ಬೆಳಗಾವಿಗೂ ಕಾಲಿಟ್ಟ 'ಅಗ್ನಿಪಥ್' ಜ್ವಾಲೆ: ಜೂ.20ರಂದು ಗಡಿ ಜಿಲ್ಲೆ ಬಂದ್ ಆಗುತ್ತಾ?
* ಅಗ್ನಿಪಥ್ ಯೋಜನೆ ವಿರೋಧಿಸಿ ಬೀದಿಗಿಳಿದ ಸೇನಾ ಆಕಾಂಕ್ಷಿಗಳು
* ಪ್ರತಿಭಟನಾನಿರತರ ಪರ ನಿಂತ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
* ವಿಪಕ್ಷಗಳ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ ಅನಿಲ್ ಬೆನಕೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ
ಬೆಳಗಾವಿ(ಜೂ.18): ಕೇಂದ್ರ ಸರ್ಕಾರದ 'ಅಗ್ನಿಪಥ್' ಯೋಜನೆ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಹೊತ್ತಿ ಉರಿಯುತ್ತಿದ್ದ ಜ್ವಾಲೆ ಈಗ ಗಡಿ ಜಿಲ್ಲೆ ಬೆಳಗಾವಿಗೂ ವ್ಯಾಪಿಸಿದೆ. ಅಗ್ನಿಪಥ್ ಜಾರಿಗೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ವಿರುದ್ಧ ಬೆಳಗಾವಿಯಲ್ಲಿ ಸೇನೆ ಸೇರಲು ಬಯಸಿದ ಆಕಾಂಕ್ಷಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅಗ್ನಿಪಥ್ ಕಿಚ್ಚು ಬೆಳಗಾವಿಗೂ ವ್ಯಾಪಿಸಿದೆ.
ಜಿಲ್ಲೆಯ ಗೋಕಾಕ, ಖಾನಾಪುರ, ನಿಪ್ಪಾಣಿಯಲ್ಲಿ ಪ್ರತಿಭಟನೆ ಕಾವು ಇಂದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅಗ್ನಿಪಥ್ ಜಾರಿ ಬೇಡವೇ ಬೇಡ ಎಂದು ಸೇನಾಕಾಂಕ್ಷಿಗಳು ಒತ್ತಾಯಿಸಿದರು. ಗೋಕಾಕನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಖಾನಾಪುರದಲ್ಲಿ ಕೂಡ ನೂರಾರು ಯುವಕರು ನಡೆಸುತ್ತಿದ್ದ ಧರಣಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಸಾಥ್ ಕೊಟ್ಟರು. ಖಾನಾಪುರದ ಮಲಪ್ರಭಾ ಕ್ರೀಡಾಂಗಣದಲ್ಲಿ ಸೇನೆ ಸೇರಲು ಬಯಸಿದ ನೂರಾರು ಯುವಕರು ಜಮಾವಣೆಗೊಂಡಿದ್ದರು.ಪ್ರತಿಭಟನಾ ನಿರತ ಯುವಕರ ಉದ್ದೇಶಿಸಿ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕದ ಗಡಿಯೊಳಗೆ ಮಹಾರಾಷ್ಟ್ರ ಸರ್ಕಾರ ನಾಮಫಲಕ: ಕನ್ನಡಿಗರ ಆಕ್ರೋಶ..!
