Kodagu: ಕಾಡು ಪಾಲಾದ ರಾಜ್ಯದ ಮೊಟ್ಟ ಮೊದಲ ಮೇಕೆ ಹಾಲು ಉತ್ಪಾದನಾ ಘಟಕ
ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡೈರಿ ಆರಂಭವಾಗಿದ್ದೇ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ. ಹಾಗೆಯೇ ಮೊಟ್ಟ ಮೊದಲ ಬಾರಿಗೆ ಮೇಕೆ ಹಾಲು ಉತ್ಪಾದನಾ ಘಟಕ ಆರಂಭಿಸಲು ಡೈರಿಯನ್ನು ತೆರೆಯಲಾಯಿತು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.15): ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡೈರಿ ಆರಂಭವಾಗಿದ್ದೇ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ. ಹಾಗೆಯೇ ಮೊಟ್ಟ ಮೊದಲ ಬಾರಿಗೆ ಮೇಕೆ ಹಾಲು ಉತ್ಪಾದನಾ ಘಟಕ ಆರಂಭಿಸಲು ಡೈರಿಯನ್ನು ತೆರೆಯಲಾಯಿತು. ಆದರೀಗ ಆ ಡೈರಿ ಆರಂಭವಾಗುವುದಕ್ಕೂ ಮೊದಲೇ ಕಾಡುಪಾಲಾಗಿದೆ. ಹೌದು ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ 2018 ರಲ್ಲಿಯೇ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನಾ ಘಟಕವನ್ನು 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಆದಾದ ಬಳಿಕ ಹಂತ, ಹಂತವಾಗಿ ಕಾಮಗಾರಿ ಮುಗಿಸಿ 2023 ರಲ್ಲಿಯೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಮೇಕೆಗಳನ್ನು ಸಾಕಾಣೆ ಮಾಡಲು ಬೃಹತ್ ಆದ ಶೆಡ್ಗಳನ್ನು ಮಾಡಲಾಗಿದೆ. ಅವುಗಳನ್ನು ಮೇಯಿಸುವುದಕ್ಕಾಗಿ ಬರೋಬ್ಬರಿ 30 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಮೇವುಗಳ ಉತ್ಪಾದನೆಗಾಗಿ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮೇಕೆಗಳನ್ನೇ ಇಲ್ಲಿ ಕೊಟ್ಟಿಲ್ಲ. ಮೇಕೆಗಳನ್ನು ಕೊಡುವ ಮಾತಿರಲಿ, ಡೈರಿಯನ್ನು ಆರಂಭಿಸಿದ ಮೇಲೆ ಅಗತ್ಯವಾಗಿರುವ ಸಿಬ್ಬಂದಿ ನೇಮಕ ಮಾಡಬೇಕಲ್ಲವೇ.? ಆದರೆ ಹೊರಗುತ್ತಿಗೆ ಆಧಾರದಲ್ಲಿ ಒಬ್ಬರೇ ಒಬ್ಬರು ಡಿ ಗ್ರೂಪ್ ಸಿಬ್ಬಂದಿಯನ್ನು ನೇಮಿಸಿಕೊಂಡಿರುವುದು ಬಿಟ್ಟರೆ ಇನ್ನುಳಿದ ಯಾವ ಸಿಬ್ಬಂದಿಯ ನೇಮಕವಾಗಿಲ್ಲ. 2022-23 ರಲ್ಲಿ ಹಾಲು ಉತ್ಪಾದನಾ ಘಟಕದಲ್ಲಿ ಹಾಲು ಪಾಶ್ಚರೀಕರಣ ಯಂತ್ರಗಳನ್ನು ಅಳವಡಿಲಾಗಿದೆ.
ಆದರೆ ಅವುಗಳನ್ನು ಯಾವುಗಳನ್ನು ಬಳಕೆಯೇ ಮಾಡದೆ ಹಾಗೆ ಬಿಟ್ಟಿರುವುದರಿಂದ ಎಲ್ಲವೂ ಸಂಪೂರ್ಣ ತುಕ್ಕು ಹಿಡಿದು ಹಾಳಾಗಿ ಹೋಗುತ್ತಿವೆ. ಹಾಲು ಶೇಖರಣೆಯಾಗುವ ಟ್ಯಾಂಕ್ಗಳಲ್ಲಿ ಹಳೇ ಪ್ಲಾಸ್ಟಿಕ್ ಬಾಟೆಲ್, ಕಸ, ಕಡ್ಡಿಗಳು ತುಂಬಿ ಹೋಗಿವೆ. ಅಷ್ಟಕ್ಕೂ ಈ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನಾ ಘಟಕ ಆರಂಭಿಸಿದ್ದೇ ಮೇಕೆ ಸಾಕಾಣಿಕೆದಾರರಿಗೆ ಅನುಕೂಲ ಮಾಡಬೇಕು ಎಂಬ ಉದ್ದೇಶದಿಂದ. ಮೇಕೆ ಹಾಲಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಮೇಕೆಗಳನ್ನು ಸಾಕುವವರಿಗೆ ಆದಾಯ ತಂದು ಕೊಡುವ ಜೊತೆಗೆ ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರವೇ ಆರಂಭಿಸಿದ್ದ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನಾ ಘಟಕ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಬಂದರೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಎರಡು ಕೋಟಿ ವೆಚ್ಚದಲ್ಲಿ ಆರಂಭಿಸಿದ್ದ ಡೇರಿ ಕಾಡು ಪಾಲಾಗುತ್ತಿರುವುದು ಬಹಳ ವಿಪರ್ಯಾಸದ ಸಂಗತಿ.
ಒತ್ತುವರಿದಾರರಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ
ಇಷ್ಟು ದೊಡ್ಡ ವೆಚ್ಚದ ಡೇರಿ ಉದ್ಘಾಟನೆ ಆಗದಿರುವ ಬಗ್ಗೆ ಬೆಂಗಳೂರಿನಲ್ಲಿರುವ ಕುರಿ ಸಾಕಾಣಿಕೆ ಮತ್ತು ಉಣ್ಣೆ ನಿಗಮದ ಎಂ.ಡಿಯನ್ನು ಕೇಳಿದರೆ ಈ ಕುರಿತು ನಮಗೆ ಸರಿಯಾದ ಮಾಹಿತಿ ಇಲ್ಲ. ಅಲ್ಲಿಗೆ ಬಂದು ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ. ಇತ್ತ ಮೇಕೆ ಸಾಕಾಣಿಕೆದಾರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪ್ರಭಾಕರ್ ಅವರು ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜನರಿಗೆ ಉಪಯೋಗಕ್ಕೆ ಬರಬೇಕಾಗಿದ್ದ ಡೇರಿ ಈ ರೀತಿ ಕಾಡು ಪಾಲಾಗುವುದಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರ ಗಮನಹರಿಸಿ ಕೂಡಲೇ ಆರಂಭ ಮಾಡಿದರೆ ಒಳ್ಳೆಯದು ಎಂದಿದ್ದಾರೆ.