ಹೆಲ್ಮೆಟ್ ಧರಿಸದೇ ಚಾಲನೆ ಮಾಡುವವರಿಗೆ ದಂಡ ಹಾಕುವುದರಲ್ಲಿ ತಪ್ಪೇನು ಇಲ್ಲ ಬಿಡಿ. ಆದರೆ ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ್ದೀರಾ ಅಂತ ಆಟೋ ಮತ್ತು ಕಾರು ಚಾಲಕರಿಗೆ ದಂಡ ವಿಧಿಸಿದರೆ ಹೇಗೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.18): ಹೆಲ್ಮೆಟ್ ಧರಿಸದೇ ಚಾಲನೆ ಮಾಡುವವರಿಗೆ ದಂಡ ಹಾಕುವುದರಲ್ಲಿ ತಪ್ಪೇನು ಇಲ್ಲ ಬಿಡಿ. ಆದರೆ ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ್ದೀರಾ ಅಂತ ಆಟೋ ಮತ್ತು ಕಾರು ಚಾಲಕರಿಗೆ ದಂಡ ವಿಧಿಸಿದರೆ ಹೇಗೆ. ಅರೆರೆ ಇದೆಂತ ವಿಚಿತ್ರ, ಹೊಸ ಕಾನೂನು ಏನಾದ್ರೂ ಬಂತ ಅಂತ ಅಚ್ಚರಿ ಎನಿಸಬಹುದು ಅಲ್ವಾ.? ಆದರೆ ಇದೆಲ್ಲ ಅಚ್ಚರಿ ಪಡದೆ, ನಗೆಪಾಟಲಿನ ವಿಷಯವಾಗಿದ್ದರೂ ಕೊಡಗು ಜಿಲ್ಲೆಯ ಹಲವು ಆಟೋ ಚಾಲಕರಿಗೆ ಹಾಗೂ ಕಾರು ಚಾಲಕರಿಗೆ ಹೆಲ್ಮೆಟ್ ಧರಿಸದೆಯೇ ಚಾಲನೆ ಮಾಡಿದ್ದೀರಾ ಅಂತಾ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಟ್ರಾಫಿಕ್ ಪೊಲೀಸರಿಂದ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಹಾಗೂ ಸುಂಟಿಕೊಪ್ಪ ಸಮೀಪದ ಏಳನೆ ಹೊಸಕೋಟೆ ಸೇರಿದಂತೆ ವಿವಿಧ ಭಾಗಗಳ ಹಲವು ಆಟೋ ಚಾಲಕರಿಗೆ ಮತ್ತು ಕಾರು ಚಾಲಕರಿಗೆ ದಂಡದ ರಶೀದಿ ಅವರವರ ಮೊಬೈಲ್ಗಳಿಗೆ ರವಾನೆಯಾಗಿದೆ.
ಸಿದ್ದಾಪುರದ ಆಟೋ ಚಾಲಕ ಶಾನವಾಜ್ ಎಂಬುವರಿಗೆ ಇದೇ ಜನವರಿ 12 ರಂದು ಪಿರಿಯಾಪಟ್ಟಣದಲ್ಲಿ ಎರಡೆರಡು ಬಾರಿ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ್ದೀರಾ ಎಂದು ಅವರ ಆಟೋ ನಂಬರ್ ನಮೂದಿಸಿ ದಂಡದ ಮೆಸೇಜ್ ಕಳುಹಿಸಿದ್ದಾರೆ. ಇನ್ನು ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿ ಹಂಸ ಎಂಬುವರಿಗೆ ಇದೇ ಪಿರಿಯಾಪಟ್ಟಣದ ವ್ಯಾಪ್ತಿಯಲ್ಲಿ ಹೆಲ್ಮೆಟ್ ಇಲ್ಲದೆಯೇ ನಾಲ್ಕೈದು ದಿನಾಂಕಗಳಂದು ಚಾಲನೆ ಮಾಡಿದ್ದೀರಾ ಎಂದು ಇವರ ಆಟೋ ನಂಬರ್ ನಮೂದಿಸಿ ಇವರಿಗೂ ಬರೋಬ್ಬರಿ ಎರಡುವರೆ ಸಾವಿರ ದಂಡ ವಿಧಿಸಿ ಅವರ ಫೋನ್ ನಂಬರಿಗೆ ದಂಡದ ಮೆಸೇಜ್ ಕಳುಹಿಸಲಾಗಿದೆ.