'ಮೋದಿ ಸರ್ಕಾರ, ಬಿಜೆಪಿ ನಾಲಾಯಕ್ ಸರ್ಕಾರದಿಂದ ಯುವಕರ ಮೇಲೆ ಅನ್ಯಾಯ ಮಾಡುತ್ತಿದೆ. ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ಬೆಂಕಿ ಹೊತ್ತಿಕೊಂಡಿದ್ದು, ಇಂದು ನಮ್ಮ ತಾಲೂಕಿನಲ್ಲೂ ಈ ಕಿಚ್ಚು ಹೊತ್ತಿಕೊಂಡಿದೆ. ನಮ್ಮ ತಾಲೂಕಿನ ಎರಡು ಸಾವಿರ ಯುವಕರು ಸೇನೆ ಸೇರಿ ನಾಳೆ ಸೈನಿಕರಾಗಲು ಬಯಸಿದ್ರು. ಇಂದು ಅವರು ನಿರುದ್ಯೋಗಿಗಳಾಗುತ್ತಿದ್ದಾರೆ. ಹೀಗಾಗಿ ನಿಮಗೆ ಬೆಂಬಲ ಸೂಚಿಸಲು ನಾನು ಇಲ್ಲಿ ಬಂದಿದ್ದೇನೆ. ಅಗ್ನಿಪಥ್ ಯೋಜನೆಯಲ್ಲಿ ನಾವು ಏನೂ ರಾಜಕಾರಣ ಮಾಡ್ತಿಲ್ಲ. ಯಾವುದೇ ಪಕ್ಷ ಇಲ್ಲ, ಜಾತಿ ಇಲ್ಲ ಧರ್ಮ ಇಲ್ಲ. ಇಂದು ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನಾವೆಲ್ಲ ತೋರಿಸಬೇಕಿದೆ. ಯಾವ ಯುವಕರ ಕೈಯಲ್ಲಿ ತಲ್ವಾರ್ ನೀಡಿ ಹಿಂದೂತ್ವದ ಹೆಸರಲ್ಲಿ ಪ್ರಚೋದಿಸಿದರೋ ಇಂದು ಆ ಯುವಕರ ಮೇಲೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಯುವಕರ ಮೇಲೆ ಅಷ್ಟೇ ಅಲ್ಲ ಎಲ್ಲರಿಗೂ ಮೋದಿ ಸರ್ಕಾರ ಅನ್ಯಾಯ ಮಾಡುತ್ತಿದ್ದು, ಕೇವಲ ಸ್ಲೋಗನ್‌ಗಳಿಗೆ ಕೇಂದ್ರ ಸರ್ಕಾರ ಸೀಮಿತವಾಗಿದೆ. ಉದ್ಯೋಗ ನೀಡ್ತೀವಿ, 15 ಲಕ್ಷ ಅಕೌಂಟ್‌ಗೆ ಹಾಕ್ತೀವಿ.ಬೇಟಿ ಬಚಾವೋ.. ಬೇಟಿ ಪಡಾವೋ ಈ ರೀತಿ ಘೋಷಣೆಗೆ ಕೇಂದ್ರ ಸರ್ಕಾರ ಸಿಮೀತವಾಗಿದೆ. ಅಗ್ನಿಪಥ್ ಯೋಜನೆಯಡಿ ಸೇವೆ ಸೇರಿ ನಾಲ್ಕು ವರ್ಷಗಳ ಬಳಿಕ ಸೇನೆ ಸೇರಿದ ಯುವಕರ ಪಾಡೇನು? ಎಂದು ಪ್ರಶ್ನಿಸಿದರು.
ಜೂನ್ 20ರಂದು ಖಾನಾಪುರ ಬಂದ್‌ಗೆ ಕರೆ
ತಹಶಿಲ್ದಾರ್ ಕಚೇರಿ ಎದುರಿನ ರಸ್ತೆಯಲ್ಲೇ ಶಾಸಕಿ ನಿಂಬಾಳ್ಕರ್ ಧರಣಿ ಕುಳಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಯುವಕರು ರಸ್ತೆ ಮಧ್ಯದಲ್ಲೇ ಡಿಪ್ಸ್ ಹೊಡೆದು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಬಳಿಕ ಸೇನಾ ನೇಮಕಾತಿ ಸಿಇಟಿ ಲಿಖಿತ ಪರೀಕ್ಷೆ ವಿಳಂಬ ಹಾಗೂ ಅಗ್ನಿಪಥ್ ಯೋಜನೆ ವಿರೋಧಿಸಿ ಖಾನಾಪುರ ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, 'ಅಗ್ನಿಪಥ್ ಯೋಜನೆ ವಿರೋಧಿಸಿ ಜೂನ್ 20ರಂದು ಖಾನಾಪುರ ಪಟ್ಟಣ ಬಂದ್‌ಗೆ ಕರೆ ನೀಡುವುದಾಗಿ ಘೋಷಿಸಿದರು.
