ಡಾ.ಕೆ.ಎನ್‌. ಗಣೇಶಯ್ಯ ಅವರ ‘ಕಾನನ ಜನಾರ್ದನ’ ಕೃತಿ ಲೋಕಾರ್ಪಣೆ ಮಾಡಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿದರು 

ಬೆಂಗಳೂರು (ಮಾ. 14): ಲೇಖಕರು ಎಡ ಮತ್ತು ಬಲ, ಮಾಂಸಾಹಾರ ಹಾಗೂ ಶಾಖಾಹಾರದವರ ಪರ ಮತ್ತು ವಿರೋಧವಾಗಿರದೆ ವಾಸ್ತವಾಂಶಗಳನ್ನು ಹದ ಮಾಡಿ, ಆಕಾರ ಕೊಟ್ಟು ರಸಪೂರ್ಣವಾಗಿ ಕೃತಿ ರಚನೆ ಮಾಡಿಕೊಡಬೇಕು ಎಂದು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಅಭಿಪ್ರಾಯ ಪಟ್ಟಿದ್ದಾರೆ. ಅಂಕಿತ ಪುಸ್ತಕ ನಗರದ ಶನಿವಾರ ಡಾ.ಸಿ.ಅಶ್ವತ್ಥ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಕೆ.ಎನ್‌. ಗಣೇಶಯ್ಯ ಅವರ ‘ಕಾನನ ಜನಾರ್ದನ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಎಡ-ಬಲ ಎಂಬ ವಿಚಾರಗಳು ವಿಮರ್ಶೆಗೊಳಗಾಗುತ್ತಿವೆ ಎಂದರು.

ಸತ್ಯ, ಅಸತ್ಯ ಯಾವುದು ಎಂದು ನಿರ್ಣಯ ಮಾಡಲು ಸಾಧ್ಯವಾಗದ ಕಾಲದಲ್ಲಿ ನಾವಿಲ್ಲ. ಎಲ್ಲ ವಿಚಾರದಲ್ಲಿ ಅಂತಿಮ ನಿರ್ಣಯ ಮಂಡಿಸುವುದಕ್ಕೆ ಸಾಧ್ಯವೂ ಇಲ್ಲ. ತನಗೆ ಗೊತ್ತಿರುವ ವಿಚಾರವನ್ನು ಅರಿತು ಮಂಡಿಸುವುದು ಸೃಜನಶೀಲ ಬರಹಗಾರನ ಕೆಲಸ. ಅದನ್ನು ಓದುಗರು ಹೇಗೆ ಬೇಕಾದರೂ ವಿಮರ್ಶೆಗೊಳಪಡಿಸಬಹುದು ಎಂದು ತಿಳಿಸಿದರು.

ಅಮೆರಿಕಾದಲ್ಲಿ ಗೋಮಾಂಸ ಬಳಕೆ ಕಡಿಮೆಯಾಗುತ್ತಿದೆ. ಅದರ ಬದಲಾಗಿ ಭಾರತದಲ್ಲಿ ಹೈನೋದ್ಯಮ ಸ್ಥಾಪನೆ ಮಾಡಿ ಮಾಂಸಾಹಾರದ ಉದ್ದಿಮೆಯನ್ನು ನಡೆಸುವ ಹುನ್ನಾರದ ಅಂಶದಿಂದ ಕೃತಿ ಪ್ರಾರಂಭವಾಗಿದೆ. ಈ ಅಂಶವನ್ನು ಕೃತಿಯಲ್ಲಿ ವಿವರಿಸಲಾಗಿದೆ ಎಂದರು.

ಇದನ್ನೂ ಓದಿ:ಪರ ಧರ್ಮ ಸಹಿಷ್ಣುತೆ ಅವಶ್ಯ: ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ!

ಹತ್ತೊಂಬತನೇ ಶತಮಾನದಲ್ಲಿ ಗ್ರಾಮೀಣ ಭಾಗಗಳಲ್ಲಿ ಎಲ್ಲ ಜಾತಿಯ ಜನಾಂಗದವರು ಓಣಿಗಳಲ್ಲಿ ನೆಲೆಸುತ್ತಿದ್ದರು. ಇವರ ನಡುವೆ ಭಾವನಾತ್ಮಕ ಸಂಬಂಧಗಳಿರುತ್ತಿದ್ದವು. ಸಾಮಾಜಿಕ ವ್ಯವಸ್ಥೆ ಆ ರೀತಿಯಲ್ಲಿ ಇರುತ್ತಿತ್ತು. ಗ್ರಾಮ ಸಮಾಜ ಒಟ್ಟಾಗಿ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಈ ಎಲ್ಲ ಅಂಶವನ್ನು ಕೃತಿಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ವೆಂಕಟೇಶ್‌ ವಿವರಿಸಿದರು.

ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ‘ಕಾನನ ಜನಾರ್ದನ’ ಐತಿಹಾಸಿಕ ಸಂಗತಿಗಳ ಕುರಿತು ಕುತೂಹಲ ಕೆರಳಿಸುತ್ತದೆ. ಕೌತುಕ-ವಿಸ್ಮಯಗಳನ್ನು ಸಂಭ್ರಮಿಸುವಂತೆ ಮಾಡುತ್ತದೆ. ವಿಚಾರ ಪ್ರಚೋದಕವೂ ಆಗಿದೆ. ಇಂತಹ ಕಾದಂಬರಿಗಳನ್ನು ವಿಮರ್ಶಿಸಲು ಸಾಂಪ್ರದಾಯಿಕ ಮಾನದಂಡಗಳು ಸಾಕಾಗಲಾರವು ಎಂದರು. ಕೃತಿಯ ಲೇಖಕ ಡಾ.ಗಣೇಶಯ್ಯ, ವಿಜ್ಞಾನ ಬರಹಗಾರ ನಾಗೇಶ್‌ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಕೃತಿ‘ಭೂಮ್ತಾಯಿ’ ಬಿಡುಗಡೆ: ಎಡ-ಬಲ ಪಂಥಗಳ ಹಿಟ್ಲರ್‌ ಪ್ರಜ್ಞೆಯಿಂದ ಜಗತ್ತು ಯುದ್ಧಕೋರತನದಲ್ಲಿ ವಿನಾಶದ ಕಡೆಗೆ ಸಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಸಾಹಿತ್ಯ ಸಂಗಮ ಟ್ರಸ್ಟ್‌ ಮತ್ತು ಜಾಣಗೆರೆ ಪತ್ರಿಕೆ ಪ್ರಕಾಶ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ ‘ಭೂಮ್ತಾಯಿ’ ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. 

ಇದನ್ನೂ ಓದಿ: Jaipur Literature Festival : 'ನಾನು ಈ ಕಾಲದ ಕವಿ, ಪಂಥ ಗೊತ್ತಿಲ್ಲ' ರಂಜಿತ್ ಹೊಸಕೋಟೆ ಸಂದರ್ಶನ

‘ಎಡ-ಬಲ ಪಂಥಗಳಲ್ಲಿ ಯಾವುದು ಸರಿ ಎಂದು ವಿಂಗಡಿಸುವಂತಿಲ್ಲ.ಈಗಾಗಲೇ ಬಲಪಂಥ ಹಿಟ್ಲರ್‌ ಚಿಂತನೆಯನ್ನು ಒಳಗೊಂಡಿದೆ. ಸದ್ಯ ಎಡಪಂಥ ಕೂಡಾ ಹಿಟ್ಲರ್‌ಮಯವಾಗುತ್ತಿದೆ. ಎರಡೂ ಹಿಟ್ಲರ್‌ ಪ್ರಜ್ಞೆಯಲ್ಲಿ ನರಳಿ ಇಡೀ ಜಗತ್ತನ್ನು ನರಳಿಸುತ್ತಿವೆ. ಈ ಮೂಲಕ ಜಗತ್ತು ಒಂದು ರೀತಿಯ ಯುದ್ಧಕೋರತನದಲ್ಲಿ ವಿನಾಶದ ಕಡೆಗೆ ಹೋಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ವಿಮರ್ಶಕ ಪ್ರೊ.ಎಚ್‌.ದಂಡಪ್ಪ ಮಾತನಾಡಿ, ಕೃತಿಯ ಮೂಲಕ ಲೇಖಕರು ಕೋಮುವಾದದ ವಿರುದ್ಧ ಅಕ್ಷರಗಳ ಮೂಲಕ ಹೋರಾಟ ಮಾಡಿದ್ದಾರೆ. ನಗರವಾಸಿಯೊಬ್ಬ ಕೊರೋನಾ ನಂತರ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡ ರೀತಿ ಕತೆಯಾಗಿದ್ದು, ವೈಚಾರಿಕತೆ, ಕೋಮು ಸೌಹಾರ್ದತೆ, ಸಾಮಾಜಿಕ ಪರಿವರ್ತನೆಯ ಆಶಯಗಳು ಕಾದಂಬರಿಯಲ್ಲಿವೆ ಎಂದರು. ಕಾದಂಬರಿ ಕರ್ತೃ ಜಾಣಗೆರೆ ವೆಂಕಟರಾಮಯ್ಯ, ಲೇಖಕ ಕೆ.ಈ.ರಾಧಾಕೃಷ್ಣ, ಪತ್ರಕರ್ತರಾದ ಬಿ.ಎಂ.ಹನೀಫ್‌, ಪ್ರೇಂಕುಮಾರ್‌ ಹರಿಯಬ್ಬೆ, ನಿರ್ದೇಶಕ ಕೃಷ್ಣ ಮಾಸಡಿ ಉಪಸ್ಥಿತರಿದ್ದರು.