‌ಪಿಆರ್ ಕ್ಯಾಮರಾ ಅಳವಡಿಸುವ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.
Bengaluru Traffic Police: ಯುವಕನ ಜತೆ ಅನುಚಿತ ವರ್ತನೆ: ಪಿಎಸ್‌ಐ ವಿರುದ್ಧ ಕ್ರಮ
ಅತಿವೇಗಕ್ಕೆ ಬ್ರೇಕ್?: ಏರ್‌ಪೋರ್ಟ್ ರಸ್ತೆಯಲ್ಲಿ ವಾಹನದ ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ. ನಿಗದಿಗೊಳಿಸಲಾಗಿದೆ. ಆದರೆ, ವಾಹನ ಸವಾರರು ನಿಗದಿತ ವೇಗ ಮೀರಿ ವಾಹನ ಚಲಾಯಿಸುತ್ತಿರುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚಳವಾಗಿವೆ. ಕಳೆದ ತಿಂಗಳು ಈ ರಸ್ತೆಯಲ್ಲಿ 22 ರಸ್ತೆ ಅಪಘಾತ ಪ್ರಕರಣಗಳು ಜರುಗಿದ್ದು, 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾವಹಿಸಿ, ದಂಡ ವಿಧಿಸಲು ಏರ್‌ಪೋರ್ಟ್ ರಸ್ತೆಯಲ್ಲಿ ಎಎನ್‌ಪಿಆರ್ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಏನಿದು ಎಎನ್‌ಪಿಆರ್ ಕ್ಯಾಮರಾ?: ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ವಾಹನಗಳು ರಸ್ತೆಯಲ್ಲಿ ಎಷ್ಟೇ ವೇಗದಲ್ಲಿ ಸಂಚರಿಸಿದರೂ ಆ ವಾಹನದ ನಂಬರ್ ಪ್ಲೇಟ್ ಗುರುತಿಸಿ ದಾಖಲು ಮಾಡಿಕೊಳ್ಳಲಿದೆ. ಸಂಚಾರ ಪೊಲೀಸರು ಅತಿವೇಗವಾಗಿ ಸಂಚರಿಸುವ ವಾಹನಗಳನ್ನು ಸುಲಭವಾಗಿ ಗುರುತಿಸಿ ಮಾಲಿಕರಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡಲು ಸಹಕಾರಿಯಾಗಲಿದೆ. ಪದೇ ಪದೇ ಅತಿವೇಗದ ಚಾಲನೆ ಮಾಡಿ ಸಿಕ್ಕಿಬಿದ್ದರೆ ದಂಡದ ಜತೆಗೆ ಚಾಲನಾ ಪರವಾನಗಿ ಅಮಾನತುಗೊಳಿಸಲು ಕಾನೂನಿಯಲ್ಲಿ ಅವಕಾಶವಿದೆ.
Bengaluru: ಕೋವಿಡ್‌ನಿಂದ ಆರ್ಥಿಕ ಸಂಕಷ್ಟ: ಹೋಟೆಲ್‌ಗಳಿಗೆ ಶೇ.50 ತೆರಿಗೆ ವಿನಾಯ್ತಿ
12 ಕ್ಯಾಮರಾ ಅಳವಡಿಕೆಗೆ ಚಿಂತನೆ: ನಗರದ ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ (ಸಿಬಿಡಿ) ಪ್ರದೇಶಗಳಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಇದರಲ್ಲಿ ಸಿಬಿಡಿ(ಹೆಚ್ಚು ವ್ಯವಹಾರ ನಡೆಯುವ, ಜನದಟ್ಟಣೆ ಇರುವ ಜಂಕ್ಷನ್) ಪ್ರದೇಶದ ಆಯ್ದ ಜಂಕ್ಷನ್‌ಗಳಲ್ಲಿ ಎಎನ್‌ಪಿಆರ್ ಕ್ಯಾಮರಾ ಅಳವಡಿಕೆಯೂ ಒಂದಾಗಿದೆ. ಇದಕ್ಕಾಗಿ 23 ಎಎನ್‌ಪಿಆರ್ ಕ್ಯಾಮರಾ ಬಂದಿದ್ದು, ಈ ಪೈಕಿ 12 ಕ್ಯಾಮರಾಗಳನ್ನು ಏರ್‌ಪೋರ್ಟ್ ರಸ್ತೆಯಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ.
