ಕೊಟ್ಟೂರು(ಮೇ.24): ಕೊರೋನಾ ರೋಗ ಭೀತಿಯ ಈ ಸಂಕಷ್ಟದ ದಿನಗಳಲ್ಲಿ ಉದ್ಯೋಗ ಬಯಸಿ ಬರುವ ರೈತರು ಕಾರ್ಮಿಕರಿಗೆ ಕೂಲಿ ಕೆಲಸ ನೀಡಲೇಬೇಕು. ಈ ಹಂತದಲ್ಲಿ ಯಾವುದೇ ಸಬೂಬುನ್ನು ಗ್ರಾಮ ಪಂಚಾಯಿತಿಯ ಪಿಡಿಒ ಮತ್ತಿತರರು ನೀಡುವಂತಿಲ್ಲ ಎಂದು ಕೊಟ್ಟೂರು ತಾಲೂಕು ಪಂಚಾಯಿತಿ ಪ್ರಭಾರಿ ಸಹಾಯಕ ನಿರ್ದೇಶಕ ಕೆಂಚಪ್ಪ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಪಿಡಿಒ, ಕಾಯಕ ಕಾರ್ಯಕರ್ತರು ಮತ್ತಿತರ ಸಿಬ್ಬಂದಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಲಾಭವನ್ನು ಎಲ್ಲ ಗ್ರಾಮೀಣ ಕೂಲಿಕಾರರಿಗೆ ಕಲ್ಪಿಸಬೇಕು. ಗರಿಷ್ಠ 50 ಕೂಲಿಕಾರರ ಒಂದೊಂದು ಗುಂಪುಗಳನ್ನಾಗಿ ವಿಂಗಡಿಸಿ ನಿರಂತರ ಕೆಲಸ ನೀಡಬೇಕು ಎಂದು ತಾಕೀತು ಮಾಡಿದರು.
ಪ್ರತಿಯೊಂದು ಕೂಲಿಕಾರರ ಗುಂಪಿನಲ್ಲಿ ಒಬ್ಬನನ್ನು ಕಾಯಕ ಬಂಧು (ಮೇಟಿ) ಎಂದು ಗುರುತಿಸಿ ತಮ್ಮ ಗುಂಪಿನಲ್ಲಿ ಬರುವ ಎಲ್ಲರಿಗೂ ಸಮಾನ ಕೂಲಿ ಕೆಲಸ ನೀಡಬೇಕು ಎಂದು ಸಲಹೆ ನೀಡಿದರು.

ಲಾಕ್‌ಡೌನ್‌ ಎಫೆಕ್ಟ್‌: ಹಗರಿಬೊಮ್ಮನಹಳ್ಳಿ ಬಸ್‌ ಡಿಪೋಗೆ 3.13 ಕೋಟಿ ನಷ್ಟ

ಕೂಲಿ ಕಾರ್ಮಿಕರು ಕನಿಷ್ಠ 8ನೇ ತರಗತಿ ಓದಿದವರಾಗಿದ್ದು, ಕೆಲಸ ಮಾಡಿದ ಮಾನವ ದಿನಗಳ ಸಂಖ್ಯೆಗನುಗುಣವಾಗಿ ಕೂಲಿ ಹಣವನ್ನು ಕರಾರು ವಕ್ಕಾಗಿ ಪಡೆಯುವತ್ತ ಮುಂದಾಗಬೇಕು. 60 ವರ್ಷ ಮೇಲ್ಪಟ್ಟಮತ್ತು ಅಂಗವಿಕಲ ಕೂಲಿಕಾರರಿಗೆ ಕೆಲಸಗಳಲ್ಲಿ ವಿನಾಯಿತಿ ನೀಡಿ ಅವರಿಗೆ ಸೂಕ್ತ ಹಣವನ್ನು ತಪ್ಪದೆ ನೀಡಬೇಕು.

ಕೂಲಿ ಕೆಲಸ ನೀಡುವಾಗ ಮಾಡಬೇಕಾದ ಕೆಲಸದ ಮಾರ್ಕಿಂಗ್‌ ಮಾಡಲು ಮೇಟಿಗಳು ನೆರವು ನೀಡಬೇಕು. ಕೆಲಸದ ಪ್ರಮಾಣದ ಅನುಸಾರವಾಗಿ ಕೂಲಿಕಾರರಿಗೆ ತಿಳಿವಳಿಕೆ ನೀಡಬೇಕು. ಎನ್‌.ಎಂ.ಆರ್‌. ಅನುಗುಣವಾಗಿ ಹಾಜರಾತಿ ಪಡೆಯಬೇಕು. ಕೂಲಿಯ ಸ್ಥಳದಲ್ಲಿ ನೀರು, ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯಗಳು ಕೂಲಿಕಾರರಿಗೆ ಸಿಗುವಂತೆ ವ್ಯವಸ್ಥೆ ಕೈಗೊಳ್ಳಬೇಕು. ಕಡ್ಡಾ​ಯ​ವಾಗಿ ರೋಜಗಾರ್‌ ದಿನ ಆಚರಿಸಬೇಕು ಎಂದು ಕರೆ ನೀಡಿದರು. ಪಿಡಿಒಗಳಾದ ಮಾರುತೇಶ, ಪುಷ್ಪಲತಾ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಾಪಂ ವ್ಯವಸ್ಥಾಪಕ ಪ್ರಾಣೇಶ, ಶ್ರೀಕಾಂತ ಮತ್ತಿತರರು ಸಲಹೆ ಸೂಚನೆ ನೀಡಿದರು.