ಹಾಸನ [ಡಿ.22]:  ಹಾಡಹಗಲೇ ನಗರದ ಜಿಲ್ಲಾ ಸಹಕಾರ ಬ್ಯಾಂಕ್‌ (ಎಚ್‌ಡಿಸಿಸಿ) ಬ್ಯಾಂಕ್‌ನ ಎಟಿಎಂನಲ್ಲಿ ರೈತರ ಹಣ ದೋಚುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.

ಆ ಬ್ಯಾಂಕ್‌ನ ಎಟಿಎಂನಲ್ಲಿ ಬೆಳಗ್ಗೆ ಸುಮಾರು 10ಕ್ಕೆ ಈ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹಾಸನ ತಾಲೂಕಿನ ಕಂಚನಹಳ್ಳಿ ಗ್ರಾಮದ ಅರುಣ್‌ (30) ಎಂಬಾತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ವಿವರ:  ಎಟಿಎಂ ಕಾರ್ಡ್‌ ಬಳಸಿ ಹಣ ತೆಗೆದುಕೊಳ್ಳುವುದು ಅನೇಕ ರೈತರಿಗೆ ತಿಳಿಯದೇ ಇರುವುದನ್ನೆ ಬಂಡವಾಳ ಮಾಡಿಕೊಂಡು ಆರೋಪಿ ಅರುಣ ಹಿಂದಿನಿಂದ ಹಣ ಲಪಾಟಾಯಿಸುತ್ತಿದ್ದ. ರೈತರು ಹೇಳಿದ್ದಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡುತ್ತಿದ್ದ. ರೈತರು ನಾವು ಇಷ್ಟುಹಣ ಡ್ರಾ ಮಾಡಿರಲಿಲ್ಲ. ಆದರೆ, ಅಕೌಂಟ್‌ನಲ್ಲಿ ಹಣ ಕಡಿಮೆ ಇದೆ ಎಂದು ರೈತರು ಬ್ಯಾಂಕ್‌ಗೆ ದೂರು ನೀಡಿದ್ದರು.

ಈ ದೂರಿನಂತೆ ಬ್ಯಾಂಕ್‌ನ ಅಧಿಕಾರಿಗಳು ಎಟಿಎಂನೊಳಗಿದ್ದ ಸಿಸಿ ಕ್ಯಾಮೆರಾ ಮೂಲಕ ಪತ್ತೆಹಚ್ಚಲು ಬ್ಯಾಂಕ್‌ ಸಿಬ್ಬಂದಿ ಹಲವು ಬಾರಿ ಯತಿಸಿದ್ದರು. ಆದರೆ, ಆರೋಪಿ ಸಿಕ್ಕಿರಲಿಲ್ಲ. ಆದರೆ, ಶನಿವಾರ ಎಚ್‌ಡಿಸಿಸಿ ಬ್ಯಾಂಕ್‌ ಮುಖ್ಯ ಕಚೇರಿ ಆವರಣದ ಎಟಿಎಂ ಬಳಿ ಎಂದಿನಂತೆ ರೈತರಿಂದ ಅರುಣ ಎಟಿಎಂ ಕಾರ್ಡ್‌ ತೆಗೆದುಕೊಳ್ಳುತ್ತಿದ್ದದ್ದು ಬ್ಯಾಂಕ್‌ನ ಸ್ವಾಗತಕಾರ ಆನಂದ್‌ ಗೊತ್ತಾಯಿತು.

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ : ಯುವಕ ಅರೆಸ್ಟ್...

ಕೂಡಲೇ, ಆನಂದ್‌ ಅರುಣನನ್ನು ಹಿಡಿಯಲು ಹೋದಾಗ ಹೆದರಿ ಓಡಿ ಹೋಗಲು ಯತ್ನಿಸಿದ. ಆಗ ಸಾರ್ವಜನಿಕರು ಸೇರಿ ಅರುಣನಿಗೆ ಗೂಸ ನೀಡಿ ಆರೋಪಿ ಅರುಣ್‌ ನನ್ನು ನಗರಠಾಣೆಗೆ ಕರೆದೊಯ್ದ ಪೊಲೀಸರಿಗೆ ಒಪ್ಪಿಸಿದರು.

