ಚಿತ್ರದುರ್ಗ ನಗರದಲ್ಲಿ ಆಟೋ ಚಾಲಕರು ಬೇಕಾಬಿಟ್ಟಿಯಾಗಿ ದರ ಕೇಳುವುದು, ಪ್ರಯಾಣಿಕರ ಅವಮಾನಪಡಿಸುವುದು, ಮೀಟರ್‌ ಇಲ್ಲದೇ ಆಟೋ ಓಡಿಸುವುದು ಒಂದೆಡೆಯಾದರೆ, ನಿಯಮ ಮೀರಿ ಹೆಚ್ಚಿನ ಪ್ರಯಾಣಿಕರ ಕರೆದೊಯ್ದು ಜೀವದೊಂದಿಗೆ ಚೆಲ್ಲಾಟವಾಡು ನಡೆಗಳು ಮತ್ತೊಂದೆಡೆ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕ್ಯಾಂಪೇನ್‌ ಸ್ಟೋರಿ- ಭಾಗ-3

ಚಿತ್ರದುರ್ಗ (ಜ.1) : ಚಿತ್ರದುರ್ಗ ನಗರದಲ್ಲಿ ಆಟೋ ಚಾಲಕರು ಬೇಕಾಬಿಟ್ಟಿಯಾಗಿ ದರ ಕೇಳುವುದು, ಪ್ರಯಾಣಿಕರ ಅವಮಾನಪಡಿಸುವುದು, ಮೀಟರ್‌ ಇಲ್ಲದೇ ಆಟೋ ಓಡಿಸುವುದು ಒಂದೆಡೆಯಾದರೆ, ಮಿತಿ ಮೀರಿ ಪ್ರಯಾಣಿಕರ ಕರೆದೊಯ್ದು ಜೀವದೊಂದಿಗೆ ಚೆಲ್ಲಾಟವಾಡು ನಡೆಗಳು ಮತ್ತೊಂದೆಡೆ ವಿಪರೀತವಾಗಿವೆ. ಮಿತಿ ಮೀರಿ ಪ್ರಯಾಣಿಕರ ಕರೆದೊಯ್ಯುವಾಗ ಹಲವಾರು ಸಾರಿ ಅಪಘಾತಗಳು ಸಂಭವಿಸಿ ಜನರ ಪ್ರಾಣಗಳು ಹೋಗಿವೆ. ಅಪಘಾತಗಳು ನಡೆದಾಗ ಒಂದೆರೆಡು ದಿನ ಕಾನೂನು ಬಿಗಿ ಮಾಡಿ ಕ್ರಮ ಕೈಗೊಳ್ಳುವ ಪೊಲೀಸರು ನಂತರ ನೇಪಥ್ಯಕ್ಕೆ ಸರಿಯುತ್ತಾರೆ.

ನಗರ ಪ್ರದೇಶದಲ್ಲಿ ಸಂಚರಿಸುವ ಆಟೋಗಳು ಸೀಟಿನ ವಿಚಾರದಲ್ಲಿ ಅಷ್ಟಾಗಿ ನಿಯಮಾವಳಿಗಳ ಉಲ್ಲಂಘಿಸುವುದಿಲ್ಲ. ಆದರೆ ನಗರದಿಂದ ಹಳ್ಳಿಗಳಿಗೆ ಅಂದರೆ ಹತ್ತು ಕಿಮೀ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳು(ಕೆಲವು ಕಡೆ ಟಂಟಂ ಅಂತಾರೆ) ಕಾನೂನುಗಳು, ನಿಯಮಾವಳಿಗಳ ಪಕ್ಕಕ್ಕಿಟ್ಟು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಯಾವುದೇ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ಒಯ್ದು ನೋಂದಣಿ ಮಾಡಿಸುವಾಗ ಮತ್ತು ಫಿಟ್‌ನೆಸ್‌ ಘೋಷಿಸಿಕೊಂಡಾಗ ಹೇಗಿರುತ್ತೋ ಹಾಗೆಯೇ ಕಾಯ್ದುಕೊಂಡು ಬರಬೇಕು. ಹಳ್ಳಿಗಳಿಗೆ ಸಂಚರಿಸುವ ಈ ಆಟೋಗಳು ಮೀಟರನ್ನು ಕಿತ್ತಿ ಬಿಸಾಕುವುದಲ್ಲದೇ ಸೀಟುಗಳ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳುತ್ತಾರೆ. ಆಟೋ ಅಂದರೆ ತ್ರಿಫ್ಲಸ್‌ ಒನ್‌ ಆಸನಗಳ ಸಾಮರ್ಥ್ಯವಿದೆ. ಹಳ್ಳಿಗಳಿಗೆ ಹೋಗುವ ಈ ಆಟೋಗಳು ಡ್ರೈವರ್‌ ಪಕ್ಕ ಇಬ್ಬರು, ಮಧ್ಯಭಾಗದಲ್ಲಿ ಆರು ಮಂದಿ ಹಾಗೂ ಹಿಂಭಾಗ ನಾಲ್ಕರಿಂದ ಆರು ಮಂದಿ ಸೇರಿದಂತೆ ಒಟ್ಟು ಹದಿನೈದು ಜನ ಪ್ರಯಾಣಿಸುತ್ತಾರೆ. ಬೆಳಗಿನ ವೇಳೆ ಶಾಲೆಗಳಿಗೆ ಹೋಗುವ ಶಿಕ್ಷಕಿಯರು ಆಟೋ ಚಾಲಕರ ಪಕ್ಕ ಕುಳಿತು ಪ್ರಯಾಣಿಸುವ ದೃಶ್ಯಗಳು ಭಯಾನಕವಾಗಿ ಕಾಣಿಸುತ್ತದೆ.