ಉಳ್ಳವರಿಗೆ ಭೂ ಗುತ್ತಿಗೆ ನೀಡುವುದನ್ನು ವಿರೋಧಿಸಿ ಬೀದಿಗಿಳಿದ ಸಾವಿರಾರು ಜನರು: ಪ್ರತಿಭಟನೆಗೆ ನಲುಗಿದ ಮಡಿಕೇರಿ
ಇನ್ನೂ ಅಚ್ಚರಿ ಎಂದರೆ ನೆಲ್ಯಹುದಿಕೇರಿಯ ವಿಠಲ ಎಂಬುವರಿಗೆ ನೀವು ಕೂಡ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ್ದೀರಾ ಎಂದು ಅವರ ಓಮ್ನಿ ಕಾರು ಸಂಖ್ಯೆಯನ್ನು ನಮೂದಿಸಿ ಇದೇ ಪಿರಿಯಾಪಟ್ಟಣ ಟ್ರಾಫಿಕ್ ಪೊಲೀಸರಿಂದ 500 ರೂಪಾಯಿ ದಂಡ ಪಾವತಿಸುವಂತೆ ಮೆಸೇಜ್ ಬಂದಿದೆ. ಹೆಲ್ಮೆಟ್ ಧರಿಸದೇ ಚಾಲನೆ ಮಾಡದಿರುವುದಕ್ಕೆ ದಂಡ ಪಾವತಿಸುವಂತೆ ಬಂದಿರುವ ಮೆಸೇಜ್ ಅನ್ನು ನೋಡಿದ ಕಾರು, ಆಟೋ ಚಾಲಕರುಗಳಿಗೆ ಒಂದೆಡೆ ಇದೆಂಥ ನಗೆಪಾಟಿಲಿನ ವಿಚಾರ ಎನಿಸಿದರೆ ಮತ್ತೊಂದೆಡೆ ತಮ್ಮ ವಾಹನಗಳ ಮೇಲೆ ಇರುವ ಕೇಸುಗಳಿಗೆ ಕಂಗಾಲಾಗಿದ್ದಾರೆ.
ಹೌದು ನಾವು ನಮ್ಮ ಆಟೋ ಅಥವಾ ಕಾರುಗಳಲ್ಲಿ ಓಡಾಡುವಾಗ ಹೆಲ್ಮೆಟ್ ಹಾಕಿಕೊಂಡು ಚಾಲನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಇದು ಸಾಧ್ಯ ಇಲ್ಲದಿದ್ದರೂ ಕೂಡ ಇದೀಗ ಬಂದಿರುವ ದಂಡವನ್ನು ಪಾವತಿಸದೇ ಇದ್ದರೆ ನಮಗೆ ತೊಂದರೆಯಾಗಲಿದೆ ಎನ್ನುವ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ವಾಹನಗಳನ್ನು ಅಕಸ್ಮಾತ್ ಪೊಲೀಸರು ಎಲ್ಲಾದರೂ ಚೆಕ್ ಮಾಡಿದರೆ ನಮ್ಮ ಮೇಲಿರುವ ದಂಡದ ಮೊತ್ತವನ್ನು ನಾವು ಕಟ್ಟಲೇ ಬೇಕು. ಅಥವಾ ನಮ್ಮ ವಾಹನಗಳಿಗೆ ಎಫ್ಸಿ ಮಾಡಿಸಲು ಏನಾದರೂ ಹೋದರೆ ಅಲ್ಲಿಯೂ ದಂಡ ಪಾವತಿಸಲೇಬೇಕು.
Kodagu: ಕಾಡು ಪಾಲಾದ ರಾಜ್ಯದ ಮೊಟ್ಟ ಮೊದಲ ಮೇಕೆ ಹಾಲು ಉತ್ಪಾದನಾ ಘಟಕ
ಇಲ್ಲದಿದ್ದರೆ ಎಫ್ಸಿ ಮಾಡಿಸಲು ಸಾಧ್ಯವೇ ಇಲ್ಲದಂತೆ ಆಗಿದೆ ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಡೆ ನಮ್ಮ ವಾಹನಗಳ ಸಂಖ್ಯೆಯನ್ನು ನಕಲಿ ಮಾಡಿ, ಯಾರಾದರೂ ಬೈಕುಗಳಿಗೆ ಹಾಕಿಕೊಂಡು ಅವುಗಳನ್ನು ಚಾಲನೆ ಮಾಡುತ್ತಿದ್ದಾರಾ ಎನ್ನುವ ಆತಂಕವೂ ಶುರುವಾಗಿದೆ. ಇದೆಲ್ಲವೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಎಐ ಕ್ಯಾಮರಾಗಳ ಪ್ರಭಾವವಾಗಿರಬಹುದು ಎಂದು ಊಹಿಸಲಾಗುತ್ತಿದ್ದು ಆದಷ್ಟೂ ಬೇಗವೇ ಸಂಬಂಧಿಸಿದ ಪೊಲೀಸರು ಇದನ್ನು ಬಗೆಹರಿಸಬೇಕು ಎನ್ನುವುದು ಇವರ ಆಗ್ರಹ.