ಅಮಾಯಕ ರೈತರನ್ನು ಟಾರ್ಗೆಟ್‌ ಮಾಡಿ ಹಣ ಡ್ರಾ ಮಾಡುತ್ತಿದ್ದ ಇವನು ಈ ಹಿಂದೆ 4-5 ಬಾರಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದು ಶನಿವಾರ ಇದೇ ರೀತಿ ಕೃತ್ಯ ಎಸಗಲು ಮುಂದಾಗಿದ್ದ. ಅರುಣ್‌ ಈ ಹಿಂದೆ ಆರ್ಮಿಯಲ್ಲಿ ಸೇವೆ ಸಲ್ಲಿಸಿ ಪ್ರೇಮ ವಿವಾಹ ವಾಗಿದ್ದ. ನಂತರ ಸೈನಿಕ ಕೆಲಸವನ್ನು ಎರಡು ವರ್ಷದ ಹಿಂದೆ ಬಿಟ್ಟು ಬಂದಿದ್ದ ಎಂದು ತಿಳಿದು ಬಂದಿದೆ.

ಬೇರೆ ಕಡೆನೂ ಕೃತ್ಯ ಎಸಗಿದ್ದ

ಹಾಸನ ನಗರದ ಕಟ್ಟಿನಮಾರುಕಟ್ಟೆಬಳಿ ತಮ್ಮ ಬ್ಯಾಂಕ್‌ನ ಎಟಿಎಂನಲ್ಲಿ ಇದೇ ರೀತಿ ಮುಗ್ದ ರೈತರನ್ನು ವಂಚನೆ ಮಾಡಿದ್ದ. ಈ ಬಗ್ಗೆ ರೈತರು ದೂರು ನೀಡಿದ್ದರು. ನಂತರ ಸಿಸಿಟಿವಿ ಪುಟೆಜ್‌ನಲ್ಲಿ ತೀವ್ರವಾಗಿ ತಪಾಸಣೆ ಮಾಡಲು ಸಿಬ್ಬಂದಿಗೆ ಸೂಚಿಸಲಾಯಿತು. ಆಗ ಅರುಣ ಅನೇಕ ಬಾರಿ ಎಟಿಎಂನಲ್ಲಿ ಇರುವುದು ಕಂಡು ಬಂತು. ನಂತರ ಎಟಿಎಂ ಬಳಿಯೇ ಸಿಬ್ಬಂದಿ ನಿಯೋಜಿಸಿ ಅರುಣನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಲಾಯಿತು ಎಂದು ಎಚ್‌ಡಿಸಿಸಿ ಬ್ಯಾಂಕ್‌ ಉಪ ವ್ಯವಸ್ಥಾಪಕ ಬಿ.ಎಸ್‌.ರವಿ ಮತ್ತು ನಿರೀಕ್ಷಕ ಎಚ್‌.ಡಿ. ಗುರುದೇವ್‌ ತಿಳಿಸಿದ್ದಾರೆ.

ದುಡಿಯದ ಸೋಮಾರಿ

ಸೈನಿಕ ಕೆಲಸ ಬಿಟ್ಟು ಬಂದ ನಂತರದಲ್ಲಿ ದುಡಿಯದೇ ಸೋಮಾರಿಯಾಗಿದ್ದ ಆತ ಮದ್ಯ ವ್ಯಸನಿಯಾಗಿದ್ದಲ್ಲದೇ, ದುಂದುವೆಚ್ಚ ಮಾಡುವ ಪ್ರವೃತ್ತಿ ಹೊಂದಿದ್ದ. ಇದಕ್ಕಾಗಿ ಮುಗ್ದ ರೈತರನ್ನು ವಂಚಿಸುವ ತಂತ್ರಗಾರಿಕೆ ರೂಪಿಸಿಕೊಂಡಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.