ಫಿಟ್‌ನೆಸ್‌ ತೋರಿಸಿದ ನಂತರ ಆಟೋದ ಮೀಟರ್‌ ಮಾಯ

ವಿಮೆ 4 ಜನಕ್ಕೆ ಮಾತ್ರ:

ಮೂರು ಸೀಟುಗಳ ಸಾಮರ್ಥ್ಯದ ಈ ಆಟೋಗಳಲ್ಲಿ ಹದಿನೈದು ಮಂದಿ ಪ್ರಯಾಣಿಸುವಾಗ ಹಾಗೊಂದು ವೇಳೆ ಅಪಘಾತವಾದರೆ ಯಾರು ಹೊಣೆ ? ನಾಲ್ಕು ಮಂದಿಗೆ ಮಾತ್ರ ವಿಮೆ ಮಾಡಿಸಿದ ಆಟೋಗಳಲ್ಲಿ ಹದಿನೈದು ಜನರಿಗೆ ಯಾವ ಕಂಪನಿಗಳು ಪರಿಹಾರ ನೀಡುತ್ತವೆ. ಜೀವದೊಂದಿಗೆ ಚೆಲ್ಲಾಟವಾಡುವ ಇಂತಹ ಆಟೋ ಚಾಲಕರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಿದರೆ ಅವಘಡಗಳಿಗೆ ಪರೋಕ್ಷವಾಗಿ ನಾವೇ ಕಾರಣವಾಗುತ್ತೇವೆ ಎಂಬ ಅರಿವು ಪೊಲೀಸರಲ್ಲಿ ಮೂಡದೇ ಇರುವುದು ದುರಂತದ ಸಂಗತಿ.

ಪ್ರಯಾಣಿಕರ ವಾಹನ ಎಂದರೆ ಅವರ ಅನುಕೂಲಕ್ಕಾಗಿಯೇ ರೂಪಿಸಲಾದ ವ್ಯವಸ್ಥೆ. ದರ ಆಟೋ ದರ ಹೆಚ್ಚಿಗೆ ಕೇಳಿದಾಗ ಪ್ರಯಾಣಿಕರು ದೂರು ನೀಡಿದರೆ ದಂಡ ಹಾಕುವ ಅವಕಾಶಗಳ ಮೋಟಾರು ವೆಹಿಕಲ್‌ ಆ್ಯಕ್ಟನಲ್ಲಿದೆ. 11(8)177 ಅಡಿ ನೂರು ರುಪಾಯಿ ದಂಡ ವಿಧಿಸಬಹುದಾಗಿದೆ. ಯೂನಿಫಾರಂ ಇಲ್ಲದೇ ಆಟೋ ಓಡಿಸುವುದು, ಮೀಟರ್‌ ಅಳವಡಿಸದೇ ಇರುವುದು,ವಾಹನಗಳ ಸೀಟು ಮಾರ್ಪಾಡಿಸುವುದು ಎಲ್ಲ ನಡೆಗಳು ಪೂರ್ಣ ಪ್ರಮಾಣದ ಕಾನೂನುಗಳ ಉಲ್ಲಂಘನೆ ಪ್ಯಾಪ್ತಿಗೆ ಒಳಪಡುತ್ತವೆ.

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಆಟೋ-ಸುಲಿಗೆ; ಕಿಮೀಗೂ ನೂರು ರೂ. ಕೇಳ್ತಾರೆ!

ಹಿಂದೆ ಜಗಳವಾಡಿ ಮನೆ ಬಿಟ್ಟು ಬರುವವರು ಟೌನ್‌ನಲ್ಲಿ ಆಟೋ ಓಡಿಸಿ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ಶಪಥದ ಮಾತುಗಳನ್ನಾಡುತ್ತಿದ್ದರು. ಅದು ನಿಜವೂ ಹೌದು. ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದ ಆಟೋ ನಡೆಸುವ ವ್ಯವಸ್ಥೆ ಕೆಲ ಚಾಲಕರ ತಪ್ಪು ನಡೆಗಳಿಂದಾಗಿ ಇಡೀ ಸಮೂಹ ತೊಂದರೆ ಅನುಭವಿಸುವಂತಾಗಿದೆ. ಕಾನೂನುಗಳಿಗಿಂತ ಯಾರೂ ದೊಡ್ಡವರಲ್ಲ. ಪೊಲೀಸರು ಆಟೋ ಚಾಲಕರಿಗೆ ತಿಳುವಳಿಕೆ ನೀಡುತ್ತಲೇæ ಪ್ರಯಾಣದ ವ್ಯವಸ್ಥೆ ಸರಿಪಡಿಸಬೇಕು.

ಹಂಪಯ್ಯನಮಾಳಿಗೆ ಧನಂಜಯ, ತಾಲೂಕು ಅಧ್ಯಕ್ಷ, ರೈತ ಸಂಘ