ಕೊಪ್ಪಳ ಜಿಲ್ಲೆಯ ತಾಳಕೇರಿಯಲ್ಲಿ, ಸಾಮೂಹಿಕ ವಿವಾಹದಲ್ಲಿ ನಕಲಿ ಶಾಲಾ ದೃಢೀಕರಣ ಪತ್ರ ಬಳಸಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನಿಸಲಾಗಿತ್ತು. ಸಹಾಯವಾಣಿಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ದಾಖಲೆ ಪರಿಶೀಲಿಸಿ ಬಾಲ್ಯವಿವಾಹ ತಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ.

ಕೊಪ್ಪಳ (ಏ.23) ಶಾಲೆಯ ನಕಲಿ ದೃಢೀಕರಣ ಪತ್ರ ನೀಡಿ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತೆಗೆ ಮದುವೆ ನಡೆದಿದ್ದ ತಯಾರಿಯನ್ನು ಅಧಿಕಾರಿಗಳು ತಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಳಕೇರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ ಏರ್ಪಾಡಾಗಿತ್ತು. ಇಲ್ಲಿ ಅಪ್ರಾಪ್ತೆಗೆ ಮದುವೆ ಮಾಡಲು ಮುಂದಾದ ಪೋಷಕರು, ವಿವಾಹದ ವಯಸ್ಸು ದೃಢೀಕರಣಕ್ಕಾಗಿ ಸೂಳೆಕಲ್ ಶಾಲೆಯ ದಾಖಲಾತಿ ದೃಢೀಕರಣ ನೀಡಿದ್ದರು. ಇದನ್ನೇ ನಂಬಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡುವುದಕ್ಕೆ ಸಮ್ಮತಿ ಸಿಕ್ಕಿತ್ತು. ಆದರೆ, ಈ ಬಾಲ್ಯವಿವಾಹದ ಬಗ್ಗೆ ಸ್ಥಳೀಯರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ತಾಳಕೇರಿಯಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ, ಬಾಲಕಿಯ ದಾಖಲೆ ಪರಿಶೀಲಿಸಿದಾಗ ಅದು ನಕಲಿ ಶಾಲಾ ದೃಢೀಕರಣ ಪತ್ರ ಎಂಬುದು ಗೊತ್ತಾಗಿದೆ. ಇದು ಅಧಿಕಾರಿಗಳಿಗೂ ಶಾಕ್‌ ನೀಡಿದೆ. ಕೊನೆಗೆ ಸೂಳೆಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ದಾಖಲೆ ಬಗ್ಗೆ ಕೇಳಿದಾಗ ನಾನು ಅಂತಹ ಯಾವುದೇ ದೃಢೀಕರಣ ನೀಡಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಶಾಲೆಯ ಹೆಸರಿನಲ್ಲಿ ನಕಲಿ ದೃಢೀಕರಣ ಪತ್ರ ಸೃಜಿಸಿಕೊಂಡಿದ್ದಾರೆ ಎನ್ನುವುದು ಪತ್ತೆಯಾಗುತ್ತಿದ್ದಂತೆ ಮುಖ್ಯೋಪಾಧ್ಯಯರು ಜಿಲ್ಲಾಡಳಿತಕ್ಕೆ ಈ ಕುರಿತು ಲಿಖಿತ ದೂರು ನೀಡಿದ್ದಾರೆ. ಬಳಿಕ, ಅಧಿಕಾರಿಗಳು ಬಾಲ್ಯವಿವಾಹ ತಡೆದಿದ್ದಾರೆ. ಷಡ್ಯಂತ್ರ ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಮಕ್ಕಳ ರಕ್ಷಣಾ ಘಟಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ.

ಕಾನೂನು ಕ್ರಮ

ನಕಲಿ ಶಾಲಾ ದಾಖಲಾತಿ ಸೃಷ್ಟಿಸಿಕೊಂಡು ಬಾಲ್ಯವಿವಾಹ ಮಾಡಲು ಮುಂದಾಗಿದ್ದ ಪ್ರಕರಣ ಪತ್ತೆ ಮಾಡಿ, ತಡೆ ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ಸಿಂಧು ಅಂಗಡಿ, ಮಕ್ಕಳ ರಕ್ಷಣಾಧಿಕಾರಿ.

ಹೆಚ್ಚುತ್ತಿರುವ ಬಾಲ್ಯವಿವಾಹ:

ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬಸವ ಜಯಂತಿಯಂದು ನಡೆದ ಸಾಮೂಹಿಕ ವಿವಾಹದಲ್ಲಿಯೇ 6 ಬಾಲ್ಯವಿವಾಹ ಪ್ರಕರಣ ಪತ್ತೆ ಮಾಡಲಾಗಿದೆ. ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.