'ಅಗ್ನಿಪಥ್ ಯೋಜನೆಯಿಂದ ಖಾನಾಪುರ ತಾಲೂಕಿನ 3 ಸಾವಿರ ಯುವಕರಿಗೆ ಅನ್ಯಾಯವಾಗುತ್ತಿದೆ. ಇಂದು ಇಲ್ಲಿ ದೌಹಿಕ, ವೈದ್ಯಕೀಯ ಪರೀಕ್ಷೆ ತೇರ್ಗಡೆಯಾದ ಯುವಕರು ಸೇರಿದ್ದಾರೆ. ಇವರು ಪರೀಕ್ಷೆ ಬರೆಯಲು ಕಾಯುತ್ತಿದ್ದಾರೆ. ಅಗ್ನಿಪಥ್ ಯೋಜನೆಯಿಂದ ಇಂದು ಕೆಲಸ ಸಿಗುತ್ತಿಲ್ಲ. ಅನ್ಯಾಯ ವಿರುದ್ಧ ಇಂದು ಎಲ್ಲ ಯುವಕರು ಹೋರಾಟ ಮಾಡಿದ್ದಾರೆ. ಈ ಯುವಕರ ತಾಯಿಯಾಗಿ, ಅಕ್ಕಳಾಗಿ ಇಂದು ಅವರ ಜೊತೆ ನಿಲ್ಲುತ್ತೇನೆ. ನಮ್ಮ ಮಕ್ಕಳಿಗೆ ಕೆಲಸ ಸಿಗಬೇಕು ಅಂತಾ ಒತ್ತಾಯ ಮಾಡ್ತೇನೆ' ಎಂದರು.
ಎಸಿಬಿ ದಾಳಿ: ಬಚ್ಚಲಲ್ಲಿ ಹಣ ಬಚ್ಚಿಟ್ಟಿದ್ದ ಭ್ರಷ್ಟ ಅಧಿಕಾರಿ..!
'ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರು'
ಸೇನಾ ಆಕಾಂಕ್ಷಿಗಳು ಇತ್ತ ಪ್ರತಿಭಟನೆ ನಡೆಸುತ್ತಿದ್ರೆ ಬಿಜೆಪಿ ನಾಯಕರು ಅಲರ್ಟ್ ಆದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಒಳ್ಳೆಯ ಯೋಜನೆ ಜಾರಿಗೆಗೆ ಕಾಂಗ್ರೆಸ್ ನಾಯಕರು ಅವಹೇಳನ ಮಾಡ್ತಿದ್ದಾರೆ. ಸಾಲದೆಂಬಂತೆ ಯುವಕರನ್ನು ಪ್ರಚೋದಿಸುತ್ತಿದ್ದಾರೆ ಎಂದು ಶಾಸಕ ಅನಿಲ್ ಬೆನಕೆ ಆರೋಪಿಸಿದರು. ವಿರೋಧ ಪಕ್ಷದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಅನಿಲ್ ಬೆನಕೆ, 'ಯುವಕರಿಗೆ ಕೆಲವರು ಪ್ರಚೋದನೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಗ್ನಿಪಥ್ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ಸಿದ್ಧವಾಗಿದೆ. ದೇಶದ ರಕ್ಷಣೆ ಮಾಡುವ ವಿಷಯದಲ್ಲಿ ವಿರೋಧ ಪಕ್ಷದವರು ವಿರೋಧ ಮಾಡುವುದು ಸರಿಯಲ್ಲ. ಇಂತಹ ಒಳ್ಳೆಯ ಯೋಜನೆಯನ್ನು ವಿರೋಧ ಪಕ್ಷದವರು ಅವಹೇಳನ ಮಾಡುವುದು ನಾಚಿಕೆಗೇಡಿತನ' ಎಂದು ಆಕ್ರೋಶ ಹೊರಹಾಕಿದರು.
ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಸೇನಾಕಾಂಕ್ಷಿಗಳು ಜೂನ್ 20ರಂದು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಅನಾಮಧೇಯ ಸಂದೇಶ ಯುವ ಸಮೂಹಕ್ಕೆ ವಾಟ್ಸಪ್ ಮೂಲಕ ತಲುಪಿಸಲಾಗುತ್ತಿದ್ದು. ಇದು ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ್ ಆಗಿದ್ದು ಬೆಳಗಾವಿ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ.